ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಪಂಚ ಸಂಸ್ಕಾರ

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

<< ಪರಿಚಯ

ಶ್ರೀವೈಷ್ಣವರಾಗುವುದು ಹೇಗೆ?

ಪುರ್ವಾಚಾರ್ಯರುಗಳು ಹೇಳಿರುವ ಪ್ರಕಾರ ಶ್ರೀವೈಷ್ಣವರಾಗಲು ಒಂದು ವಿಧಾನವಿದೆ – ಅದೇ ಪಂಚ ಸಂಸ್ಕಾರ (ಸಂಪ್ರದಾಯಕ್ಕೆ ಉಪಕ್ರಮ).

ಸಂಸ್ಕಾರವೆಂದರೆ ಶುದ್ಧೀಕರಿಸುವ ಪ್ರಕ್ರಿಯೆ. ಇದು ಸಂಪ್ರದಾಯದಲ್ಲಿ ತೊಡಗಿಸಿಕೊಳ್ಳಲು

ಅನರ್ಹರಾದವರನ್ನು ಅರ್ಹತೆ ಹೊ೦ದಿದವರನ್ನಾಗಿ ಮಾಡುವ ಪ್ರಕ್ರಿಯೆ. ಈ ಪ್ರಕ್ರಿಯೆಯ ಮೂಲಕವೇ ಮೊದಲಿಗೆ ಶ್ರೀವೈಷ್ಣವರಾಗುತ್ತಾರೆ.  ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿ ಬ್ರಹ್ಮ ಯಜ್ಞದ ಮೂಲಕ ಹೇಗೆ ಸುಲಭವಾಗಿ ಬ್ರಾಹ್ಮಣರಾಗಬಹುದೋ, ಹಾಗೆಯೇ ಶ್ರೀವೈಷ್ಣವ ಕುಟುಂಬದಲ್ಲಿ ಹುಟ್ಟಿದವರಿಗೂ ಪಂಚ ಸಂಸ್ಕಾರಗಳ ಮೂಲಕ  ಶ್ರೀವೈಷ್ಣವರಾಗುವುದು ಬಹಳ ಸುಲಭ. ಆದರೆ ಬ್ರಾಹ್ಮಣ್ಯಕ್ಕಿಂತಲೂ ಶ್ರೀವೈಷ್ಣವತ್ತ್ವಕ್ಕಿರುವ ವಿಶೇಷವೇನೆಂದರೆ ಶ್ರೀವೈಷ್ಣವರಾಗಲು ಶ್ರೀವೈಷ್ಣವ ಕುಟಂಬದಲ್ಲೇ ಹುಟ್ಟಬೇಕೆಂದಿಲ್ಲ. ಏಕೆಂದರೆ, ಶ್ರೀವೈಷ್ಣವತ್ತ್ವವು ಆತ್ಮಕ್ಕೆ ಸಂಬಂಧಿಸಿರುವುದು. ಬ್ರಾಹ್ಮಣ್ಯವು ದೇಹಕ್ಕೆ/ಶರೀರಕ್ಕೆ ಸಂಬಂಧಿಸಿರುವುದು. ಶ್ರೀವೈಷ್ಣವರಲ್ಲಿ ಯಾವುದೇ ರೀತಿಯಲ್ಲಿ (ಜಾತಿ, ನಂಬಿಕೆ, ರಾಷ್ಟ್ರೀಯತೆ, ವರ್ಗ, ಸಿರಿವಂತಿಕೆ, ಇತ್ಯಾದಿ) ಭೇದ ಇರುವುದಿಲ್ಲ. ಯಾರೆಲ್ಲ ಮುಕ್ತಿ/ಮೋಕ್ಷದ ಕಡೆ ಹೋಗಲು ಹಂಬಲಿಸುತ್ತಾರೋ, ಅಂತಹವರೆಲ್ಲಾ ಶ್ರೀವೈಷ್ಣವತ್ತ್ವವನ್ನು ಸ್ವೀಕರಿಸಬಹುದು. ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವುದು – ಶ್ರೀವೈಷ್ಣವರಾದಮೇಲೆ ದೇವತಾಂತರಗಳ  (ಭಗವಂತನಿಂದ ನಿಯಂತ್ರಿಸಲ್ಪಡುವ ಬ್ರಹ್ಮ, ಶಿವ, ದುರ್ಗಾ, ಸುಬ್ರಹ್ಮಣ್ಯ, ಇಂದ್ರ, ವರುಣ,ಇತ್ಯಾದಿಗಳ) ಜೊತೆಗೆ ಮತ್ತು ಅಂತಹ ದೇವತಾಂತರ-ಸಂಬಂಧಿಗಳ ಜೊತೆಗಿನ  ಸಂಭಂದದಿಂದ ದೂರವಿರಬೇಕು.

ಪಂಚ ಸಂಸ್ಕಾರ

ಪಂಚ ಸಂಸ್ಕಾರ ಅಥವಾ ಸಮಾಶ್ರಯಣವು ಒಬ್ಬ ಚೇತನನನ್ನು ಶ್ರೀವೈಷ್ಣವನಾಗುವುದಕ್ಕೆ ಅರ್ಹತೆಯುಳ್ಳವನಾಗಿ ಸಿದ್ಧಪಡಿಸಲು ಶಾಸ್ತ್ರದಲ್ಲಿ ವಿವರಿಸಲ್ಪಟ್ಟಿರುವ ಪ್ರಕ್ರಿಯೆ. “ತಾಪ: ಪುಂಡ್ರ: ತಥಾ ನಾಮ ಮಂತ್ರೋ ಯಾಗಶ್ಚ ಪಂಚಮ:” ಎಂಬ ವಾಕ್ಯವು ಪಂಚಸಂಸ್ಕಾರದಲ್ಲಿರುವ ಐದು ವಿಧಿಗಳನ್ನು ವಿವರಿಸುತ್ತದೆ.

ಪಂಚಸಂಸ್ಕಾರದ ಐದು ವಿಧಿಗಳು ಈ ಕೆಳಕಂಡಂತೆ:

  • ತಾಪ: (ಬಿಸಿ) – ಶಂಖ ಚಕ್ರ ಲಾಂಛನ – ತೋಳುಗಳ ಮೇಲೆ ಶಂಖ ಮತ್ತು ಚಕ್ರಗಳ ಮುದ್ರಾಧಾರಣ. ಇದು ನಮ್ಮನ್ನು ಭಗವಂತನ ಸ್ವತ್ತು ಎಂಬುದಾಗಿ ಗುರುತಿಸುತ್ತದೆ. ಪಾತ್ರೆಗಳ ಮೇಲೆ ಹೇಗೆ ಅವುಗಳ ಒಡೆಯನ ಲಾಂಛನಗಳು ಮುದ್ರಿಸಲ್ಪಡುತ್ತವೋ, ಹಾಗೆಯೇ ನಮ್ಮ ತೋಳುಗಳ ಮೇಲೆ ಭಗವಂತನ ಲಾಂಛನಗಳನ್ನು ಒತ್ತಿಕೊಳ್ಳುವುದೇ ತಾಪಸಂಸ್ಕಾರ.
  • ಪುಂಡ್ರ: (ಚಿಹ್ನೆ) – ದ್ವಾದಶ ಊರ್ಧ್ವಪುಂಡ್ರ ಧಾರಣೆ – ದೇಹದ ಹನ್ನೆರಡು ಸ್ಥಳಗಳಲ್ಲಿ ಊರ್ಧ್ವಪುಂಡ್ರಗಳನ್ನು (ತಿರುಮಣ್ ಶ್ರೀಚೂರ್ಣ ರೇಖೆಗಳನ್ನು) ಧರಿಸುವುದು.
  • ನಾಮ (ಹೆಸರು) – ದಾಸ್ಯ ನಾಮ – ಆಚಾರ್ಯರು ಕೊಡುವ ಹೊಸದೊಂದು ದಾಸ್ಯ ನಾಮ (ರಾಮಾನುಜ ದಾಸನ್, ಮಧುರಕವಿ ದಾಸನ್, ಶ್ರಿವೈಷ್ಣವ ದಾಸನ್ ಇತ್ಯಾದಿ).
  • ಮಂತ್ರಃ (ಮಂತ್ರ ಉಪದೇಶ) – ಆಚಾರ್ಯರಿಂದ ರಹಸ್ಯ ಮಂತ್ರೋಪದೇಶವನ್ನು ಪಡೆದುಕೊಳ್ಳುವುದು. ಮಂತ್ರವೆಂದರೆ ಜಪಿಸುವವರನ್ನು ಕಷ್ಟಗಳಿಂದ ಪಾರುಮಾಡುವ ವಸ್ತು. ಆಚಾರ್ಯರು ಉಪದೇಶಿಸುವ ತಿರುಮಂತ್ರ, ದ್ವಯ  ಮತ್ತು ಚರಮ ಶ್ಲೋಕಗಳು ನಮ್ಮನ್ನು ಸಂಸಾರದಿಂದ ಪಾರುಮಾಡುತ್ತವೆ.
  • ಯಾಗಃ (ದೇವ ಪೂಜಾ) ನಿತ್ಯವೂ ಮನೆಯಲ್ಲಿ ಭಗವಂತನಿಗೆ ತಿರುವಾರಾಧನೆಯನ್ನು ಮಾಡಲು ಕಲಿತುಕೊಳ್ಳುವುದು.

ಪೂರ್ವಾಗತ್ಯಗಳು:

ಆಕಿಂಚನ್ಯ (ಸರ್ವಥಾ ಅಸಮರ್ಥತೆಯ ಅನುಮೋದನೆ) ಮತ್ತು ಅನನ್ಯ ಗತಿತ್ವ (ಬೇರೆ ಗತಿಯಿಲ್ಲದಿರುವಿಕೆ) – ಇವೆರಡೂ ನಮಗೆ ಭಗವಂತನಲ್ಲಿ ಶರಣಾಗಲು ಹೊಂದಿರಲೇಬೇಕಾದಂತಹ  ಬಹಳ ಮುಖ್ಯ ಗುಣಗಳು. ಇವೆರಡೂ ನಮ್ಮಲ್ಲಿದ್ದಾಗ ಮಾತ್ರ ಭಗವಂತನಲ್ಲಿ ಪರಿಪೂರ್ಣವಾಗಿ ಶರಣು ಹೊಂದಿ ಅವನಿಂದ ರಕ್ಷಿಸಲ್ಪಡುವುದು ಸಾಧ್ಯವಾಗುವುದು.

ಪಂಚ ಸಂಸ್ಕಾರದ ಧ್ಯೇಯ/ಗುರಿ:

  • ಶಾಸ್ತ್ರವು “ತತ್ತ್ವಜ್ಞಾನಾತ್ ಮೋಕ್ಷಲಾಭಃ” ಎಂದಿರುವಂತೆ ಬ್ರಹ್ಮಜ್ಞಾನ ಪಡೆದುಕೊಳ್ಳುವುದರ ಮೂಲಕವೇ ಮೋಕ್ಷ ದಕ್ಕಿಸಿಕೊಳ್ಳುವುದು ಸಾಧ್ಯ. ಆಚಾರ್ಯರಿಂದ ಅರ್ಥಪಂಚಕದ (ಬ್ರಹ್ಮ – ಭಗವಂತ, ಜೀವಾತ್ಮಾ – ಚೇತನ, ಉಪಾಯ – ಮಾರ್ಗ, ಉಪೇಯ – ಫಲ, ವಿರೋಧಿ – ಫಲಕ್ಕಿರುವ ಅಡಚಣೆ) ಬಗೆಗೆ ಅಮೂಲ್ಯ ಜ್ಞಾನವನ್ನು ಮಂತ್ರೋಪದೇಶದ ಮೂಲಕ ಪಡೆದುಕೊಳ್ಳುವುದರಿಂದ ನಮಗೆ ನಿತ್ಯವಿಭೂತಿಯಲ್ಲಿ (ಶ್ರಿಯಃಪತಿಯ ದಿವ್ಯಧಾಮದಲ್ಲಿ) ಕೈಂಕರ್ಯ ಮಾಡುವ ನಮ್ಮ ಅಂತಿಮ ಗುರಿಗೆ ಯೋಗ್ಯತೆಯುಂಟಾಗುತ್ತದೆ. ಅಲ್ಲದೆ, ನಾವು ಭಗವಂತನ ಮೇಲೆ ಪರಿಪೂರ್ಣವಾಗಿ ಅವಲಂಬಿಸಿದ್ದೇವೆ ಎಂಬುದನ್ನು ಅರಿತುಕೊಳ್ಳುವುದೇ  ನಿಜವಾದ ಜ್ಞಾನ.
  • ಈ ಜನ್ಮದಲ್ಲಿ ಆಚಾರ್ಯರ ಮತ್ತು ಶ್ರೀವೈಷ್ಣವರ ಕೈಂಕರ್ಯವನ್ನು ಅನೇಕವಿಧವಾಗಿ ಮಾಡುವುದು, ಮತ್ತು ಮನೆಗಳಲ್ಲಿ ತಿರುವಾರಾಧನೆಗಳ ಮೂಲಕವೂ, ದಿವ್ಯದೇಶಗಳಲ್ಲಿ ಇತರ ಕೈಂಕರ್ಯಗಳ ಮೂಲಕವೂ ಅರ್ಚಾವತಾರದಲ್ಲಿರುವ ಭಗವಂತನ ಕೈಂಕರ್ಯ ಮಾಡುವುದು.
  • ಈ ಮಹತ್ತರವಾದ ಸಂದೇಶವನ್ನು ಇತರರಿಗೆ ತಿಳಿಸಿ, ಅವರೂ ಆಧ್ಯಾತ್ಮಿಕವಾಗಿ ಇದರ ಮೂಲಕ ಉಪಯೋಗ ಪಡೆದುಕೊಳ್ಳಲು ಸಹಾಯ ಮಾಡುವುದು.  ಶ್ರೀ ರಾಮಾನುಜರ ಆದೇಶಗಳಲ್ಲಿ ಪ್ರಮುಖವಾದದ್ದು ಶ್ರೀ ವೈಷ್ಣವರು ಮೊದಲು ಶ್ರೀ ಭಾಷ್ಯ, ತಿರುವಾಯ್‌ಮೊೞಿಗಳನ್ನು ಕಲಿತು, ಅದನ್ನು ಬೇರೆಯವರಿಗೂ ಕಲಿಸಿಕೊಡಬೇಕು ಎಂಬುದೇ ಆಗಿದೆ.

ಇಲ್ಲಿ ಆಚಾರ್ಯರು ಜೀವಾತ್ಮ-ಪರಮಾತ್ಮರುಗಳನ್ನು ಒಂದುಗೂಡಿಸುತ್ತಾರೆ. ಸಾಧಾರಣವಾಗಿ ಶ್ರೀವೈಷ್ಣವರು ಪ್ರಪನ್ನರೆಂದು ಕರೆಯಲ್ಪಟ್ಟರೂ, ಶ್ರೀ ರಾಮಾನುಜರು ಮತ್ತು ಎಲ್ಲಾ ಪೂರ್ವಾಚಾರ್ಯರುಗಳೂ ನಾವು ಆಚಾರ್ಯನಿಷ್ಠರೆಂಬುದನ್ನು ಸ್ಪಷ್ಟವಾಗಿ ತೋರಿಕೊಟ್ಟಿದ್ದಾರೆ. ಎಂದರೆ, ನಾವು ಎಲ್ಲದಕ್ಕೂ ಆಚಾರ್ಯರನ್ನೇ ಸಂಪೂರ್ಣವಾಗಿ ಅವಲಂಬಿಸುವವರು ಎಂದರ್ಥ. ಈ ಪಂಚ ಸಂಸ್ಕಾರದಿಂದಲೇ ಆತ್ಮಕ್ಕೆ ನಿಜವಾದ ಜನನ ಎಂದು ಪರಿಗಣಿಸಲ್ಪಡುತ್ತದೆ. ಏಕೆಂದರೆ, ಪಂಚ ಸಂಸ್ಕಾರದ ಮೂಲಕವೇ ಜೀವಾತ್ಮ ತನ್ನ ಸ್ವರೂಪವನ್ನರಿತುಕೊಂಡು ಭಗವಂತನಲ್ಲಿ ಶರಣುಹೊಂದುವುದು. ಜೀವಾತ್ಮ-ಪರಮಾತ್ಮರುಗಳ ನಡುವಣ ಈ ಬೆಸುಗೆಯು ಪತಿ(ಪರಮಾತ್ಮ)-ಪತ್ನಿ(ಜೀವಾತ್ಮ) ಸಂಬಂಧದಂತೆ ಪವಿತ್ರವಾದುದರಿಂದಲೇ ಅನ್ಯ ದೇವತೆಗಳ ಸಂಬಂಧ ಕೂಡದೆಂಬುದಾಗಿ ಒತ್ತಿ ಹೇಳಲ್ಪಡುತ್ತದೆ.

ಆದ್ದರಿಂದ, ಮೇಲೆ ಹೇಳಿರುವಂತೆ ಈ ಸಂಸಾರವನ್ನು ತ್ಯಜಿಸಿ ಪರಮಪದಕ್ಕೆ ತೆರಳಿ ಶ್ರ‍ಿಯಃಪತಿಗೆ ನಿರಂತರ ಕೈಂಕರ್ಯವನ್ನು ಮಾಡುವುದೇ ಶ್ರೀವೈಷ್ಣವತ್ತ್ವದ ಮೂಲಸಿದ್ಧಾಂತ.

ಯಾರು ಪಂಚ ಸಂಸ್ಕಾರ ಮಾಡಬಹುದು?

ಶ್ರೀ ವೈಷ್ಣವತ್ತ್ವವು ಒಂದು ಚಿರಂತನವಾದ ಸಿದ್ಧಾಂತವಾದರೂ (ಇದು ಕ್ಷೀಣವಾದ ಕಾಲದಲ್ಲಿ) ಇದನ್ನು ಪುನಃ ಜಗತ್ತಿನಲ್ಲಿ ನೆಲೆಯಾಗಿಸಿದ್ದು ಆಳ್ವಾರ್, ಆಚಾರ್ಯರುಗಳು. ಶ್ರೀ ರಾಮಾನುಜರು ಶಾಸ್ತ್ರಗಳನ್ನು ಅಧ್ಯಯನ ಮಾಡಿ, ನಾಥಮುನಿಗಳು, ಆಳವಂದಾರ್ ಮೊದಲಾದ ನಮ್ಮ ಪೂರ್ವಾಚಾರ್ಯರುಗಳ ಆದೇಶದಂತೆ ಕೆಲವು ಆಚರಣೆಗಳ ಮೂಲಕ ಸಿದ್ಧಾಂತವನ್ನು ಪುನಃ ಸ್ಥಾಪಿಸಿದರು. ಅವರು ೭೪ ಸಿಂಹಾಸನಾಧಿಪತಿಗಳನ್ನು (ಆಚಾರ್ಯಪುರುಷರನ್ನು) ಪ್ರತಿಷ್ಠಾಪಿಸಿ,  ಅವರೆಲ್ಲರಿಗೂ ಸಂಸಾರವನ್ನು ತ್ಯಜಿಸಿ ಮೋಕ್ಷಾನಂದಕ್ಕೆ ಹಂಬಲಿಸುವ ಜೀವನದ ಅಂತಿಮ ಗುರಿಯನ್ನು ಚೆನ್ನಾಗಿ ಅರಿತ ಜೀವರುಗಳಿಗೆ ಪಂಚಸಂಸ್ಕಾರವನ್ನು ಮಾಡುವ ಅಧಿಕಾರವನ್ನಿತ್ತರು. ಈ ೭೪ ಸಿಂಹಾಸನಾಧಿಪತಿಗಳ ದಿವ್ಯ  ಪರಂಪರೆಯಲ್ಲಿ  ಬರುವವರು ಪಂಚಸಂಸ್ಕಾರ ಮಾಡಲು ಪೂರ್ಣ ಅಧಿಕಾರಿಗಳು.

ಶ್ರೀ ರಾಮಾನುಜರು (ಮತ್ತು ಮಣವಾಳ ಮಾಮುನಿಗಳು) ಹಲವು ಮಠಗಳನ್ನು ಸ್ಥಾಪಿಸಿ, ಅದಕ್ಕೆ ಮುಖ್ಯಸ್ಥರಾಗಿ ಜೀಯರ್ ಸ್ವಾಮಿಗಳನ್ನು (ಸಂನ್ಯಾಸಿಗಳನ್ನು) ನೇಮಿಸಿ, ಅವರ ಪರಂಪರೆಯಲ್ಲಿ ಬರುವ ಎಲ್ಲಾ ಸ್ವಾಮಿಗಳಿಗೂ ಕೂಡ ಶ್ರೀವೈಷ್ಣವರಾಗಲಿಚ್ಛಿಸುವವರಿಗೆ ಪಂಚ ಸಂಸ್ಕಾರವನ್ನು ಮಾಡಲು ಅಧಿಕಾರ ನೀಡಿದರು.

ಪಂಚ ಸಂಸ್ಕಾರ / ಸಮಾಶ್ರಯಣ ಮಾಡಿಸಿಕೊಳ್ಳುವ ದಿನ ಅನುಸರಿಸಬೇಕಾದ ವಿಧಿ ವಿಧಾನಗಳು:

  • ಮುಂಜಾನೆ ಸೂರ್ಯೋದಯಕ್ಕೂ ಮುನ್ನವೇ ಏಳಬೇಕು.
  • ಶ್ರೀಮನ್ನಾರಾಯಣ, ಆಳ್ವಾರ್‌ಗಳು ಮತ್ತು ಆಚಾರ್ಯರುಗಳನ್ನು ಧ್ಯಾನಿಸಬೇಕು. ಇದು ನಮ್ಮ ನಿಜವಾದ ಜನ್ಮದಿನ – ನಮಗೆಲ್ಲ ಜ್ಞಾನೋದಯವಾಗುವ ದಿನ.
  • ನಿತ್ಯ ಕರ್ಮಾನುಷ್ಠಾನವನ್ನು ಮುಗಿಸಬೇಕು (ಸ್ನಾನ, ಊರ್ಧ್ವಪುಂಡ್ರ ಧಾರಣೆ, ಸಂಧ್ಯಾವಂದನಾದಿಗಳು).
  • ನಿಗದಿತ ಸಮಯಕ್ಕೆ ಸರಿಯಾಗಿ ಆಚಾರ್ಯರ ಮಠ/ತಿರುಮಾಳಿಗೈಗೆ ತಲುಪಬೇಕು. ಯಥಾಶಕ್ತಿ ಹೂವು, ಹಣ್ಣು, ವಸ್ತ್ರಗಳು (ದೇವರಿಗೆ/ಆಚಾರ್ಯನಿಗೆ), ಸಂಭಾವನೆ (ಹಣ), ಇತ್ಯಾದಿಗಳನ್ನು ತೆಗೆದುಕೊಂಡು ಹೋಗುವುದು.
  • ಸಮಾಶ್ರಯಣ ಮಾಡಿಸಿಕೊಳ್ಳಬೇಕು.
  • ಆಚಾರ್ಯರ ಶ್ರೀಪಾದ ತೀರ್ಥವನ್ನು ಸ್ವೀಕರಿಸಬೇಕು.
  • ಆಚಾರ್ಯರ ಉಪದೇಶಗಳನ್ನು ಗಮನವಿಟ್ಟು ಕೇಳಿಕೊಳ್ಳಬೇಕು.
  • ಆಚಾರ್ಯರ ಮಠ/ತಿರುಮಾಳಿಗೈಯಲ್ಲಿ ಪ್ರಸಾದವನ್ನು ಸ್ವೀಕರಿಸಬೇಕು.
  • ಆಚಾರ್ಯರ ಮಠ/ತಿರುಮಾಳಿಗೈಯಲ್ಲಿ ಆ ದಿನವನ್ನು ಕಳೆದು, ಆಚಾರ್ಯನಿಂದ ನೇರವಾಗಿ ಗುರು ಪರಂಪರೆ, ಸಂಪ್ರದಾಯ, ಇತ್ಯಾದಿಗಳ ಬಗೆಗೆ ಸಾಧ್ಯವಾದಷ್ಟು ತಿಳಿದುಕೊಳ್ಳಬೇಕು.
  • ಆ ದಿನದಂದು ಬೇರೆ ಎಲ್ಲ ಕೆಲಸಗಳನ್ನೂ (ಕಛೇರಿ ಕೆಲಸ, ಬೇರೆ ಮನೆಗೆಲಸಗಳು, ಇತ್ಯಾದಿ) ಬದಿಗಿಟ್ಟು,  ಆ ದಿನಪೂರ್ತಿ ನಮ್ಮ ಗುರುಪರಂಪರೆಯೆಡೆಗೆ ಕೃತಜ್ಞತಾ ಭಾವದೊಂದಿಗೆ ಮನಃಶಾಂತಿಯಿಂದ ಕಳೆಯಬೇಕು. ಆ ದಿನವೇ ನಮ್ಮ ಜೀವನದಲ್ಲಿ ಇನ್ನೂ ಅನೇಕ ಶಾಂತಿಯುತ ದಿನಗಳಿಗೆ ನಾಂದಿಯಾಗಬೇಕು.

ಪಂಚ ಸಂಸ್ಕಾರ ಆರಂಭವೋ ಅಥವಾ ಕೊನೆಯೋ?

ಸಾಮಾನ್ಯವಾಗಿ ಸಮಾಶ್ರಯಣವು ಒಂದು ಚಿಕ್ಕ ಪ್ರಕ್ರಿಯೆ, ಮತ್ತು ಅದುವೇ ಕೊನೆ (ನಂತರ ಮಾಡಬೇಕಾದದ್ದೇನಿಲ್ಲ) ಎಂಬ ಭಾವ ಅನೇಕರ ಮನಗಳಲ್ಲಿ ಮನೆಮಾಡಿದೆ. ಆದರೆ ಅದು ತಪ್ಪು ಪರಿಕಲ್ಪನೆ.  ಪಂಚ ಸಂಸ್ಕಾರವೆಂಬುದು ಶ್ರೀವೈಷ್ಣವತ್ತ್ವದ ಪಯಣದಲ್ಲಿ ಇರಿಸುವ ಮೊದಲ ಹೆಜ್ಜೆ. ಈ ಪಯಣದಲ್ಲಿ ಅಂತಿಮ ಗುರಿ (ಶ್ರೀಮಹಾಲಕ್ಷ್ಮೀ ಮತ್ತು ಶ್ರೀಮನ್ನಾರಾಯಣರಿಗೆ ನಿತ್ಯ ಕೈಂಕರ್ಯ ಮಾಡುವುದು) ನಿರ್ಧಾರಿತವಾಗಿದೆ.  ಈ ಗುರಿ ತಲುಪಲು ನಮಗೆ ಆಚಾರ್ಯರುಗಳು ಒಂದು ನಿರ್ದಿಷ್ಟ ಕ್ರಮ/ಪಥವನ್ನು ನೀಡಿದ್ದಾರೆ. ಅದುವೇ ಸದಾಚಾರ್ಯನ ಮೂಲಕ ಭಗವಂತನೇ ನಮ್ಮ ಉಪಾಯವೆಂದು ಅಂಗೀಕರಿಸುವಿಕೆ, ಮತ್ತು ಆ ಆಚಾರ್ಯನು ತೋರಿದ ಹಾದಿಯಲ್ಲಿ ಸಂತೋಷದಿಂದ ಮುನ್ನಡೆಯುವ ಇಚ್ಛೆ. ಈ ಕ್ರಮವನ್ನು ಯಥಾವತ್ತಾಗಿ ಅಂಗೀಕರಿಸಿ ಅದರಂತೆಯೇ ನಡೆದು ಉಜ್ಜೀವನ ಹೊಂದುವುದು ಪ್ರತಿಯೊಬ್ಬ ಜೀವನಿಗೂ ಸ್ವರೂಪಕ್ಕೆ ಒಪ್ಪುವಂಥದ್ದು, ಮತ್ತು ಅವಶ್ಯವಾಗಿ ಅನುಸರಿಸತಕ್ಕ ನಿಯಮ.

ತಮ್ಮ ಮುಮುಕ್ಷುಪ್ಪಡಿ ಸೂತ್ರ ೧೧೬ರಲ್ಲಿ ಪಿಳ್ಳೈ ಲೋಕಾಚಾರ್ಯರು, ಪಂಚಸಂಸ್ಕಾರವಾಗಿರುವ ಶ್ರೀವೈಷ್ಣವನ ಅಪೇಕ್ಷಿತ ನಡತೆಯನ್ನು ತೋರಿಸಿಕೊಟ್ಟಿದ್ದಾರೆ. ಅವು ಈ ಕೆಳಕಂಡಂತೆ:

  • ಲೌಕಿಕ ವಿಷಯಗಳ ಬಗೆಗಿರುವ ವ್ಯಾಮೋಹವನ್ನು ಸಂಪೂರ್ಣವಾಗಿ ತ್ಯಜಿಸುವುದು.
  • ಶ್ರೀಮನ್ನಾರಾಯಣನೊಬ್ಭನೇ ಗತಿಯೆಂದು ಗಟ್ಟಿಯಾಗಿ ನಂಬುವುದು.
  • ನಿತ್ಯಕೈಂಕರ್ಯದ ಸಾಕ್ಷಾತ್ಕಾರದ ಬಗ್ಗೆ ಅಪಾರ ವಿಶ್ವಾಸ ಹೊಂದಿರುವುದು.
  • ಆ ನಿತ್ಯಕೈಂಕರ್ಯವನ್ನು ಆದಷ್ಟು ಶೀಘ್ರ ಪಡೆದುಕೊಳ್ಳಲು ಸದಾ ಹಪಹಪಿಸುವುದು.
  • ಈ ಭೂಮಿಯಲ್ಲಿರುವವರೆಗೂ ಸದಾ ದಿವ್ಯದೇಶಗಳಲ್ಲಿದ್ದುಕೊಂಡು, ಭಗವಂತನ ಗುಣಾನುಭವಪೂರ್ವಕವಾಗಿ ಅವನ ಸೇವೆಗಳನ್ನು ಮಾಡುವುದು.
  • ಈ ಎಲ್ಲ ಅಂಶಗಳನ್ನೂ ಚಾಚೂತಪ್ಪದೆ ಪಾಲಿಸುತ್ತಿರುವ ಭಗವದ್ಭಕ್ತರ ಮಹಿಮೆಯನ್ನರಿತು ಅವರನ್ನು ಕಂಡು ಆನಂದಿಸುವುದು.
  • ಸದಾಕಾಲ ತಿರುಮಂತ್ರ ಮತ್ತು ದ್ವಯ ಮಹಾಮಂತ್ರಗಳನ್ನು (ಅರ್ಥಸಹಿತವಾಗಿ) ಮನಸಾರೆ ಅನುಸಂಧಾನ ಮಾಡುವುದು.
  • ಸ್ವಾಚಾರ್ಯರ ಮೇಲೆ ಅತಿಯಾದ ಭಕ್ತಿ ಹೊಂದಿರುವುದು.
  • ಭಗವಂತ ಮತ್ತು ಆಚಾರ್ಯರ ವಿಷಯದಲ್ಲಿ ಸದಾ ಕೃತಜ್ಞತೆಯೊಂದಿಗಿರುವುದು.
  • ನಿತ್ಯವೂ ನಿಜವಾದ ಜ್ಞಾನ, ವೈರಾಗ್ಯ ಮತ್ತು ಶಾಂತಿಯಿಂದ ಕೂಡಿದ ಸಾತ್ವಿಕ ಶ್ರೀವೈಷ್ಣವರ ಸಹವಾಸ ಮಾಡುವುದು.

ಈ ಮೇಲೆ ತಿಳಿಸಿರುವ ವಿಷಯಗಳ ಬಗ್ಗೆ ಇನ್ನಷ್ಟು ವಿವರಗಳಿಗೆ ನೋಡಿ: http://ponnadi.blogspot.in/2012/08/srivaishnava-lakshanam-5.html

ಇವೆಲ್ಲದರೊಂದಿಗೆ, ನಾವೆಲ್ಲರೂ ಈ ಪಂಚಸಂಸ್ಕಾರ ಪ್ರಕ್ರಿಯನ್ನು ಅದ್ಭುತವಾಗಿ ಸಂಸ್ಥೀಕರಿಸಿ, ತನ್ನ ಶಿಷ್ಯರಾದ ೭೪ ಸಿಂಹಾಸನಾಧಿಪತಿಗಳ ಮೂಲಕ ಪ್ರಚಾರ ಪಡಿಸಿದ ಭಗವದ್ರಾಮಾನುಜರಿಗೂ

ಅತ್ಯಂತ  ಕೃತಜ್ಞರಾಗಿರಬೇಕು. ಅವರು ಇಷ್ಟೆಲ್ಲ ಮಾಡಲು ಕಾರಣ – ಅವರಿಗೆ ಈ ಜೀವಕೋಟಿಯ ಮೇಲಿದ್ದ ಅಪಾರ ಅನುಕಂಪ. ಈ ಸಂಸಾರಮಂಡಲದಲ್ಲಿ ಅಜ್ಞಾನದಿಂದ ಆವೃತರಾಗಿ ಅಲೆಯುತ್ತ, ತಮ್ಮ ನಿಜಸ್ವರೂಪವಾದ ಭಗವಂತನಿಗೆ ಮಂಗಳಾಶಾಸನ ಮಾಡುವುದರಿಂದ (ಭಗವಂತನಿಗೆ ಶುಭವನ್ನಾಶಿಸುವುದರಿಂದ) ಹೊರಗುಳಿದ ಜೀವಕೋಟಿಯನ್ನು ಕಂಡು, ಅವರನ್ನೆಲ್ಲ ತಿದ್ದಿ ಸರಿದಾರಿಯಲ್ಲಿ ನಡೆಸಲು ಅವರು ಇಷ್ಟೆಲ್ಲ ಮಾಡಿದರು. ಈ ವಿಷಯಗಳ ಬಗೆಗೆ ಮುಂಬರುವ ಲೇಖನಗಳಲ್ಲಿ ತಿಳಿದುಕೊಳ್ಳಬಹುದು.

ಅಡಿಯೇನ್ ಶ್ರೀನಿವಾಸನ್ ರಾಮಾನುಜ ದಾಸನ್

ಮೂಲ: http://ponnadi.blogspot.in/2015/12/simple-guide-to-srivaishnavam-pancha-samskaram.html

ರಕ್ಷಿತ ಮಾಹಿತಿ:  https://srivaishnavagranthamskannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಬೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

1 thought on “ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಪಂಚ ಸಂಸ್ಕಾರ

Leave a comment