Monthly Archives: February 2022

ಮುಮುಕ್ಷುಪ್ಪಡಿ – ಸೂತ್ರಮ್ 7 – 12

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

ಹಿಂದಿನ ಲೇಖನವನ್ನು

ಸೂತ್ರಮ್ – 7

ಪರಿಚಯ: “ಒಬ್ಬರು ಶಿಷ್ಯನಾಗಿದ್ದುಕೊಂಡು ಈ ಮಂತ್ರವನ್ನು ಕಲಿತು, ಜ್ಞಾನವನ್ನು ಪಡೆಯಬಹುದೇ? ಹಾಗಾದರೆ ಎಲ್ಲಾ ಶಾಸ್ತ್ರಗಳೂ ಜ್ಞಾನದ ಉಪಕರಣಗಳೇ? ಒಬ್ಬರು ಶಾಸ್ತ್ರವನ್ನು ಕಲಿತು ಅದರ ಸಹಾಯದಿಂದ ಜ್ಞಾನವನ್ನು ಪಡೆಯಬಹುದೇ?” ಎಂದು ಕೇಳಿದಾಗ, ಪಿಳ್ಳೈ ಲೋಕಾಚಾರ್‍ಯರು ಶಾಸ್ತ್ರದಿಂದ ಕಲಿತ ಜ್ಞಾನಕ್ಕೂ ಈ ಮಂತ್ರದಿಂದ ಬಂದ ಜ್ಞಾನಕ್ಕೂ ವ್ಯತ್ಯಾಸವನ್ನು ತಿಳಿಸುತ್ತಾರೆ. ಈ ಸೂತ್ರವು “ಸಕಲ ಶಾಸ್ತ್ರಂಗಳಲುಮ್” ಎಂದು ಆರಂಭವಾಗುತ್ತದೆ.

ಸಕಲ ಶಾಸ್ತ್ರಂಗಳಲುಮ್ ಪಿಱಕ್ಕುಮ್ ಜ್ಞಾನಮ್ ಸ್ವಯಮಾರ್ಜಿತಮ್ ಪೋಲೇ, ತಿರುಮಂತ್ರತ್ತಾಲ್ ಪಿಱಕ್ಕುಮ್ ಜ್ಞಾನಮ್ ಪೈತ್ರುಕ ಧನಮ್ ಪೋಲೇ.

ಸರಳ ಅರ್ಥ: ಎಲ್ಲಾ ಶಾಸ್ತ್ರಗಳಿಂದಲೂ ಪಡೆದ ಜ್ಞಾನವು ಸ್ವಯಾರ್ಜಿತ ಸಂಪತ್ತಿನ ಹಾಗೆ, ಆದರೆ ತಿರುಮಂತ್ರದಿಂದ ಹುಟ್ಟಿದ ಜ್ಞಾನವು ಪಿತ್ರಾರ್ಜಿತ ಆಸ್ತಿಯ ಹಾಗೆ.

ವ್ಯಾಖ್ಯಾನಮ್: ಎಲ್ಲಾ ರೀತಿಯ ಶಾಸ್ತ್ರಗಳನ್ನು ಕಲಿತು, ಶೃತಿ ಮತ್ತು ಸ್ಮೃತಿಯಿಂದ ಜ್ಞಾನವನ್ನು ಪಡೆದ ಜ್ಞಾನದ ಆಕಾಂಕ್ಷಿಗಳಿಗೆ ಈ ರೀತಿಯ ವೇದಾಂತದ ಅರಿವು ಬರಲು ತೀವ್ರ ಪ್ರಯತ್ನದ ಅಗತ್ಯವಿದೆ. ಆದರೆ ತಿರುಮಂತ್ರದಿಂದ ಹುಟ್ಟಿದ ಜ್ಞಾನವು, ಆಚಾರ್‍ಯರ ಮೂಲಕ ಕಲಿತಾಗ ಅದು ಪಿತೃಗಳು ಗಳಿಸಿದ ಆಸ್ತಿಯನ್ನು ಸುಲಭವಾಗಿ ಪಡೆದಂತೆ. ಅದಕ್ಕೆ ಅಂತಹ ಪ್ರಯತ್ನದ ಅವಶ್ಯಕತೆಯಿಲ್ಲ.

ಶಾಸ್ತ್ರ ಜ್ಞಾನಮ್ ಬಹುಕ್ಲೇಶಮ್ ಬುದ್ದೇಶ್ ಚಲನ ಕಾರಣಮ್
ಉಪದೇಶತ್ ಹರಿಮ್ ಬುದ್ಧ್ವ ವಿರಮೇತ್ ಸರ್ವ ಕರ್ಮಸು ॥

ಏನೆಂದರೆ, ಶಾಸ್ತ್ರಗಳಿಂದ ಕಲಿತ ಜ್ಞಾನವು ಅನೇಕ ಕಷ್ಟಗಳನ್ನು ಹೊಂದಿರುತ್ತವೆ, ಮತ್ತು ಅವು ಒಬ್ಬರ ಬುದ್ಧಿಯ ಮೇಲೆ ಅನೇಕ ಗೊಂದಲಗಳನ್ನು ಉಂಟುಮಾಡುತ್ತವೆ. ಆದ್ದರಿಂದ ನಮ್ಮ ಕರ್ತವ್ಯವೇನೆಂದರೆ ನಮ್ಮದೇ ಆದ ಶಾಸ್ತ್ರವನ್ನು ಕಲಿಯಲು ಗುರಿಯಾಗಿರುವ ಎಲ್ಲಾ ಚಟುವಟಿಕೆಗಳನ್ನು ಬಿಟ್ಟು, ಆದರೆ ಆಚಾರ್‍ಯರ ಉಪದೇಶದಿಂದ ಎಂಪೆರುಮಾನನ್ನು ಅರಿಯುವುದು.

ಇದರಿಂದ ತಿರುಮಂತ್ರದ ಮಹತ್ವವು ಅರಿವಾಗುತ್ತದೆ. ಅದು ಎಲ್ಲಾ ಶಾಸ್ತ್ರಗಳ ಸಾರಾಂಶವೂ ಮತ್ತು ಅದಕ್ಕೂ ಮೀರಿದ ಅರ್ಥವನ್ನು ಹೊಂದಿರುವುದು.

ಸೂತ್ರಮ್ – 8

ಪರಿಚಯ: ಅನುಮಾನವನ್ನು ಪರಿಹರಿಸಿಕೊಳ್ಳಲು, ಶಾಸ್ತ್ರದಲ್ಲಿಯೇ ಅನೇಕ ಮಂತ್ರಗಳಿವೆ. ತಿರುಮಂತ್ರವನ್ನು ಬಿಟ್ಟು. ಈ ತಿರುಮಂತ್ರದ ಶ್ರೇಷ್ಠತೆ ಏನು? ಲೋಕಾಚಾರ್‍ಯರು ಮುಂದಿನ 8ನೇ ಸೂತ್ರದಲ್ಲಿ ಇದನ್ನು ಹೇಳುತ್ತಾರೆ.

ಭಗವನ್ ಮಂತ್ರಗಳ್ ತಾನ್ ಅನೇಕಂಗಳ್.

ಸರಳ ಅರ್ಥ: ಭಗವಂತನ ಮಂತ್ರಗಳು ಅನೇಕವಾಗಿ ಇವೆ.

ವ್ಯಾಖ್ಯಾನಮ್: ಶ್ರೀ ರಂಗರಾಜ ಉತ್ತರ ಶತಕಮ್ – 74 ರಲ್ಲಿ ಹೇಳಿರುವ ಹಾಗೆ:

ಆಸ್ತಮ್ ತೇ ಗುಣ ರಾಶಿವದ್ ಗುಣಾ ಪರೀವಾಹಾತ್ಮನಮ್ ಜನ್ಮನಾಮ್
ಸಂಖ್ಯಾ ಭೌಮ ನಿಕೇತನೇಸ್ವಪಿ ಕುಟೀಕುಂಜೇಶು ರಂಗೇಶ್ವರ!
ಅರ್ಚ್ಯಃ ಸರ್ವ ಸಹಿಷ್ಣುರರ್ಚಕ ಪರಾಧೀನಾಖಿಲಾತ್ಮಸ್ಥಿತಿಃ
ಪ್ರೀಣೀಶೇ ಹೃದಯಾಲುಬಿಸ್ ತವ ತಥಃ ಶೀಲಾತ್ ಜಡೀಭೂಯತೇ ॥

“ಆಸ್ಥಾಮ್ ತೇ ಗುಣ ರಾಶಿವದ್ ಗುಣ ಪರೀವಾಹಾತ್ಮನಾಮ್ ಜನ್ಮನಾಮ್ ಸಂಖ್ಯಾ” (ಓಹ್! ರಂಗೇಶ್ವರ! ನಿನ್ನ ಅಸಂಖ್ಯೇಯ ಅವತಾರಗಳು ನಿನ್ನ ರಾಶಿ ರಾಶಿಯಾದ ಶುಭ ಗುಣಗಳನ್ನು ಪ್ರತೀಕಿಸುತ್ತವೆ. ನೀನು ಗುಡಿಗಳಲ್ಲಿಯೂ, ಮನೆಗಳಲ್ಲಿಯೂ ಮತ್ತು ಗುಡಿಸಲಿನಲ್ಲಿಯೂ ನೀನು ಆರಾಧಿಸುವವರ ಅಚಾತುರ್ಯಗಳನ್ನು ತಡೆದುಕೊಂಡಿರುವೆ. ಪೂಜಾರಿಯನ್ನೇ ಸಂಪೂರ್ಣವಾಗಿ ಅವಲಂಬಿಸಿರುವೆ. ಪ್ರತಿಯೊಂದು ಹಂತದಲ್ಲಿಯೂ ಅತ್ಯಂತ ಸರಳತೆಯನ್ನು ಮೆರೆದಿರುವೆ ಸಜ್ಜನರಿಗೆ ಇದು ಅತೀವ ಆಶ್ಚರ್‍ಯವನ್ನು ತಂದಿದೆ.);

ಶ್ರೀಮದ್ ವಾಲ್ಮೀಕಿ ರಾಮಾಯಣದಲ್ಲಿ ಹೇಳಿರುವ ಹಾಗೆ (ಅಯೋಧ್ಯಾ ಕಾಂಡ 2-26) :

ಬಹವೋ ನೃಪ ಕಲ್ಯಾಣ ಗುಣಾಃ ಪುತ್ರಸ್ಯ ಸಂತಿ ತೇ

(ಓಹ್! ರಾಜನೇ! ನಿನ್ನ ಮಗನಿಗೆ ಎಷ್ಟೊಂದು ಒಳ್ಳೆಯ ಗುಣಗಳಿವೆ) :

ಶ್ರೀ ವಿಷ್ಣು ಧರ್ಮಮ್ ನಲ್ಲಿ ಹೇಳಿರುವ ಹಾಗೆ:

ತವಾನಂತ ಗುಣಸ್ಯಾಪಿ ಷಡೇವ ಪ್ರಥಮೇ ಗುಣಾಃ

(ನೀನು ಅಸಂಖ್ಯಾತ ಶುಭಗುಣಗಳನ್ನು ಹೊಂದಿದ್ದರೂ, ಅವುಗಳಲ್ಲಿ ಪ್ರಮುಖವಾದದ್ದು ಆರು ಗುಣಗಳು);

ಶ್ರೀ ಭಗವದ್ ಗೀತಾನಲ್ಲಿ ಹೇಳಿರುವಂತೆ 4-5 :

ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ
ತಾನ್ಯಹಮ್ ವೇದ ಸರ್ವಾಣಿ ನತ್ವಮ್ ವೇತ್ತ ಪರಂತಪ ॥

“ ಅರ್ಜುನ! ನಾನು ಅನೇಕ ಅಸಂಖ್ಯಾತ ಜನ್ಮಗಳನ್ನು ಹೊಂದಿರುವೆ. ನಿನಗೂ ಇದು ನಿಜವಾಗಿದೆ. ನನಗೆ ನನ್ನದು ಎಲ್ಲಾ ತಿಳಿದಿದೆ. ಆದರೆ ನಿನಗೆ ನಿನ್ನದು ತಿಳಿದಿಲ್ಲ.”

“ಎಣ್ಣಿಲ್ ತೊಲ್ ಪುಗೞ್” (ತಿರುವಾಯ್ಮೊೞಿ 3-3-3) “ಅಸಂಖ್ಯೇಯ ಕಲ್ಯಾಣ ಗುಣಗಳು”

“ಎನ್ನಿನ್‍ಱ ಯೋನಿಯುಮಾಯ್ ಪಿಱಂದಾಯ್” –(ತಿರುವೃತ್ತಮ್ 1) “ನಿನ್ನ ಇಚ್ಛೆಗೆ ಅನುಗುಣವಾಗಿ ಅನೇಕ ಅವತಾರಗಳನ್ನು ರೂಪಗಳನ್ನು ಪಡೆದೆ”

…………ಈ ಎಲ್ಲಾ ಶಾಸ್ತ್ರ ವಾಕ್ಯಗಳನ್ನು ಗಮನಿಸಿದಾಗ, ಭಗವಂತನ ದಿವ್ಯ ಗುಣಗಳು, ಈ ಗುಣಗಳನ್ನು ಹೊರಪಡಿಸುವಂತಹ ದಿವ್ಯ ಅವತಾರಗಳು ಅನೇಕವಾಗಿವೆ, ಅಸಂಖ್ಯೇಯವಾಗಿವೆ . ಮತ್ತು ಅವುಗಳನ್ನು ವಿವರಿಸುವ ಮಂತ್ರಗಳೂ ಅನೇಕವಾಗಿವೆ. ಅನಂತಾವೈ ಭಗವನ್ ಮಂತ್ರಾಃ.

ಸೂತ್ರಮ್ – 9

ಪರಿಚಯ: ಈ ಎಲ್ಲಾ ಮಂತ್ರವೂ ಒಂದೇ ತರನಾದುವೇ? ಈ ಪ್ರಶ್ನೆಗೆ ಪಿಳ್ಳೈ ಲೋಕಾಚಾರ್‍ಯರು ಹೇಳುತ್ತಾರೆ, ಅವುಗಳು ಎರಡು ವಿಧವಾದವು , ವ್ಯಾಪಕ ಮತ್ತು ಅವ್ಯಾಪಕ ಮಂತ್ರಗಳು ಎಂದು ಸೂತ್ರಮ್ 9 ರಲ್ಲಿ ಹೇಳುತ್ತಾರೆ.

ಅವೈದಾನ್ ವ್ಯಾಪಕಂಗಳ್ ಎನ್‍ಱುಮ್ ಅವ್ಯಾಪಕಂಗಳ್ ಎನ್‍ಱುಮ್ ಇರಂಡು ವರ್ಗಮ್.

ಸರಳ ಅರ್ಥ: ಈ ಮಂತ್ರಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು, ವ್ಯಾಪಕ ಮಂತ್ರಗಳು ಮತ್ತು ಅವ್ಯಾಪಕ ಮಂತ್ರಗಳು.

ವ್ಯಾಖ್ಯಾನಮ್ : ಮಂತ್ರಗಳಲ್ಲಿ ಎರಡು ವಿಧಗಳಿವೆ, ಸ್ವಾಮಿಯ ಸರ್ವವ್ಯಾಪಕತ್ವದ ಗುಣವನ್ನು ಪ್ರಕಟಿಸುವ ಮಂತ್ರಗಳನ್ನು ವ್ಯಾಪಕ ಮಂತ್ರಗಳೆಂದು, ಯಾವ ಮಂತ್ರಗಳು ಸ್ವಾಮಿಯ ನಿರ್ದಿಷ್ಟ ಗುಣವನ್ನು ಗುರುತಿಸುತ್ತದೆಯೋ ಅವನ ಅವತಾರದಲ್ಲಿ ಮತ್ತು ಅದರೊಂದಿಗೆ ಇರುವ ಅವನ ದಿವ್ಯ ಚಟುವಟಿಕೆಗಳಲ್ಲಿ ಅವುಗಳನ್ನು ಅವ್ಯಾಪಕ ಮಂತ್ರಗಳೆಂದು ಹೆಸರಿಸುತ್ತಾರೆ.

ಸೂತ್ರಮ್ – 10

ಈ ಎರಡೂ ಮಂತ್ರಗಳು ಒಂದಕ್ಕೊಂದು ಸಮವಾಗಿದೆಯೇ ಎಂಬ ಪ್ರಶ್ನೆಗೆ , ಪಿಳ್ಳೈ ಲೋಕಾಚಾರ್‍ಯರು ಉತ್ತರಿಸುತ್ತಾರೆ, ಮೂರು ವ್ಯಾಪಕ ಮಂತ್ರಗಳು ಉಳಿದ ಎಲ್ಲಾ ಅವ್ಯಾಪಕ ಮಂತ್ರಗಳಿಗಿಂತಲೂ ಶ್ರೇಷ್ಠವಾದುದು ಎಂದು 10ನೆಯ ಸೂತ್ರದಲ್ಲಿ ಹೇಳಿದ್ದಾರೆ.

ಅವ್ಯಾಪಕಂಗಳಿಲ್ ವ್ಯಾಪಕಂಗಳ್ ಮೂನ್ಱುಮ್ ಶ್ರೇಷ್ಟಂಗಳ್.

ಸರಳ ಅರ್ಥ:  ಅವ್ಯಾಪಕ ಮಂತ್ರಗಳಿಗೆ ಹೋಲಿಸಿದಾಗ, ಮೂರು ವ್ಯಾಪಕ ಮಂತ್ರಗಳು ಶ್ರೇಷ್ಠವಾದುದು.

ವ್ಯಾಖ್ಯಾನಮ್: ಅವ್ಯಾಪಕ ಮಂತ್ರಗಳಿಗೆ ಹೋಲಿಸಿದಾಗ, ವಿಷ್ಣು ಗಾಯತ್ರಿಯಲ್ಲಿ ಪಠಿಸುವ ಮೂರು ವ್ಯಾಪಕ ಮಂತ್ರಗಳು (ತೈತ್ತಿರೀಯ ಉಪನಿಶತ್, ನಾರಾಯಣವಲ್ಲಿ), ಅವುಗಳೆಂದರೆ:

ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣುಃ ಪ್ರಚೋದಯಾತ್॥

ಇವುಗಳು ಶ್ರೇಷ್ಥವಾದುದು. ಈ ವಿಷ್ಣು ಗಾಯತ್ರಿಯಲ್ಲಿರುವಂತೆ , ನಾರಾಯಣ, ವಾಸುದೇವ, ವಿಷ್ಣು – ಇವುಗಳು ಮೂರು ದಿವ್ಯ ನಾಮಗಳು , ಇವುಗಳು ಅತ್ಯಂತವಾಗಿ ಪ್ರಣವ ಮತ್ತು ನಮಃ ಇರುವ ಮಂತ್ರಗಳಿಗೆ ಅತ್ಯಂತ ಮುಖ್ಯವಾದುದು. ಅವು ಈ ಎಲ್ಲಾ ಮೂರೂ ಮಂತ್ರಗಳಿಗೆ ಉದಾಹರಣೆಯಾದುದು.

ಸೂತ್ರಮ್ – 11

ಪರಿಚಯ: ಈ ಮೂರೂ ವ್ಯಾಪಕ ಮಂತ್ರಗಳು ಒಂದಕ್ಕೊಂದು ಸಮನಾದುವುಗಳೇ? ಎಂಬ ಈ ಪ್ರಶ್ನೆಗೆ ಪಿಳ್ಳೈ ಲೋಕಾಚಾರ್‍ಯರು ಹೇಳುತ್ತಾರೆ, ಈ ಮೂರು ಮಂತ್ರಗಳಲ್ಲಿ ಪೆರಿಯ ತಿರುಮಂತ್ರಮ್ ಮುಖ್ಯವಾದುದು. ಎಂದು ಮುಂದಿನ 11 ನೆಯ ಸೂತ್ರದಲ್ಲಿ.

ಇವೈ ಮೂನ್ಱಿಲುಮ್ ವೈತ್ತು ಕೊಣ್ಡು ಪೆರಿಯ ತಿರುಮಂತ್ರಮ್ ಪ್ರಧಾನಮ್.

ಸರಳ ಅರ್ಥ: ಈ ಮೂರು ಮಂತ್ರಗಳಲ್ಲಿಯೂ, ಪೆರಿಯ ತಿರುಮಂತ್ರಮ್ (ಶ್ರೇಷ್ಠವಾದ ತಿರುಮಂತ್ರಮ್) ಮುಖ್ಯವಾದದ್ದು.

ವ್ಯಾಖ್ಯಾನಮ್: ಅವ್ಯಾಪಕ ಮಂತ್ರಗಳಿಗಿಂತಲೂ ಶ್ರೇಷ್ಠವಾಗಿರುವ ಈ ಮೂರು ವ್ಯಾಪಕ ಮಂತ್ರಗಳಲ್ಲಿ, ತಿರುಮಂತ್ರ (ನಾರಾಯಣ) ಎಂಬುದು ಅತ್ಯಂತ ಶ್ರೇಷ್ಠವಾದುದು ಮತ್ತು ಇದನ್ನು ಶೃತಿಯ ಮೊದಲ ಭಾಗವಾಗಿ ಪಠಿಸಬೇಕು.

ನಾರಾಯಣಾಯ ವಿಧ್ಮಹೇ

ಇದು ಉನ್ನತವಾದ ಅರ್ಥಗಳಿಂದ ಕೂಡಿದೆ. ಮತ್ತು ನಾರಧೀಯಮ್ ಎಂದು ಘೋಷಿಸಲ್ಪಟ್ಟಿದೆ. – ಅಷ್ಟಾಕ್ಷರ ಬ್ರಹ್ಮವಿದ್ಯೈ – 1-41

ನಾಸ್ತಿ ಚ ಅಷ್ಟಾಕ್ಷರಾತ್ ಪರಃ

ಅಂದರೆ, ಅಷ್ಟಾಕ್ಷರಕ್ಕಿಂತಲೂ ಹೆಚ್ಚಾದುದು ಯಾವುದೂ ಇಲ್ಲ.

ಮತ್ತೂ, ನಾರಸಿಂಹ ಪುರಾಣಮ್ 18-32 ರಲ್ಲಿ ಹೇಳಿರುವಂತೆ,

ನ ಮಂತ್ರೋ ಅಷ್ಟಾಕ್ಷರಾತ್ ಪರಃ

ಅಷ್ಟಾಕ್ಷರಕ್ಕಿಂತಲೂ ಶ್ರೇಷ್ಠವಾದ ಮಂತ್ರ ಬೇರೊಂದಿಲ್ಲ.

ಸೂತ್ರಮ್ – 12

ಪರಿಚಯ: ಇನ್ನೆರಡು ವ್ಯಾಪಕ ಮಂತ್ರಗಳಲ್ಲಿ ಏನು ಕೊರತೆಯಿದೆ? ಈ ಪ್ರಶ್ನೆಗೆ ಪಿಳ್ಳೈ ಲೋಕಾಚಾರ್‍ಯರು ಹೇಳುತ್ತಾರೆ, ಆ ಎರಡು ಮಂತ್ರಗಳು ಬುದ್ಧಿವಂತರಲ್ಲದ ಅಧಿಕಾರಿಗಳಿಂದ ಅಳವಡಿಸಿಕೊಳ್ಳಲ್ಪಟ್ಟಿದೆ ಮತ್ತು ಅವು ಪರಿಪೂರ್ಣತೆಯಿಂದ ದೂರವಿದೆ ಎಂದು ಸೂತ್ರ 12 ರಲ್ಲಿ ಹೇಳಿದ್ದಾರೆ.

ಮಱ್ಱೈಯವೈ ಇರಣ್ಡುಕ್ಕುಮ್ ಅಶಿಷ್ಟಪರಿಗ್ರಹಮುಮ್ ಅಪೂರ್ತಿಯುಮ್ ಉಣ್ಡು.

ಸರಳ ಅರ್ಥ: ಇನ್ನೆರಡು ಮಂತ್ರಗಳು ಬುದ್ಧಿವಂತರಲ್ಲದ ಅಧಿಕಾರಿಗಳಿಂದ ಒಪ್ಪಿಗೆ ಪಡೆದಿದೆ ಮತ್ತು ಪರಿಪೂರ್ಣತೆಯಿಲ್ಲದೆ ನರಳಿದೆ.

ವ್ಯಾಖ್ಯಾನಮ್: ಇನ್ನೆರಡು ನಾಮಗಳು ಅವು ವಾಸುದೇವ ಮತ್ತು ವಿಷ್ಣು ಎಂಬುದು ನಾರಾಯಣ ಎಂಬ ನಾಮದಂತೆ ಇಲ್ಲದೇ, ಅವು ಸುಷುಪ್ತ ಗುಣವಾದ (ಸ್ವರೂಪ), ರೂಪ, ಕಲ್ಯಾಣ ಶುಭ ಗುಣಗಳು ಮುಂತಾದುವುಗಳನ್ನು ತೋರಿಸುವುದಿಲ್ಲ. ಆದರೆ ಸ್ವರೂಪವನ್ನು ಮಾತ್ರ ಪರಿಗಣಿಸುತ್ತದೆ. ಆದ್ದರಿಂದ ಅವುಗಳು ನಿರ್ವಿಶೇಷ ಚಿನ್ಮಾತ್ರ ವಸ್ತುವಾದಿಗಳಿಂದ (ವೇದಗಳನ್ನು ಅನರ್ಥೈಸಿಕೊಂಡವರು) ಪ್ರತಿಪಾದಿಸಲ್ಪಟ್ಟಿರುತ್ತದೆ. ಎರಡನೆಯದಾಗಿ, ಈ ನಾಮಗಳು ವ್ಯಾಪ್ಯ ಅತ್ಯಾಹಾರಾದಿ ಸಾಪೇಕ್ಷತಾ ಎಂಬ ಅಪರಿಪೂರ್ಣತೆಯಿಂದ ನರಳುತ್ತಿವೆ. (ವ್ಯಾಪಕತನವನ್ನು ಇನ್ನೂ ವಿಸ್ತಾರವಾಗಿ ನಿರೀಕ್ಷಿಸುವುದು).

ಷಡಕ್ಷರಿ (ವಿಷ್ಣು) ತಾನು ವ್ಯಾಪಿಸಿರುವ ಪದಾರ್ಥಗಳನ್ನು ಹೇಳುವುದಿಲ್ಲ. ಯಾವ ರೂಪದಿಂದ ವ್ಯಾಪಿಸಿರುವೆ ಎಂದೂ ಹೇಳುವುದಿಲ್ಲ. ಅವುಗಳಿಂದ ಏನು ಫಲವಿದೆಯೆಂದೂ ಹೇಳುವುದಿಲ್ಲ. ಅಂತಹ ಸ್ವಾಮಿಯ ಗುಣಗಳ ಬಗ್ಗೆಯೂ ಹೇಳುವುದಿಲ್ಲ. ಆದರೆ ಆ ನಾಮವು ಎಲ್ಲಾ ವಸ್ತುಗಳನ್ನೂ ವ್ಯಾಪಿಸಿರುವ ಬಗ್ಗೆ ಮಾತ್ರ ಹೇಳುತ್ತದೆ ಆದ್ದರಿಂದ ಅದು ಅಪರಿಪೂರ್ಣವಾಗಿದೆ.

ಆದರೆ ವಾಸುದೇವ ಎಂಬ ನಾಮವು ಯಾವ ರೀತಿಯ ವ್ಯಾಪಕತೆ ಎಂದು ಹೇಳಿದರೂ, ಅದು ಯಾವ ರೀತಿಯ ಪದಾರ್ಥಗಳನ್ನು ವ್ಯಾಪಿಸಿರುತ್ತದೆ ಎಂದು ಪರೋಕ್ಷವಾಗಿಯೂ ಗುರುತಿಸುವುದಿಲ್ಲ. ‘ಸರ್ವಮ್ ವಸತಿ’ ಎಂಬ ಶಬ್ದಗಳಲ್ಲಿ ‘ಸರ್ವಮ್’ ಇರುವುದರಿಂದ ಎಲ್ಲಾ ಕಡೆಯೂ ಇರುವಿಕೆಯನ್ನು ತೋರಿಸುತ್ತದೆಯಾದರೂ, ಎಲ್ಲಾ ಕಡೆಯೂ ಉಪಸ್ಥಿತಿಯಲ್ಲಿರುವುದರಿಂದ ಅದರ ಗುಣವನ್ನು ಸೂಚಿಸುವುದಿಲ್ಲ. ಆ ಗುಣವನ್ನು ಸೂಚಿಸಲು ನಾವು ‘ಭಗವತೇ’ (ಭಗವಾನ್ ಎಂಬುದು ಆರು ಪ್ರಾಮುಖ್ಯ ಗುಣಗಳನ್ನು ಸೂಚಿಸುತ್ತದೆ) ಎಂಬ ಶಬ್ದವನ್ನು ಸೇರಿಸಬೇಕು. ಆದರೆ ಅದು ಇನ್ನೂ ವ್ಯಾಪ್ತಿಫಲಮ್ (ವ್ಯಾಪಕತನದ ಫಲವನ್ನು) ಹೇಳದಿರುವುದರಿಂದ , ದ್ವಾದಶಾಕ್ಷರಿ ಕೂಡಾ ಅಪರಿಪೂರ್ಣವಾಗಿದೆ.

ನಾರಾಯಣ ಮಂತ್ರವು , ಈ ಎರಡೂ ಮಂತ್ರಗಳ ಹಾಗೆ ಇಲ್ಲದೇ, ಅದು ಎಲ್ಲಾ ಕಡೆಯೂ ಇರುವ ಅಸ್ತಿತ್ವವನ್ನು ಪ್ರತಿಪಾದಿಸುತ್ತದೆ. ಇದರ ಅರ್ಥ ತಾನು ವ್ಯಾಪಿಸಿಕೊಂಡಿರುವ ಪದಾರ್ಥಗಳ ಬಗ್ಗೆ, ವ್ಯಾಪಕದ ರೀತಿಯ ಬಗ್ಗೆ, ಅಂತಹ ವ್ಯಾಪಕತನದಿಂದ ಆಗುವ ಫಲದ ಬಗ್ಗೆ, ಮತ್ತು ಅಂತಹ ವ್ಯಾಪಿಸಿಕೊಂಡಿರುವ ಸ್ವಾಮಿಯ ಗುಣಗಳ ಬಗ್ಗೆ ಸೂಚಿಸುತ್ತದೆ. ಆದ್ದರಿಂದ ಈ ನಾಮವು ಇನ್ನೆರಡು ನಾಮಗಳಿಗಿಂತಲೂ ಶ್ರೇಷ್ಠವಾಗಿದೆ ಅದರ ಅರ್ಥದ ವಿಸ್ತಾರದಿಂದ. ಪೆರಿಯ ವಾಚ್ಚಾನ್ ಪಿಳ್ಳೈರವರು ತಮ್ಮ ಪರಂಧ ರಹಸ್ಯಮ್‍ನಲ್ಲಿ ಎರಡು ವ್ಯಾಪಕ ಮಂತ್ರಗಳಲ್ಲಿರುವ ಶಿಥಿಲತೆಯನ್ನು ಗುರುತಿಸಿದ್ದಾರೆ. ಮತ್ತು ತಿರುಮಂತ್ರದ ಶಬ್ದದಲ್ಲಿರುವ ಪರಿಪೂರ್ಣತೆಯನ್ನು ಮತ್ತು ಅರ್ಥವನ್ನು ಗುರುತಿಸಿದ್ದಾರೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.

ಮೂಲ : https://srivaishnavagranthams.wordpress.com/2020/06/08/mumukshuppadi-suthrams-7-12/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org

ನಾಯನಾರರ ತಿರುಪ್ಪಾವೈ ಸಾರಮ್

ಮುನ್ನುಡಿ

ಆಣ್ಡಾಳ್ ನಿಂದ ಆಶೀರ್ವದಿಸಿ ಕೊಡಲ್ಪಟ್ಟ ತಿರುಪ್ಪಾವೈ, ವೇದದ ಸಾರ ಅಥವಾ ಬೀಜ ಎಂದೇ ಪರಿಗಣಿಸಲಾಗಿದೆ. ನಮ್ಮ ಎಲ್ಲಾ ಆಚಾರ್‍ಯರೂ ತಿರುಪ್ಪಾವೈಯನ್ನು ಬಹಳವಾಗಿ ಆನಂದಿಸಿದ್ದಾರೆ. ಇದು ನಮ್ಮ ಸಂಪ್ರದಾಯದ ಅನೇಕ ಆಳವಾದ ಅರ್ಥಗಳನ್ನು ಒಳಗೊಂಡಿದೆ. ನಾವು ಈಗ ಅಂತಹ ತಿರುಪ್ಪಾವೈಯ ಕೆಲವು ಭಾಗಗಳನ್ನು ಒಂದೆರಡು ಲೇಖನಗಳಿಂದ ಆನಂದಿಸಲು ತಯಾರಾಗಿದ್ದೇವೆ – ಆಣ್ಡಾಳ್ ರಂಗಮನ್ನಾರ್, ಎಂಪೆರುಮಾನಾರ್ ಮತ್ತು ಪೆರಿಯ ಜೀಯರ್ ಅವರ ಆಶೀರ್ವಾದಗಳೊಂದಿಗೆ.

ನಾಯನಾರರ ತಿರುಪ್ಪಾವೈ ಸಾರಮ್

ಆಣ್ಡಾಳ್ ರವರು ಶ್ರೀಮನ್ನಾರಾಯಣರ ದಿವ್ಯ ಮಡದಿಯಾದ ಭೂದೇವಿ ನಾಚ್ಚಿಯಾರ್ ರವರ ಅವತಾರಮ್. ಭೂದೇವಿ ನಾಚ್ಚಿಯಾರ್ ಆಣ್ಡಾಳ್ ಆಗಿ ಈ ಭೂಮಿಯಲ್ಲಿ ಕಾಣ ಸಿಗುತ್ತಾರೆ. (ಅವರಿಗೆ ಗೋದಾ ದೇವಿಯೆಂದೂ ಹೆಸರಿದೆ). ಅವರು ಎಂಪೆರುಮಾನರ ವೈಭವಗಳನ್ನು ಬಹಳ ಸರಳವಾದ ತಮಿೞಿನಲ್ಲಿ ವಿವರಿಸುತ್ತಾರೆ ಮತ್ತು ಜೀವಾತ್ಮಗಳನ್ನು ಈ ಸಂಸಾರದಿಂದ ಉದ್ಭವಿಸಿದ ಅವರ ನರಳಾಟದಿಂದ ಬಿಡುಗಡೆಗೊಳಿಸುತ್ತಾರೆ. ಮತ್ತು ಪ್ರತಿಯೊಂದು ಜೀವಾತ್ಮಕ್ಕೂ ಅದರ ನಿಜವಾದ ಪರಮ ಗುರಿಯನ್ನು – ನಿಷ್ಕಳಂಕವಾದ ಕೈಂಕರ್‍ಯವನ್ನು ಎಂಪೆರುಮಾನರಿಗೆ ಮಾಡುವುದನ್ನು  ಪೂರ್ತಿಗೊಳಿಸಲು ಸಹಾಯ ಮಾಡುತ್ತಾರೆ.

ಅವರು ಎರಡು ದಿವ್ಯ ಪ್ರಬಂಧಗಳನ್ನು ತಾನು ಬಹಳ ಚಿಕ್ಕ ವಯಸ್ಸಿನಲ್ಲಿಯೇ ರಚಿಸಿರುತ್ತಾರೆ. ಮೊದಲು, ಅವರು ತಿರುಪ್ಪಾವೈಯನ್ನು ಹಾಡುತ್ತಾರೆ. ಎಂಪೆರುಮಾನರಿಗೆ , ಪೂರ್ತಿಯಾಗಿ ಅವನ ಸಂತೋಷಕ್ಕಾಗಿಯೇ ತನ್ನನ್ನು ಕೈಂಕರ್‍ಯದಲ್ಲಿ ನಿರತಗೊಳಿಸಲು ಬೇಡಿಕೊಳ್ಳುತ್ತಾರೆ. ಅದರ ನಂತರ, ಎಂಪೆರುಮಾನರು ಅವರ ಆಸೆಯನ್ನು ನೆರವೇರಿಸದ ಕಾರಣ, ಎಂಪೆರುಮಾನರಿಂದ ಅಗಲಿರುವ ಕಾರಣ ಅತ್ಯಂತ ವ್ಯಥೆಯಿಂದ ನಾಚ್ಚಿಯಾರ್ ತಿರುಮೊೞಿಯನ್ನು ಹಾಡುತ್ತಾರೆ. ಮತ್ತು ಕೊನೆಯಲ್ಲಿ ಪೆರಿಯ ಪೆರುಮಾಳ್ ಅವಳನ್ನು ಶ್ರೀರಂಗಮ್ ಗೆ ಬರಮಾಡಿಕೊಂಡು ಅವಳನ್ನು ಸ್ವೀಕರಿಸುತ್ತಾರೆ. ಮತ್ತು ಅವಳು ಪರಮಪದಕ್ಕೆ ಮತ್ತೆ ಹೋಗಿ ಸೇರಿಕೊಳ್ಳುತ್ತಾಳೆ , ನಮಗೆ ಈ ಎರಡು ಅಮೂಲ್ಯ ರತ್ನಗಳನ್ನು ಕೊಟ್ಟು (ತಿರುಪ್ಪಾವೈ ಮತ್ತು ನಾಚ್ಚಿಯಾರ್ ತಿರುಮೊೞಿ).

ಬಹಳ ಮಂದಿ ಪೂರ್ವಾಚಾರ್‍ಯರು ಅವರು ಎಂಪೆರುಮಾನಾರರು, ಭಟ್ಟರ್, ಪೆರಿಯವಚ್ಚಾನ್ ಪಿಳ್ಳೈ, ಪಿಳ್ಳೈ ಲೋಕಾಚಾರ್‍ಯರ್, ಅೞಗಿಯ ಮಣವಾಳ ಪೆರುಮಾಳ್ ನಾಯನಾರ್, ವೇದಾಂತಾಚಾರ್‍ಯರ್, ಮಣವಾಳ ಮಾಮುನಿಗಳ್, ಪೊನ್ನಡಿಕ್ಕಾಲ್ ಜೀಯರ್, ಮುಂತಾದವರು ಆಣ್ಡಾಳನ್ನೂ ಮತ್ತು ಅವಳ ತಿರುಪ್ಪಾವೈಯನ್ನೂ ಅವರ ಪಾಸುರಗಳಲ್ಲಿ, ಸ್ತೋತ್ರಗಳಲ್ಲಿ, ಐತಿಹ್ಯಮ್‍ಗಳಲ್ಲಿ, ಮತ್ತು ವ್ಯಾಖ್ಯಾನಗಳಲ್ಲಿ ವೈಭವೀಕರಿಸಿದ್ದಾರೆ.

ತಿರುಪ್ಪಾವೈ ಪೂರ್ವಾಚಾರ್‍ಯರಿಂದ ಹೀಗೆ ವೈಭವೀಕರಿಸಲ್ಪಟ್ಟಿದೆ:

ಪಾತಕ್ಕಂಗಳ್ ತೀರ್ಕ್ಕುಮ್ ಪರಮನಡಿ ಕಾಟ್ಟುಮ್

ವೇದಮ್ ಅನೈತ್ತುಕ್ಕುಮ್ ವಿತ್ತಾಗುಮ್

ಕೋದೈ ತಮಿೞ್ ಐಯೈನ್ದುಮ್ ಐನ್ದುಮ್ ಅಱಿಯಾದ ಮಾನಿಡರೈ

ವೈಯಮ್ ಸುಮಪ್ಪದುಮ್ ವಮ್ಬು

ತಿರುಪ್ಪಾವೈ ನಮ್ಮ ತೊಂದರೆಗಳನ್ನು ದೂರಮಾಡಿ ಪರಮಗುರಿಯಾದ ಕೈಂಕರ್‍ಯಮ್ ಪ್ರಾಪ್ತಿಯನ್ನು ಅವನ ಸಂತೋಷಕ್ಕಾಗಿ ನೆರವೇರಿಸುವುದು ಮತ್ತು ನಮ್ಮನ್ನು ಎಂಪೆರುಮಾನರ ತಿರುವಡಿಗಳಿಗೆ ಕರೆದೊಯ್ಯುವುದು. ಇದು ಎಲ್ಲಾ ವೇದಗಳ ಸಾರವಾಗಿದೆ. ಯಾರು ಈ ತಿರುಪ್ಪಾವೈಯನ್ನು ಅರಿತಿಲ್ಲವೋ ಅವರು ಈ ಭೂಮಿಗೆ ದೊಡ್ಡ ಭಾರವಾಗಿರುವರು.

ಪ್ರತಿಯೊಂದು ಮಾರ್ಗೞಿ ಮಾಸದಲ್ಲಿ ತಿರುಪ್ಪಾವೈನನ್ನು ಎಲ್ಲಾ ಕಡೆಯಲ್ಲೂ ಪಠಿಸಲಾಗುತ್ತದೆ, ಬೋಧಿಸಲಾಗುತ್ತದೆ, ಅದರ ಬಗ್ಗೆ ಹೇಳಲಾಗುತ್ತದೆ, ಮತ್ತು ಅದರ ಬಗ್ಗೆ ಬರೆಯಲಾಗುತ್ತದೆ. ಮೂರು ವರ್ಷಗಳ ಮಗುವಿನಿಂದ ಹಿಡಿದು 90 ವರ್ಷಗಳ ವೃದ್ಧರ ವರೆಗೂ ತಿರುಪ್ಪಾವೈ ಅನುಸಂಧಾನದಲ್ಲಿ ನಿರತರಾಗಿರುವುದನ್ನು ಕಾಣಬಹುದು. ಅದರ ಶಕ್ತಿ ಮತ್ತು ಆಕರ್ಷಣೆ ಅಂತಹುದು. ಮತ್ತು ಇವೆಲ್ಲವೂ ಆಣ್ಡಾಳ್ ಶಾಸ್ತ್ರಗಳ ಸಾರವನ್ನು ಈ 30 ಪಾಸುರಗಳಲ್ಲಿ ಪ್ರಸ್ತುತ ಪಡಿಸಿದ್ದಾಳೆ.

ಆದ್ದರಿಂದ, ಶಾಸ್ತ್ರದ ಸಾರವೆಂದರೇನು? ನಮ್ಮಾಳ್ವಾರರು ತಿರುವಾಯ್ಮೊೞಿಯ 4.6.8 ಪಾಸುರದಲ್ಲಿ ಸರಳ ಶಬ್ದಗಳಿಂದ ವಿವರಿಸಿದ್ದಾರೆ – “ವೇದಮ್ ವಲ್ಲಾರ್ಗಳೈಕ್ ಕೊಣ್ಡು ವಿಣ್ಣೋರ್ ಪೆರುಮಾನ್ ತಿರುಪ್ಪಾದಮ್ ಪಣಿ” , ಇದರ ಅರ್ಥ ಶಾಸ್ತ್ರದಲ್ಲಿ ಪಂಡಿತರಾದವರ (ಪೂರ್ವಾಚಾರ್‍ಯರ) ಸಹಾಯವನ್ನು ಪಡೆದುಕೊಂಡು , ಎಂಪೆರುಮಾನರನ್ನು ನಿತ್ಯಸೂರಿಗಳ (ಪೆರಿಯ ಪಿರಾಟ್ಟಿ, ಮುಂತಾದವರ)  ಮೂಲಕ ಸಮೀಪಿಸಬೇಕು ಮತ್ತು ಎಂಪೆರುಮಾನರ ದಿವ್ಯ ಪಾದ ಕಮಲಗಳನ್ನು ಸೇವಿಸಬೇಕು. ಕಳಂಕರಹಿತವಾದ ದಿವ್ಯ ಜ್ಞಾನವನ್ನು ಪಡೆದಿರುವ ನಮ್ಮಾಳ್ವಾರರು ಇಡೀ ವೇದದ ಸಾರವನ್ನು ಇಂತಹ ಸರಳವಾದ ಶಬ್ದಗಳಲ್ಲಿ ವಿವರಿಸಿದ್ದಾರೆ. ಎಲ್ಲಾ ಜೀವಾತ್ಮಗಳೂ ಇದನ್ನು ಅರ್ಥ ಮಾಡಿಕೊಂಡು, ಅದನ್ನು ಆಚರಣೆಯಲ್ಲಿ ತಂದರೆ, ಪರಮಗುರಿಯನ್ನು ಅವರು ಖಂಡಿತವಾಗಿಯೂ ಸೇರಬಹುದು ಮತ್ತು ಎಂಪೆರುಮಾನರಿಗೆ ನಿಷ್ಕಲ್ಮಶವಾಗಿ ಶಾಶ್ವತ ಸೇವೆಯನ್ನು ಸಲ್ಲಿಸಬಹುದು.

ಅೞಗಿಯ ಮಣವಾಳ ಪೆರುಮಾಳ್ ನಾಯನಾರವರು ಪಿಳ್ಳೈ ಲೋಕಾಚಾರ್‍ಯರ ತಮ್ಮನಾದವರು, ಅವರು ತಿರುಪ್ಪಾವೈಗೆ ಅದ್ಭುತವಾದ ವಿಸ್ತಾರವಾದ ವ್ಯಾಖ್ಯಾನವನ್ನು ನೀಡಿದ್ದಾರೆ. ಅರುಳಿಚೆಯ್ಯಲ್‍ನಲ್ಲಿ ಅವರನ್ನು ಮೀರಿಸಿದವರೇ ಇಲ್ಲ. ಉದಾಹರಣೆಗೆ, ಅವರು ಎಲ್ಲಾ ರಹಸ್ಯ ತ್ರಯಮ್‍ನನ್ನು (ತಿರುಮಂತ್ರಮ್, ದ್ವಯಮ್ ಮತ್ತು ಚರಮ ಶ್ಲೋಕವನ್ನು) ಪೂರ್ತಿಯಾಗಿ ಅರುಳಿಚೆಯ್ಯಲ್‍ನ ಶಬ್ದಗಳ ಮೂಲಕವೇ ಸಂಪೂರ್ಣವಾಗಿ ವಿವರಿಸಿದಾರೆ. ಆ ಸುಂದರವಾದ ಪ್ರಬಂಧವನ್ನು ‘ಅರುಳಿಚೆಯ್ಯಲ್ ರಹಸ್ಯಮ್’ ಎಂದು ಕರೆದಿದ್ದಾರೆ.

ಆಣ್ಡಾಳಳ ಶ್ರೇಷ್ಠತ್ವವು ಏನೆಂದರೆ ಅವಳು ಭಗವದ್ ಅನುಭವಮ್‍ಗೆ ಎಲ್ಲರನ್ನೂ ಸೇರಿಸಿಕೊಂಡಿದ್ದಾಳೆ. ಶಾಸ್ತ್ರದಲ್ಲಿ ಹೇಳಿಕೆಯಿದೆ “ಏಕ ಸ್ವತ್ ನ ಭುಂಜಿತ” , ಇದರ ಅರ್ಥ ಬೇರೆಯವರಿಗೆ ಹಂಚಿಕೊಳ್ಳದೇ ಯಾವುದನ್ನೂ ಒಬ್ಬರೇ ಆನಂದಿಸಬಾರದು. ಇದು ಭಗವತ್ ವಿಷಯದಲ್ಲಿ ಹೆಚ್ಚು ಅನ್ವಯವಾಗುತ್ತದೆ. ವಿಷಯಾಂತರಮ್ (ಲೌಕಿಕ ವಿಷಯಗಳ ಆನಂದವು) ಒಬ್ಬರೇ ಅನುಭವಿಸಬಹುದು, ಏಕೆಂದರೆ ಅದು ದೋಷಯುಕ್ತವಾಗಿರುತ್ತದೆ. ಆದರೆ ಭಗವತ್ ವಿಷಯವು ಎಲ್ಲರಿಗೂ ಅನ್ವಯವಾಗುವುದು. ಆದ್ದರಿಂದ ಅದನ್ನು ಎಲ್ಲರೊಂದಿಗೆ ಹಂಚಿ ಒಟ್ಟಿಗೇ ಆನಂದವನ್ನು ಪಡೆಯಬೇಕು. ಆಣ್ಡಾಳ್ ಇದನ್ನು ತನ್ನ ಅನುಷ್ಠಾನದಿಂದಲೇ ನಮಗೆ ತೋರಿಸಿದಳು. ಅವಳು ತನ್ನ ತಂದೆಯವರ ಹೆಜ್ಜೆಯನ್ನೇ ಹಿಂಬಾಲಿಸಿ, ಹೇಗೆ ಅವರು ತಮ್ಮ ತಿರುಪ್ಪಲ್ಲಾಂಡಿನಲ್ಲಿ ಮಂಗಳಾಶಾಸನವನ್ನು ಮಾಡುವಾಗ ಐಶ್ವರ್ಯಾರ್ಥಿಗಳನ್ನು ( ಸಂಪತ್ತಿಗಾಗಿ ಇಚ್ಛೆ ಹೊಂದಿರುವವರನ್ನು), ಕೈವಲ್ಯಾರ್ಥಿಗಳನ್ನು (ಆತ್ಮಾನುಭವವನ್ನು ಅಪೇಕ್ಷಿಸುವವರನ್ನು) ಮತ್ತು ಭಗವತ್ ಕೈಂಕರ್‍ಯಾರ್ಥಿಗಳನ್ನು (ಭಗವತ್ ಕೈಂಕರ್‍ಯವನ್ನು ಬಯಸುವವರನ್ನು) ಆಮಂತ್ರಿಸುತ್ತಾರೋ, ಹಾಗೆಯೇ ಆಣ್ಡಾಳ್ ಕೂಡಾ ಎಲ್ಲರನ್ನೂ ಭಗವತ್ ಕೈಂಕರ್‍ಯದಲ್ಲಿ ನಿರತರಾಗಲು ಆಮಂತ್ರಿಸುತ್ತಾಳೆ.

ನಾಯನಾರರು ತಮ್ಮ 6000 ಪಡಿ ವ್ಯಾಖ್ಯಾನದಲ್ಲಿ , ವಂಗ ಕ್ಕಡಲ್ (ಕೊನೆಯ) ಪಾಸುರದ ಅವತಾರಿಕೈನಲ್ಲಿ, ತಿರುಪ್ಪಾವೈನ ಮೊದಲ ಪ್ರತಿಯೊಂದು 29 ಪಾಸುರಗಳ ಅರ್ಥಗಳನ್ನು , ಅತಿ ಸುಂದರವಾಗಿ ಸಾರಾಂಶಿಸುತ್ತಾರೆ. ಒಂದೇ ವಾಕ್ಯದಲ್ಲಿ ಇಡೀ ಪಾಸುರದ ಸಾರವನ್ನು ವಿವರಿಸಿರುವ ನಾಯನಾರವರ ಅಮೋಘ ಪಾಂಡಿತ್ಯವನ್ನು ಅನೇಕ ಮೇಧಾವಿಗಳು ಕೊಂಡಾಡಿದ್ದಾರೆ. ಈಗ ನಾವು ತಿರುಪ್ಪಾವೈನ ಸಾರವನ್ನು ಆ ದಿವ್ಯ ಶಬ್ದಗಳಿಂದ ನೋಡೋಣ.:

 • ಮೊದಲನೆಯ ಪಾಸುರದಲ್ಲಿ, ಆಣ್ಡಾಳ್ ಕಾಲವನ್ನು ಕೊಂಡಾಡುತ್ತಾಳೆ (ಕಾಲ – ಮಾರ್ಗಳಿ ಮಾಸ, ಸುಂದರವಾದ ದಿನ), ಕಣ್ಣನ್ ಎಂಪೆರುಮಾನರ ಮೇಲೆ ಸಂಪೂರ್ಣವಾಗಿ ಅವಲಂಬಿತರಾದ ಗೋಪರು ಮತ್ತು ಗೋಪಿಕೆಯರು ಕೃಷ್ಣಾನುಭವವನ್ನು ಹೊಂದಲು ಅವಳಿಗೆ ನೆರವಾಗುತ್ತಾರೆ. ಆಣ್ಡಾಳ್ ಅವರಿಗೆ ಎಂಪೆರುಮಾನರೇ ಎರಡೂ ಉಪಾಯಮ್ (ಮಾಧ್ಯಮ – ಮಾರ್ಗ) ಮತ್ತು ಉಪೇಯಮ್ (ಗುರಿ) ಎಂದು ತೋರಿಸುತ್ತಾಳೆ. ಅವಳ ಪ್ರಮುಖ ಗುರಿ ಕೃಷ್ಣಾನುಭವದಲ್ಲಿ ನಿರತವಾಗುವುದು. ಆದ್ದರಿಂದ ಅವಳು ಮತ್ತು ಇನ್ನಿತರ ಗೋಪಿಕೆಯರು ಭಗವತ್ ಅನುಭವದಲ್ಲಿ ಮುಳುಗಲು, ಅವಳು ಸಂಕಲ್ಪ (ದೀಕ್ಷೆ) ಪಡೆದುಕೊಂಡು ನೋಂಬು ( ವ್ರತ – ಒಂದು ಅಪ್ರಮುಖವಾದ ನೆಪದಲ್ಲಿ) ಆಚರಿಸುತ್ತಾಳೆ.
 • ಎರಡನೆಯ ಪಾಸುರದಲ್ಲಿ, ಅವಳು ಭಗವತ್ ಅನುಭವದಲ್ಲಿ ನಿರತವಾಗುವಾಗ ಯಾವುದನ್ನು ಸ್ವೀಕರಿಸಬೇಕು ಮತ್ತು ಯಾವುದನ್ನು ನಿರಾಕರಿಸಬೇಕು ಎಂದು ಗುರುತಿಸಿ ಕೊಡುತ್ತಾಳೆ. ಅವಳು ಸ್ಪಷ್ಟವಾಗಿ ಇದನ್ನು ಸ್ಥಾಪಿಸುತ್ತಾಳೆ, “ಮೇಲೈಯಾರ್ ಸೆಯ್‍ವನಗಳ್ “ . ಇದರ ಅರ್ಥ, ನಮ್ಮ ಹಿರಿಯರಿಂದ (ಪೂರ್ವಾಚಾರ್‍ಯರಿಂದ) ಆಚರಿಸಲ್ಪಟ್ಟ ಕ್ರಮಗಳು ನಮಗೆ (ಪ್ರಪನ್ನರಿಗೆ) ಬಹಳ ಪ್ರಾಮುಖ್ಯವಾದುದು – ಪ್ರಮಾಣಮ್.
 • 3ನೆಯ ಪಾಸುರದಲ್ಲಿ, ಅವಳು ವೃಂದಾವನದಲ್ಲಿರುವ ಎಲ್ಲರ ಅಭಿವೃದ್ಧಿಗಾಗಿ, ಹಿತಕ್ಕಾಗಿ ತನ್ನ ನೋಂಬಿನ ಇನ್ನೊಂದು ಪರಿಣಾಮವಾಗಿ (ಪ್ರಯೋಜನವಾಗಿ) ಆಶಿಸುತ್ತಾಳೆ. ಏಕೆಂದರೆ ಅವರೆಲ್ಲರೂ ಅವಳಿಗೆ ಮತ್ತು ಅವಳ ಸ್ನೇಹಿತೆಯರನ್ನು ಕೃಷ್ಣಾನುಭವವನ್ನು ಪಡೆಯಲು ಅನುಮತಿಸುತ್ತಾರೆ. ಮೊದಲ ಗುರಿಯು – ಪ್ರಯೋಜನವು ಖಂಡಿತವಾಗಿಯೂ ಯಾವಾಗಲೂ ಎಲ್ಲರೂ ಕೃಷ್ಣಾನುಭಾವವನ್ನು ಪಡೆಯುವುದು.
 • 4ನೆಯ ಪಾಸುರದಲ್ಲಿ, ಅವಳು ಪರ್ಜನ್ಯ ದೇವನಿಗೆ (ಮಳೆಯ ದೇವತೆಗೆ) ಎಲ್ಲರ ಅವಶ್ಯಕತೆಗೆ ತಕ್ಕಂತೆ ಮಳೆಯನ್ನು ಸುರಿಸುವಂತೆ (3 ಸಾರಿ ಒಂದು ತಿಂಗಳಿಗೆ, ಅಥವಾ 10 ದಿನಗಳಿಗೆ ಒಮ್ಮೆ – ಒಂದು ಸಾರಿ ಬ್ರಾಹ್ಮಣರಿಗೆ, ಒಂದು ಸಾರಿ ರಾಜನಿಗಾಗಿ, ಒಂದು ಸಾರಿ ಪತಿವ್ರತೆಯರಿಗಾಗಿ) ಆಜ್ಞೆಯನ್ನು ಕೊಡುತ್ತಾಳೆ. ಇದರಿಂದ ವೃಂದಾವನದ ಜನತೆಯು ಸಮೃದ್ಧಿಯನ್ನು ಹೊಂದಿ ಅವರ ಕೃಷ್ಣಾನುಭವಕ್ಕೆ ಅಡೆತಡೆ ಇಲ್ಲದಂತೆ ನೆರವೇರಬೇಕೆಂದು.
 • 5ನೆಯ ಪಾಸುರದಲ್ಲಿ, ಅವಳು ನಿರಂತರವಾಗಿ ನಾಮ ಸಂಕೀರ್ತನಮ್‍ನಲ್ಲಿ ಭಾಗವಹಿಸಿದರೆ, ನಮ್ಮ ಹಿಂದಿನ ಮತ್ತು ಭವಿಷ್ಯದ ಕರ್ಮಗಳು  (ಪಾಪ ಮತ್ತು ಪುಣ್ಯಗಳು) ನಾಶವಾಗಿ ಹೋಗುತ್ತವೆ. ಉಪನಿಶದ್‍ಗಳಲ್ಲಿ ತೋರಿಸಿರುವ ಹಾಗೆ ಯಾವಾಗ ಒಬ್ಬರು ಎಂಪೆರುಮಾನರಿಗೆ ಶರಣಾಗುತ್ತಾರೋ, ಆಗ ಅವರ ಹಿಂದಿನ ಕರ್ಮಗಳು ಹೇಗೆ ಹತ್ತಿಗೆ ಬೆಂಕಿ ಹತ್ತಿಕೊಂಡರೆ ಸುಟ್ಟು ಹೋಗುತ್ತದೆಯೋ ಹಾಗೆ ನಿರ್ಮೂಲನೆಯಾಗುತ್ತದೆ ಮತ್ತು ಭವಿಷ್ಯದಲ್ಲಿನ ಕರ್ಮಗಳು ಹೇಗೆ ನೀರಿನ ಬಿಂದುಗಳು ತಾವರೆಗೆ ಅಂಟಿಕೊಳ್ಳುವುದಿಲ್ಲವೋ ಹಾಗೆ ಅವರನ್ನು ಬಿಟ್ಟು ಬಿಡುತ್ತವೆ. ಅವರು ಉದ್ದೇಶರಹಿತವಾಗಿ ಮಾಡಿದ ಕರ್ಮಗಳು ನಿರ್ಮೂಲನೆ ಹೊಂದಿ, ಉದ್ದೇಶಪೂರ್ವಕವಾಗಿ ಮಾಡಿದ ಕರ್ಮಗಳು ಅವುಗಳ ಫಲವನ್ನು ಅನುಭವಿಸಿದ ಮೇಲೆ ಶೂನ್ಯವಾಗುತ್ತವೆ.
 • 6ನೆಯ ಪಾಸುರದಿಂದ 15ನೆಯ ಪಾಸುರದವರೆಗೂ, ಆಣ್ಡಾಳ್ 10 ಬೇರೆ ಬೇರೆ ಗೋಪಿಕೆಯರ (ಯಾರು ಕಣ್ಣನ್ ಎಂಪೆರುಮಾನರಿಗೆ ಸಂಪೂರ್ಣವಾಗಿ ಪ್ರಿಯರಾಗಿದ್ದಾರೋ) ಮನೆಗೆ ಹೋಗಿ ಅವರನ್ನು ಎಬ್ಬಿಸುತ್ತಾಳೆ. ಅಲ್ಲಿಗೆ ಹೋಗುವಾಗ ಅವಳು ಅತ್ಯಂತ ಕಾತುರರಾದ ಮತ್ತಿತರ ಗೋಪಿಕೆಯರನ್ನು ಕರೆದುಕೊಂಡು, ಕೊನೆಯಲ್ಲಿ ತಿರುಮಾಳಿಗೆಯಲ್ಲಿರುವ ಕಣ್ಣನ್ ಎಂಪೆರುಮಾನರ ಹತ್ತಿರ ಹೋಗುತ್ತಾಳೆ.
 • 6 ನೆಯ ಪಾಸುರದಲ್ಲಿ, ಅವಳು ಕೃಷ್ಣಾನುಭವದಲ್ಲಿ ಹೊಸದಾಗಿರುವ ಗೋಪಿಕೆಯನ್ನು ಎಬ್ಬಿಸುತ್ತಾಳೆ. ಇದರ ಅರ್ಥ, ಈ ಗೋಪಿಯು ಕಣ್ಣನ್ ಎಂಪೆರುಮಾನರನ್ನು ತನ್ನಲ್ಲೇ ತಾನು ಆನಂದಿಸಿ ತೃಪ್ತಿ ಪಡುತ್ತಿರುತ್ತಾಳೆ. ಅದು ಮೊದಲ ಹಂತದ ಅನುಭವ – ಪ್ರಥಮ ಪರ್ವ ನಿಷ್ಠೆ. ಯಾವಾಗ ಭಾಗವತ ಸಂಶ್ಲೇಷಮ್‍ನ (ಭಾಗವತರೊಂದಿಗೆ ಕೂಡಿಕೆ) ತತ್ತ್ವದ ಆಧಾರವನ್ನು ಅರ್ಥ ಮಾಡಿಕೊಳ್ಳುತ್ತಾರೋ, ಅದು ಚರಮ ಪರ್ವ ನಿಷ್ಠೈಗೆ ದಾರಿ ತೋರಿಸುತ್ತದೆ.
 • 7 ನೆಯ ಪಾಸುರದಲ್ಲಿ, ಅವಳು ಕೃಷ್ಣಾನುಭವದಲ್ಲಿ ಪರಿಣಿತಳಾಗಿರುವ ಗೋಪಿಕೆಯನ್ನು ಎಬ್ಬಿಸುತ್ತಾಳೆ. ಆ ಗೋಪಿಕೆಯು ತಾನು ಎಚ್ಚರದಲ್ಲಿದ್ದರೂ, ಆಣ್ಡಾಳ್ ಮತ್ತು ಅವಳ ಗೆಳತಿಯರ ಮಧುರವಾದ ಧ್ವನಿಯನ್ನು ಕೇಳಲು ಕಾಯುತ್ತಿರುತ್ತಾಳೆ.
 • 8 ನೆಯ ಪಾಸುರದಲ್ಲಿ, ಅವಳು ಒಬ್ಬ ಗೋಪಿಕೆಯನ್ನು ಕಣ್ಣನ್ ಎಂಪೆರುಮಾನರಿಗೆ ಅತ್ಯಂತ ಪ್ರಿಯಳಾಗಿರುವುದರಿಂದ ತಾನು ಅತ್ಯಂತ ಹರ್ಷಗೊಂಡು, ಅದರಿಂದ ಶ್ರೇಷ್ಠತೆಯನ್ನು ಹೊಂದಿ, ನಿದ್ರೆ ಹೋಗಲು ಸಾಧ್ಯವಿಲ್ಲದೇ ಇರುವವಳನ್ನು ಎಬ್ಬಿಸುತ್ತಾಳೆ.
 • 9 ನೆಯ ಪಾಸುರದಲ್ಲಿ, ಅವಳು ಎಂಪೆರುಮಾನರೇ ಉಪಾಯವೆಂದು ಅತ್ಯಂತ ಬಲವಾಗಿ ನಂಬಿರುವ ಮತ್ತು ಅವನೊಡನೆ ವಿವಿಧವಾದ ಅನುಭವಗಳನ್ನು ಹೊಂದಿರುವ ಗೋಪಿಕೆಯನ್ನು ಎಬ್ಬಿಸುತ್ತಾಳೆ. ಆ ಗೋಪಿಕೆಯು ಸೀತಾ ಪಿರಾಟ್ಟಿಯು ಹನುಮಂತನಿಗೆ ಹೇಳುವಂತೆ, “ಶ್ರೀ ರಾಮನೇ ಬಂದು ನನ್ನನ್ನು ಕಾಪಾಡಲಿ” ಎಂಬಂತೆ.
 • 10 ನೆಯ ಪಾಸುರದಲ್ಲಿ, ಅವಳು ಕಣ್ಣನ್ ಎಂಪೆರುಮಾನರಿಗೆ ಅತ್ಯಂತ ಪ್ರಿಯಳಾಗಿರುವ ಗೋಪಿಯನ್ನು ಎಬ್ಬಿಸುತ್ತಾಳೆ. ಅವಳನ್ನು ‘ಸಿದ್ಧ ಸಾಧನ ನಿಷ್ಠರ್’ ಎಂದು ವಿವರಿಸುವಂತೆ ಅವಳು ಎಂಪೆರುಮಾನರಿಗೆ ಸಂಪೂರ್ಣವಾಗಿ ಶರಣಾಗಿರುತ್ತಾಳೆ, ಆದ್ದರಿಂದ ಕಣ್ಣನಿಗೆ ಅವಳನ್ನು ಕಂಡರೆ ಬಹಳ ಪ್ರೀತಿ.
 • 11ನೆಯ ಪಾಸುರದಲ್ಲಿ, ಅವಳು ವೃಂದಾವನದಲ್ಲಿಯೇ ಅತ್ಯಂತ ಜನಪ್ರಿಯವಾದ ಗೋಪಿಕೆಯನ್ನು ಎಬ್ಬಿಸುತ್ತಾಳೆ. (ಆ ಗೋಪಿಕೆಯು ಕಣ್ಣನ್ ಎಂಪೆರುಮಾನರಂತೆಯೇ ಅತ್ಯಂತ ಪ್ರಿಯಳಾದವಳು ವೃಂದಾವನದಲ್ಲಿಯೇ). ಈ ಪಾಸುರದಲ್ಲಿ ಪ್ರತಿಯೊಬ್ಬರೂ ಅವರವರ ವರ್ಣಾಶ್ರಮದ ಪ್ರಕಾರ ಮಾಡುವ ಕರ್ತವ್ಯಗಳ ಮುಖ್ಯತ್ವವನ್ನು ದೃಢೀಕರಿಸಲಾಗಿದೆ.
 • 12 ನೆಯ ಪಾಸುರದಲ್ಲಿ, ಅವಳು ಕಣ್ಣನ್ ಎಂಪೆರುಮಾನರ ಅತ್ಯಂತ ಪ್ರಿಯ ಸಖನ ತಂಗಿಯನ್ನು ಎಬ್ಬಿಸುತ್ತಾಳೆ. ಆದರೆ ಆ ಸಖನು ತನ್ನ ವರ್ಣಾಶ್ರಮದ ಕರ್ತವ್ಯಗಳನ್ನು ಸರಿಯಾಗಿ ಪಾಲಿಸುವುದಿಲ್ಲ. ಎಂಪೆರುಮಾನರನ್ನು ಸದಾಕಾಲ ಹತ್ತಿರದಲ್ಲಿಯೇ ನೋಡುತ್ತಾ, ಅವರನ್ನು ಸದಾಕಾಲ ನಿರಂತರವಾಗಿ ಪ್ರೀತಿಸುವ ಸೇವೆಯನ್ನು ಮಾಡುವುದರಲ್ಲಿ ನಿರತರಾಗಿರುವವರಿಗೆ ತಮ್ಮ ಹೊರಗಿನ ಕರ್ತವ್ಯಗಳನ್ನು ಮಾಡಲು ಸಮಯವೂ ಮತ್ತು ಅದರ ಅವಶ್ಯಕತೆಯೂ ಇರುವುದಿಲ್ಲ. ಆದರೆ ಎಂಪೆರುಮಾನರಿಗೆ ಭಕ್ತಿಯಿಂದ ಮಾಡುವ ಸೇವೆಯಿಂದ ಯಾರಾದರೂ ನಿವೃತ್ತರಾದರೆ, ಆ ಕ್ಷಣವೇ ಅವರ ಇತರ ಕರ್ತವ್ಯಗಳು ಆದ್ಯತೆಗೆ ಒಳಪಡುತ್ತದೆ ಮತ್ತು ತಕ್ಷಣವೇ ಜಾರಿಗೆ ಬರುತ್ತದೆ.
 • 13 ನೆಯ ಪಾಸುರದಲ್ಲಿ, ಅವಳು ತನ್ನ ಕಣ್ಣುಗಳ ಅಂದವನ್ನೇ ನೋಡುತ್ತಾ ತನ್ನಷ್ಟಕ್ಕೇ ಆನಂದಿಸುತ್ತಿರುವ ಗೋಪಿಕೆಯನ್ನು ಎಬ್ಬಿಸುತ್ತಾಳೆ. ಇಲ್ಲಿ ಕಣ್ಣುಗಳು ಎಂದರೆ ಜ್ಞಾನವೆಂದು ಅರ್ಥ. ಆ ಗೋಪಿಕೆಗೆ ಎಂಪೆರುಮಾನರ ಬಗ್ಗೆ ಪೂರ್ತಿಯಾದ ಜ್ಞಾನವಿರುವುದರಿಂದ , ಅವಳು ಕಣ್ಣನ್ ಎಂಪೆರುಮಾನರು ತಾವೇ ಬರುತ್ತಾರೆಂದು ಯೋಚಿಸುತ್ತಾಳೆ. ಕಣ್ಣನ್ ಎಂಪೆರುಮಾನರು ಅರವಿಂದ ಲೋಚನರಾಗಿರುವುದರಿಂದ (ತಾವರೆಯಂತಹ ಕಣ್ಣುಗಳನ್ನು ಹೊಂದಿರುವವರು) ಈ ಸುಂದರ ಕಣ್ಣುಗಳುಳ್ಳ ಗೋಪಿಕೆಯು ಅವರಿಗೆ ಒಳ್ಳೆಯ ಜೋಡಿ ಎಂದು ವಿವರಿಸಲಾಗಿದೆ.
 • 14 ನೆಯ ಪಾಸುರದಲ್ಲಿ, ಅವಳು ಇತರರನ್ನು ತಾನೇ ಬಂದು ಎಬ್ಬಿಸುವೆ ಎಂದು ಮಾತು ಕೊಟ್ಟ ಆದರೆ ಆ ಮಾತನ್ನು ಮರೆತುಬಿಟ್ಟು ಮನೆಯಲ್ಲೇ ಉಳಿದಿರುವ ಗೋಪಿಕೆಯನ್ನು ಎಬ್ಬಿಸುತ್ತಾಳೆ.
 • 15 ನೆಯ ಪಾಸುರದಲ್ಲಿ, ತನ್ನ ತಿರುಮಾಳಿಗೆಯಲ್ಲಿ ಆಣ್ಡಾಳ್ ಮತ್ತು ಅವಳ ಗೆಳತಿಯರು ಬರುತ್ತಿರುವ ಸುಂದರವಾದ ನೋಟವನ್ನು ಕಾಣಲು ಕಾದು ಕುಳಿತಿರುವ ಗೋಪಿಕೆಯನ್ನು ಆಣ್ಡಾಳ್ ಎಬ್ಬಿಸಲು ಬರುತ್ತಾಳೆ.
 • 16ನೆಯ ಮತ್ತು 17ನೆಯ ಪಾಸುರದಲ್ಲಿ, ನಿತ್ಯ ಸೂರಿಗಳ ಸ್ಥಳೀಯ ಪ್ರತಿನಿಧಿಗಳನ್ನು , ಯಾರೆಂದರೆ, ಕ್ಷೇತ್ರ ಪಾಲಕರನ್ನು ( ಮುಖ್ಯ ಪ್ರವೇಶದ ಪಾಲಕರನ್ನು), ದ್ವಾರ ಪಾಲಕರನ್ನು, ಆದಿ ಶೇಷನನ್ನು ಮುಂತಾದವರನ್ನು ಆಣ್ಡಾಳ್ ಎಬ್ಬಿಸಲು ಬರುತ್ತಾಳೆ.
 • 16 ನೆಯ ಪಾಸುರದಲ್ಲಿ, ಅವಳು ಮುಖ್ಯ ಪ್ರವೇಶದ ಭದ್ರತಾ ಸಿಬ್ಬಂದಿಗಳನ್ನು ಮತ್ತು ಶ್ರೀ ನಂದಗೋಪನ ಮಂದಿರದ ಹೊರಗಿರುವ ದ್ವಾರಪಾಲಕರನ್ನು ಎಬ್ಬಿಸಲು ಬರುತ್ತಾಳೆ.
 • 17 ನೆಯ ಪಾಸುರದಲ್ಲಿ, ಅವಳು ಶ್ರೀ ನಂದಗೋಪನ್, ಯಶೋಧಾ ಮತ್ತು ಬಲರಾಮನನ್ನು ಎಬ್ಬಿಸಲು ಬರುತ್ತಾಳೆ.
 • 18ನೆಯ, 19ನೆಯ ಮತ್ತು 20ನೆಯ ಪಾಸುರಗಳಲ್ಲಿ, ಅವಳು ಕಣ್ಣನ್ ಎಂಪೆರುಮಾನರನ್ನು ಎಬ್ಬಿಸಲಾಗದ್ದರಿಂದ, ಅವಳಿಗೆ ತಾನು ನಪ್ಪಿನ್ನೈ ಪಿರಾಟ್ಟಿಯ ಪುರುಷಕಾರಮ್‍ನ ರಹಿತವಾಗಿ ಪ್ರಯತ್ನ ಪಡುತ್ತಿರುವುದಾಗಿ ಮನಗಂಡಳು. ಈ ಮೂರು ಪಾಸುರಗಳಲ್ಲಿ, ಆಣ್ಡಾಳ್ ನಪ್ಪಿನ್ನೈ ಪಿರಾಟ್ಟಿಯ ಶ್ರೇಷ್ಠತೆಯನ್ನು, ಕಣ್ಣನ್ ಎಂಪೆರುಮಾನರಿಗೆ ಅವಳು ಅತ್ಯಂತ ಸನಿಹದವಳೆಂದು, ಅತ್ಯಂತ ಆನಂದದಾಯಿಕೆ ಎಂದೂ, ಅತ್ಯಂತ ಸುಕೋಮಲೆಯೆಂದೂ, ಸುಂದರ ರೂಪ ಹೊಂದಿರುವಳೆಂದೂ, ಕಣ್ಣನ್ ಎಂಪೆರುಮಾನರಿಗೆ ಅತ್ಯಂತ ಪ್ರಿಯಳಾದವಳೆಂದೂ, ಮತ್ತು ಕೊನೆಯಲ್ಲಿ ಅವಳ ಎಂಪೆರುಮಾನರ ಹತ್ತಿರ ಮಾಡುವ ಪುರುಷಕಾರತ್ವಮ್‍ನನ್ನೂ (ಅವಳ ಶಿಫಾರಸ್ಸಿನ ಅಧಿಕಾರವನ್ನೂ) ಆಣ್ಡಾಳ್ ವೈಭವೀಕರಿಸುತ್ತಾಳೆ. ಪಿರಾಟ್ಟಿಯನ್ನು ನಿರ್ಲಕ್ಷಿಸಿ, ಎಂಪೆರುಮಾನರನ್ನು ಮಾತ್ರವೇ ಬಯಸುವುದು ಶೂರ್ಪಣಕಿಯು ಶ್ರೀ ರಾಮನನ್ನು ಆಸೆಪಡುವಂತೆ. ಮತ್ತು ಪಿರಾಟ್ಟಿಯನ್ನು ಮಾತ್ರವೇ ಬಯಸಿ, ಎಂಪೆರುಮಾನರನ್ನು ನಿರ್ಲಕ್ಷಿಸುವುದು, ರಾವಣನ ಆಸೆಯಂತೆ (ಸೀತಾ ಪಿರಾಟ್ಟಿಯನ್ನು ಮಾತ್ರ ಆಸೆ ಪಡುವಂತೆ). ಎಂಪೆರುಮಾನಾರರಿಗೆ 18ನೆಯ ಪಾಸುರವಾದ ಉನ್ದು ಮದಕಲಿರಱ್ಱನ್ ಪಾಸುರವು ಅತ್ಯಂತ ಪ್ರಿಯವಾದುದು ಎಂದು ಗುರುತಿಸಲಾಗಿದೆ.
 • 21 ನೆಯ ಪಾಸುರದಲ್ಲಿ, ಅವಳು ಕಣ್ಣನ್ ಎಂಪೆರುಮಾನರ ಶ್ರೇಷ್ಠ ಗುಣಗಳಾದ ಶ್ರೀನಂದಗೋಪನಿಗೆ ತಿರುಮಗನಾಗಿ ಜನಿಸಿರುವುದು, ಅವನ ಪರತ್ವಮ್ (ಶ್ರೇಷ್ಠತೆ), ಅವನ ದೃಢ ಪ್ರಾಮಾಣ್ಯತ್ವಮ್ (ಶಾಸ್ತ್ರದಲ್ಲಿ ಹೇಳಿರುವ ಹಾಗೆ ಅವನೇ ಎಲ್ಲರಿಗಿಂತ ಸರ್ವೋಚ್ಚ), ಮುಂತಾದುವುಗಳನ್ನು ವೈಭವೀಕರಿಸುತ್ತಾಳೆ.
 • 22 ನೆಯ ಪಾಸುರದಲ್ಲಿ, ಅವಳು ಎಂಪೆರುಮಾನರಿಗೆ ತಿಳಿಸುವುದೇನೆಂದರೆ ಅವಳು ಮತ್ತು ಅವಳ ಗೆಳತಿಯರಿಗೆ ಬೇರೆ ಯಾವ ಆಶ್ರಯವೂ ಇಲ್ಲದೆ, ಅವರು ಎಂಪೆರುಮಾನರ ಹತ್ತಿರ ವಿಭೀಷಣನ್ ಶ್ರೀರಾಮನ ಹತ್ತಿರ ಆಶ್ರಯಕ್ಕಾಗಿ ಬರುವಂತೆ ಬಂದಿರುತ್ತಾರೆ. ಅವಳು ಎಂಪೆರುಮಾನರಿಗೆ ಹೇಳುತ್ತಾಳೆ ಅವಳು ಬೇರೆ ಎಲ್ಲಾ ಆನಂದಗಳನ್ನೂ, ಲಗತ್ತನ್ನೂ ಬಿಟ್ಟು ಬಂದಿದ್ದಾಳೆ , ಅವನ ದಿವ್ಯ ಆಶೀರ್ವಾದಕ್ಕಾಗಿಯೇ ಎಂದು.
 • 23 ನೆಯ ಪಾಸುರದಲ್ಲಿ, ಕಣ್ಣನ್ ಎಂಪೆರುಮಾನರು ಅವಳನ್ನು ಇಷ್ಟು ಹೊತ್ತು ಕಾಯುವಂತೆ ಮಾಡಿದ್ದಕ್ಕಾಗಿ, ಅವಳಿಗೆ ಏನು ಬೇಕೆಂದು ಕೇಳುತ್ತಾರೆ. ಅದಕ್ಕೆ ಅವಳು ಎಂಪೆರುಮಾನರಿಗೆ ನಿಮ್ಮ ಶಯನದಿಂದ ಮೇಲೆ ಎದ್ದು, ಕೆಲವು ಹೆಜ್ಜೆಗಳನ್ನು ನಡೆದು ಬಂದು, ತಮ್ಮ ಸಿಂಹಾಸನದ ಮೇಲೆ ಕುಳಿತುಕೊಂಡು, ಅವರೆಲ್ಲರ ವಿನತಿಯನ್ನು ಸಿಂಹ ರಾಜದ ಹಾಗೆ ಕೇಳಬೇಕೆಂದು ವಿನಂತಿಸಿ ಕೊಳ್ಳುತ್ತಾಳೆ.
 • 24 ನೆಯ ಪಾಸುರದಲ್ಲಿ, ಎಂಪೆರುಮಾನರು ಕುಳಿತಿದ್ದನ್ನು ಕಂಡು, ಆಣ್ಡಾಳ್ ಸಂತೋಷದಿಂದ ಅವರಿಗೆ ಮಂಗಳಾಶಾಸನವನ್ನು ಮಾಡುತ್ತಾಳೆ. ಪೆರಿಯಾಳ್ವಾರರಿಗೆ ಮಗಳಾಗಿದ್ದರಿಂದ, ಸಹಜವಾಗಿ ಅವಳ ಪರಮಗುರಿ ಎಂಪೆರುಮಾನರಿಗೆ ಮಂಗಳಾಶಾಸನವನ್ನು ಮಾಡುವುದೇ ಆಗಿರುತ್ತದೆ. ಸೀತಾಪಿರಾಟ್ಟಿ, ದಂಡಕಾರಣ್ಯದಲ್ಲಿರುವ ಋಷಿಗಳು, ಪೆರಿಯಾಳ್ವಾರ್ ಮುಂತಾದವರಂತೆ ಆಣ್ಡಾಳ್ ಮತ್ತು ಅವಳ ಗೆಳತಿಯರು ಎಂಪೆರುಮಾನರು ನಡೆದು ಬರುವುದನ್ನು ನೋಡಿದ ತಕ್ಷಣವೇ ಮಂಗಳಾಶಾಸನವನ್ನು ಮಾಡುತ್ತಾರೆ. ಅವರು ತಾವು, ಎಂಪೆರುಮಾನರು ತಮ್ಮ ಕೋಮಲ ತಾವರೆಯಂತಹ ಪಾದಗಳಿಂದ ನಡೆದು ಬರುವಂತೆ ಮಾಡಿದ್ದನ್ನು ಮನವರಿಕೆ ಮಾಡಿಕೊಳ್ಳುತ್ತಾರೆ.
 • 25 ನೆಯ ಪಾಸುರದಲ್ಲಿ, ಎಂಪೆರುಮಾನರು ಅವರನ್ನು ಅವರ ನೋಂಬು ವ್ರತವನ್ನು ಕೈಂಗೊಂಡಿದ್ದಕ್ಕಾಗಿ ಏನಾದರೂ ಬೇಕೆ ಎಂದು ಕೇಳುತ್ತಾರೆ. ಅದಕ್ಕೆ ಅವರು, ತಾವು ಎಂಪೆರುಮಾನರ ದಿವ್ಯ ಗುಣಗಳನ್ನು ಹಾಡಿ ಹೊಗಳಿದ್ದರಿಂದ ತಮ್ಮ ಎಲ್ಲಾ ಶೋಕಗಳೂ ನಿರ್ಮೂಲನೆಗೊಂಡು, ಈಗ ಅವರಿಗೆ ತಾವು ಎಂಪೆರುಮಾನರಿಗೆ ಕೈಂಕರ್‍ಯವನ್ನು ಮಾತ್ರ ಮಾಡಬೇಕೆಂದು ತಮ್ಮ ಆಸೆಯನ್ನು ವ್ಯಕ್ತ ಪಡಿಸುತ್ತಾರೆ.
 • 26 ನೆಯ ಪಾಸುರದಲ್ಲಿ, ಅವಳು ತನ್ನ ನೋಂಬಿಗಾಗಿ ಸಂಗೀತ ವಾದ್ಯಗಳು ಬೇಕೆಂದು ಕೇಳುತ್ತಾಳೆ. ಆದರೆ ಆಣ್ಡಾಳ್ ಮೊದಲು ತನಗೆ ಎಂಪೆರುಮಾನರನ್ನು ಬಿಟ್ಟರೆ ಏನೂ ಬೇಡವೆಂದು, ಈಗ ಅವಳು ಒಂದು ವಾದ್ಯವಾದ ಪಾಂಚಜನ್ಯವನ್ನು ಬೇಕೆಂದು ಕೇಳುತ್ತಾಳೆ. ಅವನಿಗೆ ಮಂಗಳಾಶಾಸನವನ್ನು ಮಾಡಲು ಕೆಲವು ಕೈಂಕರ್‍ಯಪರರನ್ನು, ಒಂದು ದೀಪ – ಎಂಪೆರುಮಾನರ ಮುಖವನ್ನು ಸ್ಪಷ್ಟವಾಗಿ ನೋಡಲು, ದೂರದಿಂದ ನೋಡಿದರೆ ಅವನ ಇರುವಿಕೆಯನ್ನು ತಿಳಿಸುವ ಒಂದು ಧ್ವಜ, ಒಂದು ಛತ್ರಿ (ಕೊಡೆ) ಇಷ್ಟನ್ನೂ ಕೇಳುತ್ತಾಳೆ. ನಮ್ಮ ಆಚಾರ್‍ಯರು ಆಣ್ಡಾಳ್ ಈ ವಸ್ತುಗಳನ್ನು ಬೇಡಿದ್ದು, ಕೃಷ್ಣಾನುಭವವನ್ನು ಸಂಪೂರ್ಣವಾಗಿ ಸರಿಯಾಗಿ ಪಡೆಯಲು. ಈ ಪಾಸುರದಲ್ಲಿ, ಆಣ್ಡಾಳ್ ಮತ್ತು ಅವಳ ಗೆಳತಿಯರು ಎಂಪೆರುಮಾನರ ಮೇಲೆ ಇಟ್ಟ ಪ್ರೀತಿಗಿಂತ, ಎಂಪೆರುಮಾನರು ಅವರ ಮೇಲೆ ತೋರಿಸಿದ ಪ್ರೀತಿ, ಕರುಣೆಯು ಹೆಚ್ಚಾದದು ಎಂದು ಆಣ್ಡಾಳ್ ತೋರಿಸುತ್ತಾಳೆ.
 • 27 ನೆಯ ಮತ್ತು 28 ನೆಯ ಪಾಸುರದಲ್ಲಿ, ಪ್ರಾಪ್ಯಮ್ (ಗುರಿ) ಮತ್ತು ಪ್ರಾಪಕಮ್ (ಮಾರ್ಗ/ ಮಾಧ್ಯಮ) ಎಂಬುದು “ಎಂಪೆರುಮಾನರು ಮಾತ್ರವೇ” ಎಂದು ಆಣ್ಡಾಳ್ ಸ್ಪಷ್ಟ ಪಡಿಸುತ್ತಾಳೆ.
 • 27 ನೆಯ ಪಾಸುರದಲ್ಲಿ, ಎಂಪೆರುಮಾನರ ವಿಶಿಷ್ಟ ಗುಣವು ಈ – ಅನುಕೂಲರು (ಭಕ್ತರು ಯಾರು ಎಂಪೆರುಮಾನರಿಗೆ ಉಪಯೋಗವಾಗುತ್ತಾರೋ) ಮತ್ತು ಪ್ರತಿಕೂಲರು (ವೈರಿಗಳು ಯಾರು ಎಂಪೆರುಮಾನರನ್ನು ಸ್ವೀಕರಿಸುವುದಿಲ್ಲವೋ) – ಈ ಎರಡೂ ಪಂಗಡಗಳ ಜನರನ್ನು ಒಟ್ಟು ಸೇರಿಸಿ, ಅವನೆಡೆಗೆ ತರುತ್ತದೆಯೋ ಅದನ್ನು ಆಣ್ಡಾಳ್ ವಿವರಿಸಿದ್ದಾಳೆ. ಮತ್ತೂ ಅವಳು ಪರಮ ಫಲ/ಗುರಿಯನ್ನು (ಕೈಂಕರ್‍ಯಮ್) ಸಾಯುಜ್ಯ ಮೋಕ್ಷವೆಂದು ಪ್ರತಿಷ್ಠಾಪನೆ ಮಾಡುತ್ತಾಳೆ. ಇದರ ಅರ್ಥ ಎಂಪೆರುಮಾನರನ್ನು ಶಾಶ್ವತವಾಗಿ ಸೇವೆ ಮಾಡುವುದು ಅವನ ಸಂತೋಷಕ್ಕಾಗಿಯೇ ಮಾತ್ರ, ಯಾವ ಅಡೆತಡೆ ಇಲ್ಲದೇ.
 • 28 ನೆಯ ಪಾಸುರದಲ್ಲಿ, ಅವಳು ಎಂಪೆರುಮಾನರ ಎಲ್ಲಾ ಜೀವಾತ್ಮದ ಜೊತೆಗಿನ ನಿರುಪಾಧಿಕ ಸಂಬಂಧಮ್ (ನಿರಂತರ ಸಂಬಂಧ), ಯಾವುದಾದರೂ ಸಾಧನ ಅನುಷ್ಠಾನಕ್ಕೆ(ಎಂಪೆರುಮಾನರನ್ನು ಪಡೆಯಲು ಏನಾದರೂ ಆಚರಿಸಬಹುದಾದ ಕಾರ್ಯ) ಅವಳ ಸ್ವತಃ ಅಸಾಮರ್ಥ್ಯ, ಮತ್ತು ಎಂಪೆರುಮಾನರ ಶ್ರೇಷ್ಠತ್ವ ಮತ್ತು ಯಾರನ್ನಾದರೂ ಮೇಲೆತ್ತಲು ಸಾಧ್ಯವಾಗುವಂತಹ ಅವರ ಸ್ವ ಸಾಮರ್ಥ್ಯ (ಜೀವಾತ್ಮದಿಂದ (ವೃಂದಾವನದ ಹಸುಗಳ ಹಾಗೆ ಅಧ್ವೇಷಮ್ ಹೊರತು) ಏನೂ ಅಪೇಕ್ಷಿಸದೇ ಇರುವ ಗುಣ) – ಇವುಗಳನ್ನು ವಿವರಿಸುತ್ತಾಳೆ. ಈ ಪಾಸುರವು ನಮಗೆ ಬಹು ಮುಖ್ಯವಾದ ಪಾಸುರಗಳಲ್ಲೊಂದಾಗಿದೆ. – ನಾಯನಾರವರು ಶರಣಾಗತನಾಗಲು ಬೇಕಾದ 6 ಮುಖ್ಯ ಅವಶ್ಯಕತೆಗಳನ್ನು ಗುರುತಿಸಿ ಕೊಡುತ್ತಾರೆ:
  • ಅವನು ಸಿದ್ಧೋಪಾಯ ನಿಷ್ಠನಾಗಿರಬೇಕು. (ಎಂಪೆರುಮಾನರನ್ನು ಮಾತ್ರ ದಾರಿಯಾಗಿ ಸ್ವೀಕರಿಸಿರುವವನು), ಅವನಲ್ಲಿ ಎಂಪೆರುಮಾನರನ್ನು ಪಡೆಯಲು, ತನ್ನಲ್ಲಿ ಕೊಡಲು ಏನೂ ಇಲ್ಲ ಎಂದು ತಿಳಿದಿರಬೇಕು.
  • ಅವನಿಗೆ ಏನೂ ಅರ್ಹತೆಯಿಲ್ಲದಿರುವುದರಿಂದ, ತನ್ನನ್ನು ತಾನು ಅಶಕ್ತ ಮತ್ತು ಕೀಳು ಎಂದು ಪರಿಗಣಿಸಬೇಕು.
  • ಮೂಲ ಸುಕೃತನಾದ (ಎಲ್ಲಾ ಶುಭ ಗುಣಗಳ ಮೂಲ ಕಾರಣ) ಎಂಪೆರುಮಾನರ ದಿವ್ಯ ಗುಣಗಳ ಬಗ್ಗೆ ಯಾವಾಗಲೂ ಯೋಚಿಸುತ್ತಿರಬೇಕು.
  • ತನ್ನ ಮತ್ತು ಎಂಪೆರುಮಾನರ ಶಾಶ್ವತ ಸಂಬಂಧದ ಬಗ್ಗೆ ಅರಿವು ಇರಬೇಕು.
  • ತನ್ನ ಗತಿಸಿದ ಕಾಲದ ತಪ್ಪುಗಳನ್ನು, ಅಪರಾಧಗಳನ್ನು ಮನ್ನಿಸಬೇಕೆಂದು ಎಂಪೆರುಮಾನರ ಹತ್ತಿರ ಬೇಡಿಕೊಳ್ಳಬೇಕು.
  • ಎಂಪೆರುಮಾನರ ಕೈಂಕರ್‍ಯಕ್ಕಾಗಿ ಅವರನ್ನು ಬೇಡಿಕೊಳ್ಳಬೇಕು.
 • 29 ನೆಯ ಪಾಸುರದಲ್ಲಿ, ಅವಳು ಅತ್ಯಂತ ಪ್ರಮುಖವಾದ ತತ್ತ್ವವನ್ನು ಬಹಿರಂಗ ಪಡಿಸುತ್ತಾಳೆ, ಅದು ಏನೆಂದರೆ, ಕೈಂಕರ್‍ಯವು ಎಂಪೆರುಮಾನರ ಸಂತೋಷಕ್ಕಾಗಿ, ತನ್ನ ಸಂತೋಷಕ್ಕಾಗಿ ಅಲ್ಲ. ಅವಳು ಮತ್ತೂ ಹೇಳುತ್ತಾಳೆ, ಅವಳು ಇಂದಿನವರೆಗೂ ಪಾಲಿಸಿದ ನೋಂಬು ಒಂದು ವ್ಯಾಜಮ್ (ನೆಪವು), ಕೃಷ್ಣಾನುಭವದಲ್ಲಿ ಅವಳಿಗಿರುವ ವಿಪರೀತ ಬಯಕೆಯನ್ನು ಅವಳು ಈ ರೀತಿ ತೋರಿಸಿಕೊಳ್ಳುತ್ತಾಳೆ.
 • 30 ನೆಯ ಪಾಸುರದಲ್ಲಿ, ಎಂಪೆರುಮಾನರು ಅವಳ ಬಯಕೆಯನ್ನು ಈಡೇರಿಸಲು ಒಪ್ಪಿಕೊಳ್ಳುವುದರಿಂದ, ಅವಳು ಈಗ ಆಣ್ಡಾಳ್ ಆಗಿ ಹಾಡುತ್ತಾಳೆ. (ಈ ಮೊದಲು ಅವಳು ಮೊದಲ 29 ಪಾಸುರಗಳನ್ನು ಗೋಪಿ ಭಾವದಲ್ಲಿ ಹಾಡಿರುತ್ತಾಳೆ. ) ಯಾರು ಈ 30 ಪಾಸುರಗಳನ್ನು ಕಲಿತು ಹಾಡುತ್ತಾರೋ, ಅವರಿಗೆ ಅದೇ ಶುದ್ಧವಾದ ಭಾವ ಇಲ್ಲದಿದ್ದರೂ, ಅವರಿಗೆ ಅದೇ ಕೈಂಕರ್‍ಯ ಪ್ರಾಪ್ತಿ ತನಗೆ ದೊರಕಿದ ಹಾಗೆ ಸಿಗುತ್ತದೆ ಎಂದು ಅವಳು ಘೋಷಿಸುತ್ತಾಳೆ. ಇದರ ಅರ್ಥ, ಅತ್ಯಂತ ಕರುಣಾಭರಿತವಾದ ಹೃದಯವಿರುವ ಆಣ್ಡಾಳ್, ಯಾವ ರೀತಿಯಲ್ಲಿ ವೃಂದಾವನದಲ್ಲಿರುವ ಗೋಪಿಕೆಯರು ಅತ್ಯಂತ ಪ್ರೇಮದಿಂದ ಕಣ್ಣನ್ ಎಂಪೆರುಮಾನರನ್ನು ಸೇವಿಸುತ್ತಿದ್ದರೋ, ಅದೇ ಭಾವವನ್ನು ಆಣ್ಡಾಳ್ ಶ್ರೀವಿಲ್ಲಿಪುತ್ತೂರಿನಲ್ಲಿಯೂ ಮತ್ತು ಯಾರು ಈ ಪಾಸುರಗಳನ್ನು ಕಲಿತು ಹಾಡುತ್ತಾರೋ ಅವರಿಗೂ ಕಲ್ಪಿಸಿಕೊಟ್ಟಳು. ಭಟ್ಟರ್ ಗುರುತಿಸಿ ಹೇಳುತ್ತಾರೆ, “ಒಂದು ಹಸು ತನ್ನ ಕರುವನ್ನು ಕಳೆದುಕೊಂಡರೂ ಸಹ, ಮತ್ತೊಂದು ಕೃತಕ ಕರುವನ್ನು ನೋಡಿ ಹೇಗೆ ಹಾಲು ಕೊಡುತ್ತದೆಯೋ, ಹಾಗೆಯೇ ಯಾರು ಈ ಪಾಸುರಗಳನ್ನು ( ಎಂಪೆರುಮಾನರಿಗೆ ಪ್ರಿಯವಾದವರು ಹಾಡಿದ) ಪಠಿಸುತ್ತಾರೋ, ಅವರಿಗೂ ಸಹ ವೃಂದಾವನದ ಗೋಪಿಕೆಯರಿಗೆ ದೊರೆತ ಅನುಭೂತಿಯೇ ದೊರಕುವುದು. ಆಣ್ಡಾಳ್ ತಿರುಪ್ಪಾವೈಯನ್ನು ಕ್ಷೀರಾಬ್ಧಿಯನ್ನು (ಹಾಲಿನ ಸಮುದ್ರವನ್ನು) ಕಡೆದ ಚರಿತ್ರೆಯಿಂದ ಪೂರ್ಣಗೊಳಿಸುತ್ತಾಳೆ. ಗೋಪಿಕೆಯರಿಗೆ ಕಣ್ಣನ್ ಎಂಪೆರುಮಾನರು ಬೇಕಾದ್ದರಿಂದ, ಮತ್ತು ಕಣ್ಣನ್ ಎಂಪೆರುಮಾನರು ದೊರಕಲು ನಮಗೆ ಪಿರಾಟ್ಟಿಯ ಪುರುಷಕಾರಮ್ (ಶಿಫಾರಸ್ಸು ) ಬೇಕಾಗಿರುವುದರಿಂದ ಮತ್ತು ಎಂಪೆರುಮಾನರು ಹಾಲಿನ ಸಮುದ್ರವನ್ನು ಕಡೆದದ್ದು ಮುಖ್ಯವಾಗಿ ಪಿರಾಟ್ಟಿಯನ್ನು ಅದರಿಂದ ತೆಗೆದು ತಾನು ಮದುವೆಯಾಗಲು. ಆದ್ದರಿಂದ ಆಣ್ಡಾಳ್ ಈ ಸನ್ನಿವೇಶವನ್ನು ಪ್ರಮುಖಗೊಳಿಸಿ ಪೂರ್ತಿಗೊಳಿಸಿದ್ದಾಳೆ. ಅವಳು ತಾನು ಆಚಾರ್‍ಯ ಅಭಿಮಾನ ನಿಷ್ಠೈಯಾದ್ದರಿಂದ ಈ ಪ್ರಬಂಧವನ್ನು ಕೊನೆಗೊಳಿಸಲು “ಪಟ್ಟರ್ ಪಿರಾನ್ ಕೋದೈ” ಎಂದು ತನ್ನ ತಂದೆಯನ್ನು ನೆನೆಸಿಕೊಳ್ಳುತ್ತಾಳೆ. (ಪೆರಿಯಾಳ್ವಾರಿನ ಮಗಳು).

ಆದ್ದರಿಂದ, ನಾಯನಾರವರು ಅವರ ಅವತಾರಿಕೆಯಲ್ಲಿ ಸಂಪೂರ್ಣ ತಿರುಪ್ಪವೈಯನ್ನು ಅತಿ ಸುಂದರವಾಗಿ ಒಂದೇ ವಾಕ್ಯಖಂಡದಲ್ಲಿ ಸಾರಂಶಗೊಳಿಸುತ್ತಾರೆ. – ಅಂತಹುದು ಅವರ ಪಾಂಡಿತ್ಯ. ನಾವು ಅವರ ಪಾಂಡಿತ್ಯದ ಮೇಲೆ ಮಾತನಾಡುವುದಕ್ಕೆ ಅರ್ಹರಲ್ಲ. ಆದರೆ ನಾವು ಅವರ ಮೇಧಾವಿತನವನ್ನು ನೋಡಿ ಆಶ್ಚರ್‍ಯಗೊಳ್ಳುತ್ತೇವೆ. ಮತ್ತು ಅಂತಹ ಮೇಧಾವಿತನವು ಎಂಪೆರುಮಾನರ ಬಗ್ಗೆ ಇರುವ ಅಪರಿಮಿತ ಭಕ್ತಿಯ ಜೊತೆಗೆ ಸಮ್ಮಿಲನವಾದಾಗ, ಫಲಿತಾಂಶವು ನಮಗೆ ಶ್ರೇಷ್ಠವಾದ ‘ಭಗವತ್ ಅನುಭವ’ವೇ ಆಗಿದೆ.

ತಿರುಪ್ಪಾವೈ ನಮ್ಮ ಪೂರ್ವಚಾರ್‍ಯರುಗಳಿಂದ ಅತ್ಯಂತ ವೈಭವೀಕರಿಸಲ್ಪಟ್ಟಿದೆ. ಅದಕ್ಕೆ ನಮ್ಮ ಸಂಪ್ರದಾಯದಲ್ಲೂ ಮತ್ತು ನಿತ್ಯಾನುಸಂಧಾನದಲ್ಲೂ ಪ್ರತ್ಯೇಕವಾದ ವಿಶೇಷ ಸ್ಥಾನವೇ ಇದೆ. ನಾವು ಅದನ್ನು ನಮಗೆ ಕೊಟ್ಟ ಆಣ್ಡಾಳ್‍ನ ಚರಣ ಕಮಲಕ್ಕೆ ವಂದಿಸೋಣ, ನಮಗೂ ಎಂಪೆರುಮಾನರ ಮತ್ತು ಭಾಗವತರ ಬಗ್ಗೆ ಅವಳಿಗಿರುವ ಪ್ರೇಮದಲ್ಲಿ ಒಂದು ಸಣ್ಣ ಭಾಗವಾದರೂ ಅಭಿವೃದ್ಧಿಗೊಳ್ಳಲಿ ಎಂದು ಪ್ರಾರ್ಥಿಸೋಣ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://ponnadi.blogspot.in/2012/12/thiruppavai-saram-by-nayanar.html

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org

ಮುಮುಕ್ಷುಪ್ಪಡಿ – ಸೂತ್ರಮ್ 4-6

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

ಹಿಂದಿನ ಲೇಖನವನ್ನು

ಸೂತ್ರಮ್ – 4

ಪರಿಚಯ:  “ನಾವು ಇದನ್ನು ಅತ್ಯಂತ ಪ್ರೀತಿಯಿಂದ ಆರಾಧಿಸಿದರೆ ಇದು ಪಠಿಸುವವರಿಗೆ ಫಲವನ್ನು ಅಷ್ಟರ ಮಟ್ಟಿಗೆ ಕೊಡುತ್ತದೆಯೇ?” ಎಂಬ ಪ್ರಶ್ನೆಗೆ ಲೋಕಾಚಾರ್‍ಯರು ಉತ್ತರವನ್ನು “ಮಂತ್ರತ್ತಿಲುಮ್” ನಿಂದ ವಿವರಿಸುತ್ತಾರೆ.

ಮಂತ್ರತ್ತಿಲುಮ್ ಮಂತ್ರತ್ತುಕ್ಕುಳ್ಳೀಡಾನ ವಸ್ತುವಿಲುಮ್ ಮಂತ್ರಪ್ರದನಾನ ಆಚಾರ್‍ಯನ್ ಪಕ್ಕಲಿಲುಮ್ ಪ್ರೇಮಮ್ ಗನಕ್ಕ ಉಣ್ಡಾನಾಲ್ ಕಾರ್ಯಕರಮಾವದು

ಸರಳ ಅರ್ಥ: ಯಾವಾಗ ಮುಮುಕ್ಷುವು ಅತ್ಯಂತ ಪ್ರೀತಿ ಮತ್ತು ವಾತ್ಸಲ್ಯವನ್ನು ಈ ಮಂತ್ರದ ಮೇಲೆ, ಈ ಮಂತ್ರದ ಒಳ ಅರ್ಥದ ಮೇಲೆ (ಶ್ರೀಮನ್ ನಾರಾಯಣನ್) ಮತ್ತು ಇದನ್ನು ಅವನಿಗೆ ಹೇಳಿಕೊಟ್ಟ ಆಚಾರ್‍ಯರ ಮೇಲೆ ಬೆಳೆಸಿಕೊಳ್ಳುತ್ತಾನೋ, ಆಗ ಈ ಮಂತ್ರವು ಅವನಿಗೆ ಖಂಡಿತವಾಗಿ ಫಲವನ್ನು ಕೊಡುತ್ತದೆ.

ವ್ಯಾಖ್ಯಾನಮ್:

ಪಠಿಸುವವನು ಮಂತ್ರದ ಬಗ್ಗೆ ಪ್ರೀತಿಯನ್ನು ಹೊಂದಿದರೆ ಅವನ ಜ್ಞಾನಕ್ಕೆ ಅದು ಬೆಳಕು ನೀಡುತ್ತದೆ, ಅವನಿಗೆ ಈ ಮಂತ್ರದಲ್ಲಿರುವ ಒಳ ಅರ್ಥವಾದ ಮೂರು ರೂಪಕ್ಕೂ ಒಡೆಯನಾದ ಸ್ವಾಮಿಯು, ತಾನೇ ಆಶ್ರಯವಾಗಿ ಮತ್ತು ತಾನೇ ತಲುಪುವ ಗುರಿಯಾಗಿ ಮತ್ತು ಅವನಿಗೆ ಈ ಮಂತ್ರವನ್ನು ಉಪದೇಶಿಸಿದ ಮತ್ತು ಈ ಮಂತ್ರವನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿ ತೆಗೆದುಕೊಂಡ ಆಚಾರ್‍ಯರ ಮೇಲೆ ಪ್ರೀತಿಯ ಭಾವವಿದ್ದರೆ, “ತನ್ಮಂತ್ರಮ್ ಬ್ರಾಹ್ಮನಾಧೀನಮ್” (ಈ ಮಂತ್ರವು ಆಚಾರ್‍ಯನ ಆಧೀನದಲ್ಲಿದೆ) ಎಂಬಂತೆ, ಅವನು (ಪಠಿಸುವವನಿಗೆ) ಈ ಮಂತ್ರದ ಪೂರ್ತಿ ಉಪಯೋಗವನ್ನು ಪಡೆಯುತ್ತಾನೆ.

ಇದು ಏಕೆಂದರೆ, ಮಾರ್ಗದರ್ಶಿಯು : (ವಿಷ್ಣುಧರ್ಮಮ್ ನಿಂದ)

ಮಂತ್ರೇ ತತ್ ದೇವತಾಯಾಂಚ ತಥಾ ಮಂತ್ರ ಪ್ರದೇ ಗುರೌ ।
ತ್ರಿಶು ಭಕ್ತಿಸ್ ಸದಾ ಕಾರ್ಯಾ ಸಾ ಹಿ ಪ್ರಥಮ ಸಾಧನಮ್ ॥

(ಮಂತ್ರಕ್ಕೆ ,ಆ ಮಂತ್ರದ ದೇವತೆಗೆ (ಸ್ವಾಮಿಯು), ಮತ್ತು ಅದನ್ನು ಹೇಳಿಕೊಟ್ಟ ಆಚಾರ್‍ಯರಿಗೆ ಯಾರೊಬ್ಬರು ತನ್ನನ್ನು ತಾನು ಸಮರ್ಪಿಸಿದರೆ, ಅಂತಹ ಸಮರ್ಪಣೆಯು ಭಗವಂತನನ್ನು ಪಡೆಯಲು ಇರುವ ಮಾರ್ಗವಾಗುತ್ತದೆ.)

ಸೂತ್ರಮ್ – 5

ಪರಿಚಯ: ಈಗ ಲೋಕಾಚಾರ್‍ಯರು ಈ ಸೂತ್ರದಲ್ಲಿ, ಇದರ ಶ್ರೇಷ್ಠ ಮಹತ್ವವನ್ನು, ಅದರ ವಿವಿಧ ರೀತಿಯ ಫಲಗಳನ್ನು ಎಣಿಸಿ ಹೇಳಿದ್ದಾರೆ.

ಸಂಸಾರಿಗಳ್ ತಂಗಳೈಯುಮ್ ಈಶ್ವರನೈಯುಮ್ ಮಱಂದು
ಈಶ್ವರ ಕೈಂಕರ್‍ಯತ್ತೈಯುಮ್ ಇೞಂದು ಇೞಂದೋಮ್
ಎಂಗಿಱ ಇೞವುಮ್ ಇನ್‍ಱಿಕ್ಕೇ ಸಂಸಾರಮಾಗಿಱ
ಪೆರುಂಗಡಲಿಲೇ ವಿೞುಂದು ನೋವುಪಡ
, ಸರ್ವೇಶ್ವರನ್,
ತನ್ ಕೃಪೈಯಾಲೇ, ಇವರ್ಗಳ್ ತನ್ನೈ ಅಱಿಂದು
ಕರೈಮರಮ್ ಸೇರುಂಬಡಿ ತಾನೇ ಶಿಷ್ಯನುಮಾಯ್
ಆಚಾರ್‍ಯನುಮಾಯ್ ನಿನ್‍ಱು ತಿರುಮಂತ್ರತ್ತೈ ವೆಳಿಯಿತ್ತರುಳಿನಾನ್.

ಸರಳ ಅರ್ಥ: ಸಂಸಾರಿಗಳು (ಲೌಕಿಕ ವಸ್ತುಗಳುಳ್ಳ ಜಗತ್ತಿನಲ್ಲಿ ಬದುಕುವವರು) ಕೊನೆಯಿಲ್ಲದ ಜನನ ಮತ್ತು ಮರಣಗಳ ಚಕ್ರದಲ್ಲಿ ಸಿಕ್ಕಿಹಾಕಿಕೊಂಡು, ಅವರ ನಿಜ ಸ್ವರೂಪವನ್ನು ಮರೆತು, ಸ್ವಾಮಿಗೆ ಸೇವೆಯನ್ನು ಮಾಡುವುದೂ ಮರೆತುಬಿಡುತ್ತಾರೆ. ತಾವು ಮರೆತಿರುವುದನ್ನೂ, ತಮಗೆ ಆದ ನಷ್ಟವನ್ನೂ ತಿಳಿದುಕೊಳ್ಳದೇ, ಅವರು ಈ ದೊಡ್ಡ ಸಂಸಾರವೆಂಬ ಸಾಗರದಲ್ಲಿ ನರಳುತ್ತಾರೆ. ಆಗ ಶ್ರೇಷ್ಠನಾದ ಸ್ವಾಮಿಯಾದ ಶ್ರೀಮನ್ ನಾರಾಯಣರು, ಅವರ ಅಪಾರ ಕೃಪೆಯಿಂದ , ತಿರುಮಂತ್ರವನ್ನು ತಾನೇ ಆಚಾರ್‍ಯನಾಗಿ ಮತ್ತು ತಾನೇ ಶಿಷ್ಯನಾಗಿ (ನರ – ನಾರಾಯಣನ್) ಬಹಿರಂಗ ಪಡಿಸುತ್ತಾನೆ. ಇದರಿಂದ ಸಂಸಾರಿಗಳು ಈ ಕಡಲನ್ನು ದಾಟಿ ಅವನನ್ನು ತಲುಪಬಹುದು ಎಂದು.

ವ್ಯಾಖ್ಯಾನಮ್:

ಸಂಸಾರಿಗಳ್ : ಸಂಸಾರಿಗಳೆಂದರೆ, ಯಾವ ಆತ್ಮಗಳು ಕೊನೆಯಿಲ್ಲದ ಜನನ – ಮರಣಗಳ ಸತತ ಚಕ್ರದಲ್ಲಿ ಸಿಕ್ಕು, ತಮ್ಮ ಅವಿದ್ಯಾ (ಅಜ್ಞಾನ), ಕರ್ಮ (ತಾವು ಮಾಡಿದ ಕೆಲಸ), ವಾಸನಾ (ಹಿಂದೆ ಮಾಡಿದ ಪಾಪಗಳ ಫಲಗಳಿಂದ), ರುಚಿ (ಆ ಪಾಪಗಳನ್ನು ಅನುಭವಿಸಿರುವುದರಿಂದ) ಈ ಜಗತ್ತಿನಲ್ಲಿರುವ ಚೇತನಗಳು ಜೀವನ ಚಕ್ರದ ನರಳಾಟವನ್ನು ಅನುಭವಿಸಿ, ತಮ್ಮನ್ನು ತಾವು ಮರೆತು ಮತ್ತು ತಮ್ಮ ಸ್ವಾಮಿಯನ್ನೂ ಮರೆತುಬಿಡುವರು.

ತಂಗಳೈಯುಮ್ ಈಶ್ವರನೈಯುಮ್ ಮಱಂದು: ಹಾರಿತಸ್ಮೃತಿಯಿಂದ ಇರುವ ಹೇಳಿಕೆ:
ದಾಸಭೂತಾಃ ಸ್ವತಃ ಸರ್ವೇತ್ಯಾತ್ಮಾನಃ ಪರಮಾತ್ಮನಃ ।
ನಾನ್ಯಥಾ ಲಕ್ಷಣಮ್ ತೇಶಾಮ್ ಬಂಧೇ ಮೋಕ್ಷೇ ತಥೈವ ಚ ॥

(ಆತ್ಮಗಳು ತಮ್ಮ ಸಹಜ ಪ್ರಕೃತಿಯಿಂದ ಪರಮಾತ್ಮನಿಗೆ (ಭಗವಂತನಿಗೆ) ಸೇವಕರಾಗಿಲ್ಲವೇ? ಸಂಸಾರದಲ್ಲೂ ಅಥವಾ ಮೋಕ್ಷದಲ್ಲೂ ಅವರಿಗೆ ಬೇರೆ ಏನೂ ಗುರುತಿಲ್ಲ ).

ಭಗವಂತನಿಗೆ ತಾನೇ ತಾನಾಗಿ ಸ್ಥಾಪಿಸಲ್ಪಟ್ಟಿರುವ ಸೇವಕತ್ವವು ಜೀವಿಗಳ ಪರಮ ಗುರುತಾಗಿದೆ. ಮತ್ತು ಭಗವಂತನು ಆತ್ಮಗಳ ನಿಬಂಧನೆಗಳ ರಹಿತವಾದ ಸ್ವಾಮಿಯಾಗಿದ್ದಾನೆ- ಇದನ್ನು ವೇದಗಳ ಲಿಪಿಗಳಲ್ಲಿ ಬರೆಯಲಾಗಿದೆ – ತೈತ್ತಿರೀಯ ಉಪನಿಶದ್ ನಾರಾಯಣವಲ್ಲಿ: “ಪತಿಮ್ ವಿಶ್ವಸ್ಯ” (ಎಂದರೆ ನಾರಾಯಣನೇ ಇಡೀ ಬ್ರಹ್ಮಾಂಡಕ್ಕೆಲ್ಲಾ ಸ್ವಾಮಿಯು ಮತ್ತು ಅವನಿಗೆ ಅವನೇ ಸ್ವಾಮಿಯು, ಅರ್ಥ: ನಾರಾಯಣನ ಮೇಲಿನ ಪದವಿಯಲ್ಲಿ ಯಾರೂ ಇಲ್ಲ, ಅವನೇ ಸರ್ವೋಚ್ಛ). ಮತ್ತು ಶ್ರೀ ವಿಷ್ಣು ತತ್ವಮ್ ಶ್ಲೋಕಮ್ : “ಸ್ವಾಮಿತ್ವಮ್ ಬ್ರಹ್ಮಣೀ ಸ್ಥಿತಮ್” – ಇಡೀ ಬ್ರಹ್ಮಾಂಡವನ್ನೆಲ್ಲಾ ಹೊಂದಿರುವುದು ಸರ್ವೋಚ್ಛವಾದ ಭಗವಂತನಿಗಿರುವ ಸಹಜವಾದ ಗುಣ” , ಸಂಸಾರಿಗಳಿಗೆ ಸರ್ವೇಶ್ವರನು ಅವರಿಗೆಲ್ಲಾ ಸಂಪೂರ್ಣವಾದ ಮತ್ತು ನಿಬಂಧನೆರಹಿತ ಸ್ವಾಮಿಯು ಎಂದು ತಿಳಿದೇ ಇಲ್ಲ.

ಆದರೂ, “ಅವರಿಗೆ ತಿಳಿದೇ ಇಲ್ಲ” ಎನ್ನುವುದರ ಬದಲಿಗೆ ಏಕೆ ಲೋಕಾಚಾರ್‍ಯರು “ಮರೆತಿದ್ದಾರೆ” ಎಂದು ಏಕೆ ಹೇಳುತ್ತಾರೆ? ಒಬ್ಬರಿಗೆ ಒಂದು ಯೋಚನೆಯು ಮೊದಲಿಗೆ ಇದ್ದು, ನಂತರದಲ್ಲಿ ಅದನ್ನು ಕಳೆದುಕೊಂಡರೆ ಮಾತ್ರ ಅದನ್ನು ಮರೆತಿದ್ದಾರೆ ಎಂದು ತಾನೇ ಹೇಳಬಹುದು. ತಿರುಮಂಗೈ ಆಳ್ವಾರ್‌ರವರು ಪೆರಿಯ ತಿರುಮೊೞಿಯ 6-6-2 ನೆಯ ಪಾಸುರದಲ್ಲಿ “ಮಱಂದೇನ್ ಉನ್ನೈ ಮುನ್ನಮ್” ಎಂದು ಹೇಳಿದ್ದಾರೆ, (ನಾನು ನಿನ್ನನ್ನು ಈ ಹಿಂದೆ ಮರೆದುಬಿಟ್ಟೆ), ಪಿಳ್ಳೈ ಲೋಕಾಚಾರ್‍ಯರು ಕರುಣೆಯಿಂದಲಿ ಹೇಳಿದ್ದಾರೆ ಒಬ್ಬರು ಈಗಾಗಲೇ ಸಿದ್ಧವಿರುವ ಭಗವಂತನ ಜೊತೆಗಿರುವ ಸಂಪರ್ಕವನ್ನು ಅರಿತು ಕೊಂಡರೆ, ನಂತರದಲ್ಲಿ ಆ ಸಂಪರ್ಕದ ಗಟ್ಟಿತನವು ಜ್ಞಾಪಕಕ್ಕೆ ಬರುತ್ತದೆ.

ಈಶ್ವರ ಕೈಂಕರ್‍ಯತ್ತೈಯುಮ್ ಇೞಂದು : ಅಜ್ಞಾನದಿಂದ (ಅವಿದ್ಯೆಯಿಂದ ಎಂದು ಮೊದಲೇ ಹೇಳಿದ ಹಾಗೆ), ನಿರಂತರವಾದ ಆನಂದಮಯವಾದ ಸೇವೆಯೂ (ಕೈಂಕರ್‍ಯವೂ) ಸಹ ಪಡೆಯಲು ಸಾಧ್ಯವಿಲ್ಲ. ಪಿಳ್ಳೈ ಲೋಕಾಚಾರ್‍ಯರು ಹೇಳುತ್ತಾರೆ ಸಂಸಾರಿಗಳು ಸೇವೆಯನ್ನು ಕಳೆದುಕೊಳ್ಳುತ್ತಾರೆ ಪುರುಷಾರ್ಥಮ್ (ಕೊನೆಯ ಫಲಿತಾಂಶದ) ಶ್ರೇಷ್ಠತೆಯನ್ನು ಅರಿಯದೇ ಮತ್ತು ಅವರು ಅದಕ್ಕಾಗಿಯೇ – ಆ ಆನಂದವನ್ನು ಹೊಂದಲು ಮಾತ್ರವೇ ಜನ್ಮ ಪಡೆದಿದ್ದರೂ ಅದನ್ನು ಪಡೆಯಲು ಅಸಾಮರ್ಥ್ಯರಾಗಿರುತ್ತಾರೆ.

ಇೞಂದೋಮ್ ಎನ್ಗಿಱ ಇೞವುಮ್ ಇನ್ಱಿಕ್ಕೇ ::ಅವರು ಸೇವಕತ್ವದ ನಷ್ಟಕ್ಕೆ ಪಶ್ಚಾತ್ತಾಪವೂ ಪಡೆದೇ (ಸಂಸಾರಿಗಳು) ಇರುತ್ತಾರೆ. ಏಕೆಂದರೆ ಅವರಿಗೆ ಸ್ಪಷ್ಟ ಜ್ಞಾನವಿರುವುದಿಲ್ಲ ತನ್ನ ಬಗ್ಗೆ, ಸರ್ವೋಚ್ಚನಾದವನ ಬಗ್ಗೆ (ಭಗವಂತ ಅಥವಾ ಎಂಪೆರುಮಾನರ ಬಗ್ಗೆ) ಮತ್ತು ಪುರುಷಾರ್ಥದ ಬಗ್ಗೆ (ಹೊಂದಲು ಸಾಧ್ಯವಿರುವ ಪರಮಗುರಿಯ ಬಗ್ಗೆ).

ಸಂಸಾರಮಾಗಿಱ ಪೆರುಮ್ ಕಡಲಿಲೇ ವಿೞಿಂದು ನೋವುಪಡ: ಜಿತಂತೇ ಶ್ಲೋಕಮ್ ಹೇಳುತ್ತದೆ,
ಸಂಸಾರ ಸಾಗರಮ್ ಘೋರಮ್ ಅನಂತಕ್ಲೇಶ ಭಾಜನಮ್
(ಸಂಸಾರ ಎಂಬುದು ಒಂದು ಸಮುದ್ರದ ಹಾಗೆ ಅದು ಬಹಳ ಕ್ರೂರಿ ಮತ್ತು ಅದು ಅನೇಕ ನರಳಾಟಗಳಿಗೆ ಕಾರಣವಾದದ್ದು. )
ಇದರ ಅರ್ಥ ಆತ್ಮವು ಸಂಸಾರವೆಂಬ ಕಡಲಿಗೆ ಬಿದ್ದಾಗ, ಆ ಕಡಲನ್ನು ನಮ್ಮ ಸ್ವ ಪ್ರಯತ್ನದಿಂದ ದಾಟಲು ಸಾಧ್ಯವೇ ಇಲ್ಲ. ಮತ್ತು ಅದು ಅನಂತಾನಂತ ಭಯಂಕರ ಯಾತನೆಗಳಿಂದ ಕೂಡಿದೆ. ಅದು ತಾಪ ತ್ರಯ (ಮೂರು ವಿಧದ ಯಾತನೆಗಳು : ತನ್ನಿಂದಲೇ ಬಂದದ್ದು, ಪ್ರಕೃತಿಯ ವಿಕೋಪದಿಂದ ಬಂದದ್ದು, ಪರಮಾತ್ಮನಿಂದ ವಿಧಿಸಿದ್ದು) ಗಳಿಂದ ಬಾಧಿಸಲ್ಪಟ್ಟಿದ್ದು. ಆದ್ದರಿಂದ ಈ ಆತ್ಮಗಳು ತಮ್ಮನ್ನು ತಾವು ಅರಿತುಕೊಳ್ಳುವ ಬಗ್ಗೆ, ಸ್ವಾಮಿಯಾದವನ ಬಗ್ಗೆ, ಸಾಧಿಸಲು ಸಾಧ್ಯವಾದ ಜೀವನದ ಗುರಿಯ ಬಗ್ಗೆ ಮತ್ತು ಈ ಜೀವನವು ಇವುಗಳನ್ನು ಮನವರಿಕೆ ಮಾಡಿಕೊಳ್ಳಲು ಮುಡಿಪು ಎನ್ನುವುದರ ಬಗ್ಗೆ ಅಜ್ಞಾನವನ್ನು ಹೊಂದಿರುತ್ತವೆ. ಅವುಗಳು ಅತ್ಯಂತ ಅವಶ್ಯಕವಾದ ನಿಗೂಢ ಅರ್ಥಗಳನ್ನು ಹೊಂದಿರುವ ಅರ್ಥ ಪಂಚಕಮ್‍ನನ್ನು ತಿಳಿದಿರುವುದಿಲ್ಲ. (ಜ್ಞಾನ ಇವುಗಳ ಬಗ್ಗೆ (ಅ) ಆತ್ಮ (ತನ್ನ ಬಗ್ಗೆ) (ಆ) ಪರಮಾತ್ಮಾ (ಶ್ರೇಷ್ಠನಾದವನ ಬಗ್ಗೆ) (ಇ) ಪ್ರಾಪ್ಯಮ್ (ಪರಮಾತ್ಮನನ್ನು ಪಡೆಯಲು ಇರುವ ದಾರಿ) (ಈ) ಪ್ರಾಪಕಮ್ (ಪರಮಾತ್ಮನನ್ನು ಪಡೆದ ಮೇಲೆ ಇರುವ ಕೊನೆಯ ಉಪಯೋಗ ) (ಉ) ವಿರೋಧಿ (ಪರಮಾತ್ಮನನ್ನು ಪಡೆಯಲು ಇರುವ ಅಡೆತಡೆಗಳು )).  ಹಾರಿತ ಸ್ಮೃತಿಯ 8-141 ನಲ್ಲಿ ಈ ರೀತಿ ಹೇಳಿಕೆಯಿದೆ :
ಪ್ರಾಪ್ಯಸ್ಯ ಬ್ರಹ್ಮನೊ ರೂಪಮ್
(ಪಡೆಯಬೇಕಾದ ಶ್ರೇಷ್ಠನಾದವನ ಗುಣ ಸ್ವರೂಪಗಳು …)
ಅದು ಎಲ್ಲಾ ಶಾಸ್ತ್ರಗಳ ಸಾರಾಂಶವಾಗಿದೆ. ಈ ಸೂತ್ರವು ಇನ್ನೂ ವಿಸ್ತಾರಗೊಂಡು ಹೇಗೆ ಭಗವಂತನು ಈ ಅರ್ಥಗಳನ್ನು ಎಲ್ಲಾ ಶಾಸ್ತ್ರಗಳ ಸಾರಾಂಶವಾದ ತಿರುಮಂತ್ರದ ಮೂಲಕ ಸಂಸಾರಿಗಳಿಗೆ ವಿವರಿಸಿದ್ದಾನೆ ಎಂದು ಈ ಸೂತ್ರವು ವಿವರಿಸುತ್ತದೆ.

ಸರ್ವೇಶ್ವರನ್ ತನ್ ಕೃಪೈಯಾಲೇ : ಲಕ್ಷ್ಮಿ ತಂತ್ರಮ್‍ 17-70 ರಲ್ಲಿ ಈ ರೀತಿ ಹೇಳಲಾಗಿದೆ:

ಈಶೇಶಿತವ್ಯ ಸಂಬಂಧಾತ್ ಅನಿದಮ್ ಪ್ರಥಮಾದಪಿ

(ಅನಂತ ಕಾಲದಿಂದಲೂ ಒಡೆಯನಿಗೂ ಮತ್ತು ಅವನ ಒಡೆತನದಲ್ಲಿರುವ ವಸ್ತುವಿಗೂ (ಬೇರೆ ಮಾತುಗಳಲ್ಲಿ, ಸ್ವಾಮಿಗೂ ಮತ್ತು ಆತ್ಮಗಳಾದ ನಮಗೂ ) ಇರುವ ಸಂಬಂಧವಿದೆ. ಅಂತಹ ಎಂಪೆರುಮಾನರು, ಯಾರಿಗೆ ಆತ್ಮಗಳೊಂದಿಗೆ ಸಂಬಂಧವಿದೆಯೋ, ಅದನ್ನು ಅಹಿರ್ಭುದ್ದ್ನ್ಯ ಸಂಹಿತೈನ 14-28 ರಲ್ಲಿ ಹೀಗೆ ವಿವರಿಸಲಾಗಿದೆ.:

ಏವಮ್ ಸಂಸೃತಿ ಚಕ್ರಸ್ಥೇ ಭ್ರಾಮ್ಯಮಾನೋ ಸ್ವಕರ್ಮಭಿಃ
ಜೀವೇ ದುಃಖಾಕುಲೇವಿಷ್ಣೋಃ ಕೃಪಾ ಕಾಪ್ಯುಪಜಾಯತೇ ॥

(ವಿಷ್ಣುವಿನಲ್ಲಿ ವಿವರಿಸಲಾರದಂತಹ ಸಹಾನುಭೂತಿ ಏರ್ಪಡುತ್ತದೆ ಯಾವಾಗ ಜೀವಾತ್ಮಗಳು ಪದೇ ಪದೇ ಬರುವ ಸಂಸಾರದ ಚಕ್ರದಲ್ಲಿ ಸಿಕ್ಕಿ ನರಳುವಾಗ)

ಅವರು ಕರುಣೆಯಿಂದ ವಿಚಲಿತರಾಗುತ್ತಾರೆ ಯಾವಾಗ ಜೀವಾತ್ಮಗಳು ಅತ್ಯಂತ ನೋವಿನಿಂದ ಚಡಪಡಿಸುವಾಗ.

ಇವರ್ಗಳ್ ತನ್ನೈ ಅಱಿಂದು ಕರೈಮರಮ್ ಸೇರುಂಬಡಿ: ಈ ಜೀವಾತ್ಮಗಳು, ಸಂಸಾರ ಸಾಗರದಲ್ಲಿ ನರಳಾಡುವಾಗ, ಅವರು ಪ್ರಾರ್ಥಿಸುತ್ತಾರೆ , ಜಿತಂತೇ ಶ್ಲೋಕಮ್ 4 ರಲ್ಲಿ ಹೇಳಿರುವಂತೆ:

ತ್ವಮೇವ ಶರಣಮ್ ಪ್ರಾಪ್ಯ ನಿಸ್ತರಂತಿ ಮನೀಷಿಣಃ

(ಈ ಜೀವಾತ್ಮಗಳು ಸಂಸಾರವೆಂಬ ಸಾಗರವನ್ನು ನಿನಗೆ ಶರಣಾಗಿ ಮಾತ್ರ ದಾಟಬಲ್ಲರು. ), ಮತ್ತು ವಿಷ್ಣು ಧರ್ಮಮ್ ಶ್ಲೋಕಮ್‍ 1-59 ನಲ್ಲಿ ಹೇಳಿರುವ ಹಾಗೆ:

ಸಂಸಾರಾರ್ಣವ ಮಗ್ನಾನಾಮ್ ವಿಷಯಾಕ್ರಾಂತ ಚೇತಸಾಮ್ ।
ವಿಷ್ಣುಪೋತಮ್ ವಿನಾ ನಾನ್ಯತ್ ಕಿಂಚಿದಸ್ತಿ ಪರಾಯಣಮ್ ॥

(ಯಾರು ಈ ಸಂಸಾರವೆಂಬ ಸಾಗರದಲ್ಲಿ ಮುಳುಗುತ್ತಿರುತ್ತಾರೋ ಮತ್ತು (ಮೊಸಳೆಯಂತಹ) ವಿಷಯ ವಸ್ತುಗಳಿಂದ ಹಿಡಿದಿಡಲ್ಪಡುತ್ತಾರೋ, ಅಂತಹವರಿಗೆ ವಿಷ್ಣುವಿನ (ಎಲ್ಲಾಕಡೆಗಳಲ್ಲೂ ವ್ಯಾಪಿಸಿರುವ) ದೋಣಿಯೇ ಬೇಕು ದಡ ಸೇರಲು.)

ಅವನನ್ನು ಸೇವೆ ಮಾಡಿದರೆ ನಾವು ಬೇರೆ ಪಕ್ಕದ ಶಾಶ್ವತವಾದ ತೀರವನ್ನು ಸೇರಬಹುದು, ಅವನಿಂದ ಮಾತ್ರ.

ತಾನೇ ಶಿಷ್ಯನುಮಾಯ್ ಆಚಾರ್‍ಯನುಮಾಯ್ ನಿನ್‍ಱು : ಆದ್ದರಿಂದ, ಅವನೇ ಆಚಾರ್‍ಯನಾದ ನಾರಾಯಣನಾಗಿ ಬಂದು, ಮತ್ತು ತಾನೇ ಶಿಷ್ಯನಾಗಿ ನರ ರೂಪದಲ್ಲಿರುತ್ತಾನೆ. (ವಿದ್ಯಾರ್ಥಿ)

ತಿರುಮಂತರತ್ತೈ ವೆಳಿಯಿಟ್ಟು ಅರುಳಿನಾನ್ : ಶಾಸ್ತ್ರದ ಸಾರವನ್ನು ಬಹಿರಂಗ ಪಡಿಸುತ್ತಾನೆ, ಅದು ಅರ್ಥ ಪಂಚಕಮ್ ಅತ್ಯಂತ ಸ್ಪಷ್ಟವಾದ ಜ್ಞಾನದಿಂದ. ಲೋಕಾಚಾರ್‍ಯರು ‘ಬಹಿರಂಗ ಪಡಿಸಿದನು’ ಎಂದು ಹೇಳುತ್ತಾರೆ, ‘ಘೋಷಿಸಿದನು’ ಎನ್ನುವುದರ ಬದಲಿಗೆ. ಇದರಿಂದ ಏನು ಅರ್ಥವಾಗುತ್ತದೆ ಎಂದರೆ ಎಂಪೆರುಮಾನರು ಈಗ ಏನೂ ಹೊಸದಾಗಿ ಸ್ಥಾಪಿಸಲಿಲ್ಲ, ಆದರೆ ಬದಲಿಗೆ ಅವರು, ಅದನ್ನು ಬೆಳಕಿಗೆ ತರುತ್ತಾರೆ, ಏಕೆಂದರೆ, ಸಂಸಾರಿಗಳ ಕರುಣಾಜನಕ ಸ್ಥಿತಿಯನ್ನು ಕಂಡು, ಯಾವುದು ತುಂಬಾ ರಹಸ್ಯದಲ್ಲಿಡಬೇಕೋ, ಅದನ್ನು ಬಹಿರಂಗ ಪಡಿಸುತ್ತಾರೆ.

ಸೂತ್ರಮ್ – 6 :

ಪರಿಚಯ : ಅವನು ತಿರುಮಂತ್ರವನ್ನು ಕೇವಲ ಆಚಾರ್‍ಯನಾಗಿ ತಿಳಿಸಿದ್ದರೆ ಸಾಲದೇ? ಯಾವುದಕ್ಕಾಗಿ ಅವನು ಶಿಷ್ಯನ ಪಾತ್ರವನ್ನೂ ವಹಿಸಿಕೊಂಡು ಉಪದೇಶಿಸಬೇಕು? ಈ ಪ್ರಶ್ನೆಗೆ ಲೋಕಾಚಾರ್‍ಯರು ಸೂತ್ರಮ್ 6 ರ ಸಹಾಯವನ್ನು ಪಡೆದುಕೊಂಡು ಜನಗಳಿಗೆ ಒಬ್ಬ ಶಿಷ್ಯನ ಮಹತ್ವವನ್ನೂ ಅವಶ್ಯಕತೆಯನ್ನೂ ತಿಳಿಯಪಡಿಸಿದ್ದಾರೆ.

ಶಿಷ್ಯನಾಯ್ ನಿನ್‍ಱದು – ಶಿಷ್ಯನ್ ಇರುಕ್ಕುಮ್ ಇರುಪ್ಪು ನಾಟ್ಟಾರ್ ಅಱಿಯಾಮೈಯಾಲೇ ಅತ್ತೈ ಅಱಿವಿಕ್ಕೈಕ್ಕಾಗ .

ಸರಳ ಅರ್ಥ: ಸರ್ವೇಶ್ವರನು ಶಿಷ್ಯನ ಪಾತ್ರವನ್ನು ತೆಗೆದುಕೊಂಡದ್ದು ಒಬ್ಬ ಶಿಷ್ಯನ ನಿಜವಾದ ಸ್ವರೂಪವನ್ನು ಈ ಜಗತ್ತಿಗೆ ಬಹಿರಂಗ ಪಡಿಸುವುದಕ್ಕಾಗಿ.

ವ್ಯಾಖ್ಯಾನಮ್ : ಆಚಾರ್‍ಯನ ಪಾತ್ರವನ್ನು ವಹಿಸಿ, ಅದರ ಜೊತಗೇ ಶಿಷ್ಯನ ಪಾತ್ರವನ್ನೂ ವಹಿಸಿಕೊಂಡದ್ದು ಶಿಷ್ಯನ ಈ ಸ್ವರೂಪವನ್ನು ಲೋಕಗಳಿಗೆ ತಿಳಿಸಲು :

ಆಸ್ತಿಕೋ ಧರ್ಮ ಶೀಲಶ್ಚ ಶೀಲವಾನ್ ವೈಷ್ಣವಶ್ ಶುಚಿಃ
ಗಂಭೀರಶ್ ಚತುರೋ ಧೀರಃ ಶಿಷ್ಯ ಇತ್ಯಭಿಧೀಯತೇ

(ಶಾಸ್ತ್ರವನ್ನು ಯಾರು ನಂಬುತ್ತಾರೋ, ಅವರಿಗೆ ಧರ್ಮದ ಚಟುವಟಿಕೆಗಳಲ್ಲಿ ಆಸಕ್ತಿ ಇರುತ್ತದೆ. (ಈ ಶಾಸ್ತ್ರಗಳಲ್ಲಿ ತಿಳಿಸಿರುವ ಹಾಗೆ), ಯಾರ ನಡತೆ ಅದಕ್ಕೆ ಸರಿ ಹೊಂದುವಂತೆ ಇರುತ್ತದೆಯೋ, ಅವರು ವಿಷ್ಣು ಭಕ್ತರಾಗಿರುತ್ತಾರೆ. (ಎಂಪೆರುಮಾನರಾದ ವಿಷ್ಣುವಿನ ಭಕ್ತರು), ಯಾರು ಕಲ್ಮಶವಿಲ್ಲದೇ, ಜಂಭವಿಲ್ಲದೇ ಇರುತ್ತಾರೆಯೋ, ಯಾರು ಆಳವನ್ನು ಅರಿಯದೇ ಇರುತ್ತಾರೋ (ಆಚಾರ್‍ಯರ ಮೇಲಿನ ಭಕ್ತಿಯನ್ನು) , ಯಾರು ಸಮರ್ಥರಿರುತ್ತಾರೋ (ಆಚಾರ್‍ಯರಿಗೆ ಸೇವೆಯನ್ನು ಮಾಡಲು) ಮತ್ತು ಯಾರು ಶ್ರೇಷ್ಠವಾಗಿ ಆಚಾರ್‍ಯರಿಗೆ ಸೇವೆಯನ್ನು ಮಾಡಲು ಆತ್ಮವಿಶ್ವಾಸವನ್ನು ಹೊಂದಿರುತ್ತಾರೋ ಅವರನ್ನೇ ಶಿಷ್ಯನೆಂದು ಕರೆಯುತ್ತಾರೆ.)

ಜಯಸಂಹಿತ ಶ್ಲೋಕ :

ಶರೀರಮ್ ವಸು ವಿಜ್ಞಾನಮ್ ವಾಸಃ ಕರ್ಮ ಗುಣಾನಸೂನ್  ।
ಗುರ್ವರ್ಥಮ್ ಧಾರಯೇದ್ಯಸ್ತು ಸ ಶಿಷ್ಯೋ ನೇತರಃ ಸ್ಮೃತಃ  ॥

(ಯಾರು ತನ್ನ ಭೌತಿಕವಾದ ದೇಹ, ಸಂಪತ್ತು, ಜ್ಞಾನ, ಇರುವ ಸ್ಥಳ, ಚಟುವಟಿಕೆಗಳು, ಗುಣಗಳು, ಪ್ರಾಣ ವಾಯು ಇವುಗಳೆಲ್ಲವನ್ನೂ ತನ್ನ ಆಚಾರ್‍ಯನಿಗೆ ಮುಡಿಪಾಗಿರುತ್ತಾನೋ, ಅವನನ್ನೇ ಶಿಷ್ಯನೆಂದು ಪರಿಗಣಿಸಲಾಗುವುದು. ಇವುಗಳಿಂದ ವ್ಯತ್ಯಾಸವಾಗಿರುವವನು ಶಿಷ್ಯನಾಗುವುದಿಲ್ಲ.)

ನ್ಯಾಸವಿಂಶತಿ – 7 ನೆಯ ಶ್ಲೋಕಮ್

ಸಬುದ್ಧಿಃ ಸಾಧುಸೇವಿ ಸಮುಚಿತ ಚರಿತಸ್ ತತ್ವಬೋಧಾಭಿಲಾಶೀ
ಶುಶ್ರೂಷುಸ್ ತ್ಯಕ್ತ ಮಾನಃ ಪ್ರನಿಪತನಪರಃ ಪ್ರಶ್ನ ಕಾಲ ಪ್ರತೀಕ್ಷಃ ।
ಶಾಂತೋ ಧಾಂತೋನಸೂಯುಃ ಶರಣಮುಪಗತಃ ಶಾಸ್ತ್ರವಿಶ್ವಾಸಶಾಲೀ
ಶಿಷ್ಯಃಪ್ರಾಪ್ತಃ ಪರೀಕ್ಷಾಮ್ ಕೃತವಿಧಭಿಮತಸ್ ತತ್ವತಃ ಶಿಕ್ಷಣೀಯಃ ॥

(ಯಾರಿಗೆ ಸ್ವಸ್ಥವಾದ ಜ್ಞಾನವಿದೆಯೋ, ಯಾರು ಬುದ್ಧಿವಂತ ಜನರನ್ನು ಹಿಂಬಾಲಿಸುತ್ತಾರೋ, ಯಾರೊಬ್ಬರ ಚಟುವಟಿಕೆಗಳು ಅವರವರ ಜ್ಞಾನಕ್ಕೆ ಹೊಂದಾಣಿಕೆಯಾಗುತ್ತದೆಯೋ, ಯಾರು ನಿಜವಾದ ಜ್ಞಾನವನ್ನು ಪಡೆಯಲು ಉತ್ಸುಕರಾಗಿದ್ದಾರೋ, ಯಾರು ಅವರ ಆಚಾರ್‍ಯರಿಗೆ ಸೇವೆ ಸಲ್ಲಿಸಲು ಬಯಸುತ್ತಾರೋ, ಯಾರೊಬ್ಬರು ಅಹಂಕಾರವಿಲ್ಲದಿರುವರೋ, ಯಾರು ಅವರ ಆಚಾರ್‍ಯರ ದಿವ್ಯ ಪಾದಗಳಿಗೆ ನಮಸ್ಕರಿಸಲು ವ್ಯಸ್ತರಾಗಿರುತ್ತಾರೋ, ಯಾರು ಒಂದು ಪ್ರಶ್ನೆಯನ್ನು ಸರಿಯಾದ ಸಮಯಕ್ಕೆ ಕೇಳುತ್ತಾರೋ, ಯಾರಿಗೆ ಬಹಿರಂಗವಾಗಿ ಮತ್ತು ಆಂತರಿಕವಾಗಿ ತಮ್ಮ ಇಂದ್ರಿಯಗಳನ್ನು ಹತೋಟಿಯಲ್ಲಿಡಬಲ್ಲರೋ, ಯಾರು ಮತ್ಸರವನ್ನು ದೂರವಿಡುತ್ತಾರೋ, ಯಾರು ಅವರ ಆಚಾರ್‍ಯರು ವಾಸಿಸುವ ಸ್ಥಳಕ್ಕೇ ತಲುಪುತ್ತಾರೋ, ಯಾರಿಗೆ ಶಾಸ್ತ್ರದಲ್ಲಿ ನಂಬಿಕೆ ಇರುವುದೋ, ಯಾರನ್ನು ಈ ಮೇಲಿನ ಗುಣಗಳಲ್ಲಿ ಪರೀಕ್ಷಿಸಲಾಗಿದೆಯೋ, ಯಾರು ಶ್ರೇಷ್ಠ ವ್ಯಕ್ತಿಗಳು ತನ್ನ ಆಚಾರ್‍ಯರ ಉಪಯುಕ್ತ ಚಟುವಟಿಕೆಗಳನ್ನು ಮರೆಯುವುದಿಲ್ಲವೋ, ಅಂತಹ ವ್ಯಕ್ತಿಗಳಿಗೆ ಪ್ರಿಯವಾದವನು, ಅವನೇ ಶಿಷ್ಯನೆಂದು ಸರಿಯಾಗಿ ಕರೆಯಲ್ಪಡುವನು.)

ಸಂಸಾರಿಗಳಿಗೆ (ಈ ಲೌಕಿಕ ಜಗತ್ತಿನಲ್ಲಿ ವಾಸಿಸುವವರು) ಶಿಷ್ಯಲಕ್ಷಣಮ್ (ಒಬ್ಬ ಶಿಷ್ಯನ ಗುರುತುಗಳು) ತಿಳಿದಿಲ್ಲದಿರುವುದರಿಂದ, ಅವು ಏನೆಂದರೆ ಎಂಪೆರುಮಾನರನ್ನು ಪಡೆಯಲು ಬೇರೆ ಮಾಧ್ಯಮಗಳನ್ನು ಅವಲಂಬಿಸದಿರುವುದು, ಸೇವೆಗಳನ್ನು ಮಾಡುವುದು (ಇದನ್ನು ಒಂದು ಮಾಧ್ಯಮವಾಗಿ ತಿಳಿದು ಎಂಪೆರುಮಾನರನ್ನು ಪಡೆಯಲು), ಎಂಪೆರುಮಾನರನ್ನು ಪಡೆಯುವ ಹಂಬಲವನ್ನು ಹೊಂದಿರುವುದು, ಮಾತ್ಸರ್‍ಯವನ್ನು ದೂರಮಾಡುವುದು (ಆಚಾರ್‍ಯರ ಹತ್ತಿರ), ಈ ವಿಷಯಗಳನ್ನು ಸ್ಪಷ್ಟ ಪಡಿಸಲು ಎಂಪೆರುಮಾನರು ಶಿಷ್ಯನ ಪಾತ್ರವನ್ನು ಮಾಡಿದರು. ಈ ಲಕ್ಷಣಗಳನ್ನು ತಿಳಿಸಲು ಅವರು ಈ ಗುಣಗಳನ್ನು ತಾವೇ ಸ್ವತಃ ಅಭ್ಯಸಿಸಿದರು.

ಪಿಳ್ಳೈ ಲೋಕಾಚಾರ್‍ಯರು ಹೇಳುತ್ತಾರೆ, “ಎಂಪೆರುಮಾನರು ಈ ಗುಣಗಳನ್ನು ಬೋಧಿಸಿದ್ದರೆ, ಸಂಸಾರಿಗಳು ತನ್ನನ್ನು ತಾನೇ ಪ್ರಶಂಶಿಸುತ್ತಿದ್ದಾರೆಂದು ಸುಮ್ಮನೆ ದೂರುವರು. ಆದರೆ ಅವರು ಈ ಗುಣಗಳನ್ನು ಅಭ್ಯಾಸ ಮಾಡಿಕೊಂಡು ತೋರಿಸಿದರೆ, ಅವರಿಗೆ ತಾನಾಗಿಯೇ ನಂಬಿಕೆ ಬಂದು ಅದನ್ನು ಹಿಂಬಾಲಿಸುವರು “ ಎಂದು ಹೇಳಿದ್ದಾರೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : https://srivaishnavagranthams.wordpress.com/2020/02/20/mumukshuppadi-suthrams-4-6/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org