Category Archives: mumukshuppadi

ಮುಮುಕ್ಷುಪ್ಪಡಿ – ಸೂತ್ರಮ್ 16 – 20

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಸೂತ್ರಮ್ – 16

ಪರಿಚಯ:  ಯಾವುದಾದರೂ ಸಂದರ್ಭದಲ್ಲಿ ಅವನು ದೂರದಲ್ಲಿದ್ದಾಗ ಅವನನ್ನು ಹೆಸರಿಸುವ ಈ ಶಬ್ದವು ನೆರವಾಗಿದೆಯೇ? ಎಂಬ ಪ್ರಶ್ನೆಗೆ ಲೋಕಾಚಾರ್‍ಯರು ದ್ರೌಪದಿಯು ಅತೀವ ಸಂಕಟದಲ್ಲಿದ್ದಾಗ ಅವಳಿಗೆ ವಸ್ತ್ರವನ್ನು ಕೊಡುವ ಮೂಲಕ ಈ ಪದವು ನೆರವಾಗಿದೆ ಎಂದು ಸೂತ್ರ 16 ರಲ್ಲಿ ಹೇಳಿದ್ದಾರೆ.

ದ್ರೌಪದಿಕ್ಕು ಆಪತ್ತಿಲೇ ಪುಡುವೈ ಸುರಂದದು ತಿರುನಾಮಮಿಱೇ.

ಸರಳ ಅರ್ಥ: ದ್ರೌಪದಿಯು ಆಪತ್ತಿನಲ್ಲಿರುವಾಗ ಅವಳಿಗೆ ಸೀರೆಯ ಭಂಡಾರವನ್ನೇ ಅವನ ಈ ದಿವ್ಯ ನಾಮವು (ತಿರುನಾಮಮ್) ಕೊಟ್ಟಿದೆ.

ವ್ಯಾಖ್ಯಾನಮ್: ದುಃಶ್ಶಾಸನನು ಹಿರಿಯ ಸಭೆಯಲ್ಲಿ ದ್ರೌಪದಿಯ ಸೀರೆಯನ್ನು ಎಳೆಯುವಾಗ, ದ್ರೌಪದಿಯು ಮಹರ್ಷಿ ವಸಿಷ್ಠರು ಬೋಧಿಸಿದ ಬಹಳ ಪುರಾತನವಾದ ಹೇಳಿಕೆಯನ್ನು ನೆನಪಿಸಿಕೊಂಡಳು, ಭಾರತಮ್ ಸಭಾ ಪರ್ವಮ್ – ದ್ಯೂತ ಪರ್ವಮ್ –  90-42:

ಮಹತ್ಯಾಪದಿ ಸಂಪ್ರಾಪ್ತೇ ಸ್ಮರ್ತವ್ಯೋ ಭಗವಾನ್ ಹರಿಃ

(ಅತೀ ಸಂಕಟಕ್ಕೊಳಗಾದಾಗ ಅವರು ಹರಿಯನ್ನು ನೆನಪಿಸಿಕೊಳ್ಳಬೇಕು.)

ಶಂಖ ಚಕ್ರ ಗದಾಪಾಣೇ ದ್ವಾರಕಾ ನಿಲಯ ಅಚ್ಯುತ ।

ಗೋವಿಂದ ಪುಣ್ಡರೀಕಾಕ್ಷ ರಕ್ಷ ಮಾಮ್ ಶರಣಾಂಗತಾಮ್ ॥

(ಶಂಖ ಚಕ್ರ, ಗದೆಯನ್ನು ಕೈಯಲ್ಲಿ ಹಿಡಿದಿರುವ ಓ ಭಗವಂತನೇ! ದ್ವಾರಕದಲ್ಲಿ ನೆಲೆಸಿರುವ ಅಚ್ಯುತ! ಗೋವಿಂದ! ಕಮಲದಂತಹ  ಕಣ್ಣುಗಳನ್ನು ಹೊಂದಿರುವವನೇ! ನಿನ್ನನ್ನು ಶರಣು ಹೊಂದಿರುವ ನನ್ನನ್ನು ರಕ್ಷಿಸು).

ದೂರದಲ್ಲಿರುವ ಅವನು ಭಾರತಮ್ – ಉದ್ಯೋಗ ಪರ್ವಮ್-47-39ರಲ್ಲಿ ಉಲ್ಲೇಖಿಸಿರುವಂತೆ ,ಈ ರೀತಿ ಹೇಳುತ್ತಾನೆ,  :

“ಗೋವಿಂದೇತಿ ಯದ್ ಆಕ್ರಂದತ್ ಕೃಷ್ಣಾ ಮಾಮ್ ದೂರವಾಸಿನಮ್”

(ದ್ರೌಪದಿಯು ದೂರದಲ್ಲಿದ್ದುಕೊಂಡು ನನ್ನನ್ನು “ಗೋವಿಂದ” ಎಂದು ಕರೆಯುತ್ತಿರುವುದು ನನಗೆ ತೀರಿಸಲಾರದ ಋಣವಾಗಿ ಬೆಳೆಯುತ್ತಿದೆ, ಅದು ನನ್ನ ಹೃದಯವನ್ನು ಬಿಟ್ಟು ಎಂದಿಗೂ ಹೋಗುವುದಿಲ್ಲ.)

ಅವನು ದ್ರೌಪದಿಗೆ ಗೋವಿಂದ ಎಂಬ ನಾಮವನ್ನು ಉಚ್ಚರಿಸಿದ್ದಕ್ಕಾಗಿ ವಸ್ತ್ರದ ಹೊಳೆಯನ್ನೇ ಹರಿಸಿದನು. ಗೋವಿಂದ ಎಂಬ ನಾಮವು ಆ ಅವತಾರಕ್ಕೆ ಮಾತ್ರ ಮೀಸಲಾದದ್ದು. ಈ ಒಂದು ನಾಮವು ನಾರಾಯಣ ಎಂಬ ದಿವ್ಯ ನಾಮದ ಒಂದೇ ಒಂದು ಭಾಗವನ್ನು ಪ್ರತಿಬಿಂಬಿಸುತ್ತದೆ. ಹಾಗಾದರೆ ಲೋಕಾಚಾರ್‍ಯರು ತಿರುನಾಮದ ಮಹತ್ವವನ್ನು, ಪರಿಣಾಮಕಾರಿತ್ವವನ್ನು ಯಾರಿಂದಲೂ ವರ್ಣಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.

ಸೂತ್ರಮ್ – 17

ಪರಿಚಯ: ಲೋಕಾಚಾರ್‍ಯರು ಈ ದಿವ್ಯ ನಾಮದ ಶ್ರೇಷ್ಠತೆಯನ್ನು ಮತ್ತೂ ನಿರೂಪಿಸುತ್ತಾರೆ, 17ನೆಯ ಸೂತ್ರದಲ್ಲಿ ‘ಸೊಲ್ಲುಮ್ ಕ್ರಮಮ್ ಒೞಿಯ ಚೊನ್ನಾಲುಮ್’ ಎಂದು ಆರಂಭಿಸಿ.

ಸೊಲ್ಲುಮ್ ಕ್ರಮಮ್ ಒೞಿಯ ಚೊನ್ನಾಲುಮ್ ತನ್ ಸ್ವರೂಪಮ್ ಕೆಡ ನಿಲ್ಲಾದು.

ಸರಳ ಅರ್ಥ: ಈ ದಿವ್ಯ ನಾಮವನ್ನು ಅತ್ಯಂತ ಶ್ರದ್ಧೆಯಿಂದ ಪಠಿಸಲಾಗದಿದ್ದರೂ, ಅದು ತನ್ನ ಶ್ರೇಷ್ಠತೆಯನ್ನು , ಫಲವನ್ನೂ ಕಳೆದುಕೊಳ್ಳುವುದಿಲ್ಲ.

ವ್ಯಾಖ್ಯಾನಮ್: ಯಾವ ಮಂತ್ರವಾದರೂ ಅದನ್ನು ಉಚ್ಛರಿಸುವವರಿಗೆ ಬಯಸಿದ ಫಲವನ್ನು ಕೊಟ್ಟೇ ಕೊಡುತ್ತದೆ, ಆದರೆ ಅದನ್ನು ಪೂರ್ತಿಯಾಗಿ ನಂಬಿ ಪಠಿಸಿದಾಗ. ಈ ಸಾಮಾನ್ಯ ಆಚರಣೆಗೆ ವಿರುದ್ಧವಾಗಿ ಈ ಮಂತ್ರವು, ಇದನ್ನು ಸಾಧಾರಣವಾಗಿ ಪಠಿಸಿದರೂ, ಇದು ಅವರನ್ನು ರಕ್ಷಿಸುತ್ತದೆ ಎಂದು ಭಾಗವತಮ್ 6-3-14 ರಲ್ಲಿ ಹೇಳಲಾಗಿದೆ:

ಸಾಂಕೇತ್ಯಮ್ ಪಾರಿಹಾಸ್ಯಂಚ ಸ್ತೋಭಮ್ ಹೇಲನಮೇವ ವಾ

(ಈ ನಾಮವನ್ನು ಉಚ್ಛರಿಸುವವರು ಇದನ್ನು ಬೇರೆಯವರನ್ನು ಉದ್ದೇಶಿಸಿ, ಅಥವಾ ವ್ಯಂಗ್ಯೋಕ್ತಿ – ಕೊಂಕುನುಡಿಯಿಂದ, ಅಥವಾ ಅರ್ಥವನ್ನು ಮನಗಾಣದೇ, ಅಥವಾ ಹಾಸ್ಯಾಸ್ಪದವಾಗಿ ಉಚ್ಛರಿಸಿದರೂ, ವೈಂಕುಂಠನಾಥನ ನಾಮವು ಅವರ ಪಾಪಗಳನ್ನೆಲ್ಲಾ ತೊಳೆದುಹಾಕುತ್ತದೆ.)

ಇದು ಉಚ್ಛರಿಸುವವನ ಅವಶ್ಯಕತೆಗಳನ್ನು ಗುರುತಿಸಿ ಆದರೆ ಅವನ ಉದ್ದೇಶವನ್ನು, ಅದನ್ನು ಉಚ್ಛರಿಸುವ ರೀತಿಯನ್ನು, ಕಡೆಗಣಿಸುತ್ತದೆ. ಅದು ಅದರ ಮೂಲ ಸ್ವರೂಪವಾದ ರಕ್ಷಿಸುವ ಸ್ವಭಾವವನ್ನು ಬಿಡುವುದಿಲ್ಲ.

ಸೂತ್ರಮ್ – 18

ಪರಿಚಯ: ಈ 18ನೆಯ ಸೂತ್ರದಲ್ಲಿ ಲೋಕಾಚಾರ್‍ಯರು ಕರುಣೆಯಿಂದ , ಇದನ್ನು ಉಚ್ಛರಿಸುವವನ ಎಲ್ಲಾ ನಿರೀಕ್ಷೆಗಳನ್ನು, ಬಯಕೆಗಳನ್ನು, ಅವಶ್ಯಕತೆಗಳನ್ನು ಪೂರ್ತಿಯಾಗಿ ನೆರವೇರಿಸುತ್ತದೆ ಎಂದು ತಿಳಿಸಿದ್ದಾರೆ.

ಇದುದಾನ್ ‘ಕುಲಮ್ ತರುಮ್’ ಎಂಗಿಱಪ್ಪಾಡಿಯೇ ಎಲ್ಲಾ ಅಪೇಕ್ಷಿತಂಗಳೈಯುಮ್ ಕೊಡುಕ್ಕುಮ್.

ಸರಳ ಅರ್ಥ: ‘ಕುಲಮ್ ತರುಮ್’ ನಲ್ಲಿ ಹೇಳಿಕೆಯಿರುವ ಹಾಗೆ ಎಲ್ಲಾ ಅಪೇಕ್ಷೆಗಳನ್ನೂ ಇದು ಈಡೇರಿಸುತ್ತದೆ.

ವ್ಯಾಖ್ಯಾನಮ್: ಏನೆಂದರೆ, ಈ ಮಂತ್ರವು ಎಲ್ಲಾ ಪ್ರಯೋಜನಗಳನ್ನೂ ಮತ್ತು ಅಪೇಕ್ಷೆಗಳನ್ನೂ ತಿರುಮಂಗೈ ಆೞ್ವಾರರು ಅವರ ಪೆರಿಯ ತಿರುಮೊೞಿ 1-1-9 ‘ಕುಲಮ್ ತರುಮ್’  ಪಾಸುರದಲ್ಲಿ ಹೇಳಿರುವ ಹಾಗೆ ಅವರವರ ಯೋಗ್ಯತೆಗೆ ತಕ್ಕಂತೆ ಫಲವನ್ನು ಕೊಡುವುದು ಎಂದು ಅರ್ಥ.

ಸೂತ್ರಮ್ – 19

ಪರಿಚಯ: ಲೋಕಾಚಾರ್‍ಯರು ಇದನ್ನು ನಂತರದ 19ನೆಯ ಸೂತ್ರದಲ್ಲಿ ತಿಳಿಸಿದ್ದಾರೆ.

ಐಶ್ವರ್‍ಯ ಕೈವಲ್ಯ ಬಗವಲ್ಲಾಬಂಗಳೈ ಆಸೈಪ್ಪಟ್ಟವರ್ಗಳುಕ್ಕು ಅವಱ್ಱೈ ಕೊಡುಕ್ಕುಮ್.

ಸರಳ ಅರ್ಥ: ಇದು ಐಶ್ವರ್‍ಯ, ಕೈವಲ್ಯ ಮತ್ತು ಭಗವದ್ ಪ್ರಾಪ್ತಿಗಳನ್ನು ಆಯಾ ಯಾಚಕರ ಅನುಸಾರವಾಗಿ ಕೊಡುವುದು.

ವ್ಯಾಖ್ಯಾನಮ್: ಈ ಮಂತ್ರವನ್ನು ಪಠಿಸುವವರಿಗೆ ಯಾರಿಗೆ ಲೌಕಿಕ ಆಸಕ್ತಿಯಿರುವವರಿಗೆ ಈ ಲೋಕದಲ್ಲಿ ಮತ್ತು ಮುಂದಿನ ಲೋಕದಲ್ಲಿಯೂ ಐಶ್ವರ್‍ಯವನ್ನು ಕೊಡುತ್ತದೆ. ಕೈವಲ್ಯವನ್ನು ಯಾರು ಜನನ ಮರಣಗಳಿಂದ ಮುಕ್ತಿಯನ್ನು ಬಯಸುತ್ತಾರೋ ಅವರಿಗೆ ಕೊಡುತ್ತದೆ. ಮತ್ತು ಅತಿ ಉಚ್ಛವಾದ ವರವಾದ ಸರ್ವೇಶ್ವರನ ಪಾದಕಮಲಗಳನ್ನು ನಿರಂತರವಾಗಿ ಸೇವೆ ಮಾಡುವ ಭಾಗ್ಯವನ್ನು ಪ್ರಪನ್ನರಿಗೆ ಅವರವರ ಧ್ಯಾನ ಮತ್ತು ಪರಿತ್ಯಾಗಗಳಿಗೆ ಅನುಸಾರವಾಗಿ ವೃದ್ಧ ಹಾರಿತ ಸ್ಮೃತಿ 6-50 ರಲ್ಲಿ ಹೇಳಿರುವ ಹಾಗೆ ಕೊಡುತ್ತದೆ:

ಐಹ ಲೌಕಿಕಮ್ ಐಶ್ವರ್‍ಯಮ್ ಸ್ವರ್ಗಾಧ್ಯಮ್ ಪಾರ ಲೌಕಿಕಮ್ ।

ಕೈವಲ್ಯಮ್ ಭಗವಂತಂಚ ಮಂತ್ರೋಯಮ್ ಸಾಧಯಿಶ್ಯತಿ ॥

( ಈ ಮಂತ್ರವು ಲೌಕಿಕ ಐಶ್ವರ್‍ಯವನ್ನೂ, ಬೇರೆ ಲೋಕಗಳ ಐಶ್ವರ್‍ಯವನ್ನು ಸ್ವರ್ಗವನ್ನೂ, ಅಥವಾ ತನ್ನ ಆತ್ಮವನ್ನೇ ತಾನು ಆನಂದಿಸುವ ಕೈವಲ್ಯವನ್ನೂ, ಅಥವಾ ಭಗವಂತನ ಅನುಭವ ಪಡೆಯುವುದನ್ನು ಅವರವರ ಇಚ್ಛೆಗೆ ಅನುಗುಣವಾಗಿ ಕೊಡುತ್ತದೆ.)

ಸೂತ್ರಮ್ – 20

ಪರಿಚಯ: ನಂತರದಲ್ಲಿ ಲೋಕಾಚಾರ್‍ಯರು ಹೇಗೆ ಕರ್ಮ ಜ್ಞಾನ ಭಕ್ತಿ ಯೋಗದಲ್ಲಿ ಮುಳುಗಿರುವವರಿಗೆ ಪೂರಕವಾಗಿ ಮುಂದೆ ತರಲು ಪ್ರಯತ್ನಿಸುತ್ತದೆ ಎಂದು 20ನೆಯ ಸೂತ್ರದಲ್ಲಿ ವಿವರಿಸಿದ್ದಾರೆ.

ಕರ್ಮ ಜ್ಞಾನ ಬಕ್ತಿಗಳಿಲೇ ಇೞಿಂದವರ್ಗಳುಕ್ಕು ವಿರೋಧಿಯೈ ಪ್ಪೋಕ್ಕಿ ಅವಱ್ಱೈ ತಲೈಕಟ್ಟಿ ಕೊಡುಕ್ಕುಮ್.

ಸರಳ ಅರ್ಥ: ಯಾರು ಕರ್ಮ, ಜ್ಞಾನ , ಭಕ್ತಿ ಯೋಗಗಳಲ್ಲಿ (ಕಾರ್ಯಗಳು, ಅರಿವು, ಮತ್ತು ಭಕ್ತಿಯೆಂಬ ಮಾರ್ಗಗಳಿಂದ) ತೊಡಗಿರುವವರಿಗೆ, ಅವರವರ ಅಡ್ಡಿ ಆತಂಕಗಳನ್ನು ತೊಡೆದು ಹಾಕಿ, ಅವರಿಗೆ ಅಂತಿಮ ಫಲವನ್ನು ಕೊಡುತ್ತದೆ.

ವ್ಯಾಖ್ಯಾನಮ್: ಕರ್ಮ ಯೋಗಿಗಳಿಗೆ, ಅವರ ಧ್ಯಾನ, ಪದ್ಧತಿಗಳಿಗೆ ಅನುಸಾರವಾಗಿ ಪೂರಕವಾಗಿ ಈ ಮಂತ್ರವು ಅವರ ಕರ್ಮಯೋಗದ ಪ್ರಾರಂಭದಲ್ಲಿ ಅಡ್ಡಿಯಾಗಿರುವ ಪಾಪಗಳನ್ನು ತೊಡೆದುಹಾಕಿ, ಅವರಿಗೆ ಅವರು ಬಯಸಿದ ಕರ್ಮ ಯೋಗದ ಫಲವನ್ನು ದಯಪಾಲಿಸುವುದು. ಜ್ಞಾನ ಯೋಗಿಗಳಿಗೆ, ಇದು ಜ್ಞಾನವನ್ನು ಪಡೆಯಲು ಬರುವ ಅಡ್ಡಿ ಆತಂಕಗಳನ್ನು ಕರ್ಮ ಯೋಗದ ಮೂಲಕ ತೊಡೆದು ಹಾಕಿ, ಅದಕ್ಕೆ ಅಡ್ಡಿಯಾಗಿರುವ ಪಾಪಗಳನ್ನು ಅಳಿಸಿ, ಅವರ ಬುದ್ಧಿಯನ್ನು ಪ್ರಕಾಶಮಾನಗೊಳಿಸಿ, ದಿನದಿಂದ ದಿನಕ್ಕೆ ಅವರಿಗೆ ಪರಮಾನಂದವನ್ನು ಹೆಚ್ಚಿಸುವುದು. ಯಾರು ಭಕ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೋ, ಅವರು ಈ ಮಂತ್ರವನ್ನು ಪೂರಕವಾಗಿ ಅಳವಡಿಸಿಕೊಂಡರೆ, ಅಂತಹ ಭಕ್ತಿಗೆ ಅವರ ಪ್ರಾರಂಭದಲ್ಲಿನ ಪಾಪಗಳನ್ನು ನಾಶಪಡಿಸಿ, ಅವರ ಭಕ್ತಿಯನ್ನು ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಿ ಅವರ ಉದ್ದೇಶವನ್ನು ಸಫಲಗೊಳಿಸುತ್ತದೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.

ಮೂಲ : https://srivaishnavagranthams.wordpress.com/2020/06/11/mumukshuppadi-suthrams-16-20/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org

ಮುಮುಕ್ಷುಪ್ಪಡಿ ಸೂತ್ರಗಳು – 13 – 15

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಸೂತ್ರಮ್ – 13

ಪರಿಚಯ: “ಈ ಮಂತ್ರವು ಬೇರೆ ಬೇರೆಯಾದ ವೈವಿಧ್ಯಮಯ ಜನಗಳಿಂದ ಒಪ್ಪಿಗೆ ಪಡೆದು ಅಳವಡಿಸಿಕೊಳ್ಳಲ್ಪಟ್ಟಿದೆಯೇ?” ಎಂಬ ಪ್ರಶ್ನೆಗೆ ಲೋಕಾಚಾರ್‍ಯರು 13ನೆಯ ಸೂತ್ರದಲ್ಲಿ ಉತ್ತರಿಸುತ್ತಾರೆ:

ಇತ್ತೈ ವೇದಂಗಳುಮ್ ಋಷಿಗಳುಮ್ ಆೞ್ವಾರ್ಗಳುಮ್ ಆಚಾರ್‍ಯರ್ಗಳುಮ್ ವಿರುಂಬಿನಾರ್ಗಳ್.

ಸರಳ ಅರ್ಥ:  ವೇದಗಳು, ಋಷಿಗಳು, ಆಳ್ವಾರರುಗಳು, ಮತ್ತು ಆಚಾರ್‍ಯರುಗಳು ಇದನ್ನು ಇಷ್ಟ ಪಟ್ಟಿದ್ದಾರೆ.

ವ್ಯಾಖ್ಯಾನಮ್:  ಅಪೌರುಷೇಯವಾದ ವೇದಗಳು (ಅವು ಯಾರಿಂದಲೂ ರಚಿಸಲ್ಪಟ್ಟಿಲ್ಲ), ನಿರಂತರವಾಗಿ ಶುದ್ಧವಾದ ಮತ್ತು ನಿಷ್ಕಳಂಕವಾದ, ಸ್ವಾವಲಂಬಿಯಾದ (ಅದರ ನಿರೂಪಣೆಗೆ ಯಾವ ರೀತಿಯ ಒಪ್ಪಿಗೆಯೂ ಬೇಕಿಲ್ಲ), ವೇದವನ್ನು ಇಷ್ಟಪಡುವರು ಏಕೆಂದರೆ:

ವಿಷ್ಣು ಗಾಯತ್ರಿಯಲ್ಲಿ ಎಲ್ಲಾ ಮೂರು ವ್ಯಾಪಕ ಮಂತ್ರಗಳನ್ನು ಜಪಿಸುವಾಗ, ಒಂದು ಶಬ್ದವು ‘ನಾರಾಯಣ’ ಎಂದು ಉಲ್ಲೇಖಿಸುತ್ತದೆ. ಅದು ಇವುಗಳನ್ನು ಹೊಂದಿದೆ:

“ವಿಶ್ವಮ್ ನಾರಾಯಣಮ್”.     (ತೈತ್ತಿರೀಯ-ನಾರಾಯಣ ಅನುವಾಕ) (ನಾರಾಯಣನೇ ಎಲ್ಲವೂ) ಎಲ್ಲಾ ವೇದಾಂತಗಳ ಸಾರವಾದ ನಾರಾಯಣ ಅನುವಾಕದಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

ನಾರಾಯಣ ಪರಮ್ ಬ್ರಹ್ಮ ತತ್ವಮ್ ನಾರಾಯಣಃ ಪರಃ
ನಾರಾಯಣ ಪರೋ ಜ್ಯೋತಿಃ ಆತ್ಮ ನಾರಾಯಣಃ ಪರಃ
ಯಚ್ಚ ಕಿಂಚಿತ್ ಜಗತ್ಯಸ್ಮಿನ್ ದೃಶ್ಯತೆ ಶ್ರೂಯತೇಪಿ ವಾ
ಅಂತರ್ ಬಹಿಶ್ಚ ತತ್ ಸರ್ವಮ್ ವ್ಯಾಪ್ಯ ನಾರಾಯಣಃ ಸ್ಥಿತಃ

(ತೈತ್ತಿರೀಯ ನಾರಾಯಣ – ನಾರಾಯಣನೇ ಸರ್ವ ಶ್ರೇಷ್ಠ ಬ್ರಹ್ಮನು; ನಾರಾಯಣನೇ ಅತಿ ಉನ್ನತದಲ್ಲಿರುವವನು; ನಾರಾಯಣನೇ ಶ್ರೇಷ್ಠ ಪ್ರಭೆ; ನಾರಾಯಣನೇ ಸರ್ವೋಚ್ಚ ಆತ್ಮನಾದವನು; ನಾರಾಯಣನೇ ಒಳಗೆ ಮತ್ತು ಹೊರಗೆ ಆಗುವ ಕಾರ್ಯಗಳನ್ನು ನಡೆಸುವವನು)

ಮಹೋಪನಿಶತ್‍ನಲ್ಲಿ ಹೀಗೆ ಹೇಳಲಾಗಿದೆ:

ಏಕೋ ಹವೈ ನಾರಾಯಣ ಆಸಿನ್ ನಬ್ರಹ್ಮಾ ನೇಶಾನೋನೇಮೇ ಧ್ಯಾವಾ ಪೃಥ್ವಿ।

(ಮಹಾ ಪ್ರಳಯದ ಕಾಲದಲ್ಲಿ ನಾರಾಯಣರು ಮಾತ್ರ ಇದ್ದರು; ಬ್ರಹ್ಮನೂ ಇರಲಿಲ್ಲ, ಶಿವನೂ ಸಹ ಇರಲಿಲ್ಲ; ಈ ಭೂಮಿ ಆಕಾಶಗಳೂ ಇರಲಿಲ್ಲ)

ಶುಭಾಲೊಪನಿಶತ್‍ನಲ್ಲಿ ಹೇಳಿರುವ ಪ್ರಕಾರ

“ಚಕ್ಷುಶ್ಚ ದ್ರಷ್ಟವ್ಯಂಚ ನಾರಾಯಣಃ
ಶ್ರೋತಂಚ ಶ್ರೋತವ್ಯಂಚ ನಾರಾಯಣ
ದಿಶಂಶ್ಚ ಪ್ರದಿಶಶ್ಚ ನಾರಾಯಣಃ”

(ಕಣ್ಣುಗಳು ಮತ್ತು ಯಾವುದನ್ನು ನೋಡುತ್ತೇವೆಯೋ ಅವು ನಾರಾಯಣ; ಕಿವಿಗಳು ಮತ್ತು ಯಾವುದನ್ನು ಕೇಳಿಸಿಕೊಳ್ಳುತ್ತೇವೆಯೋ ಅವು ನಾರಾಯಣ; ದಿಕ್ಕುಗಳು ಮತ್ತು ಉಪದಿಕ್ಕುಗಳು ನಾರಾಯಣ);

ಅಂತರ್ಯಾಮಿ ಬ್ರಾಹ್ಮಣದ ಮೊದಲಿನಲ್ಲಿ, ಮಧ್ಯದಲ್ಲಿ ಮತ್ತು ಕೊನೆಯಲ್ಲಿ ಪದೇ ಪದೇ ಹೀಗೆ ಹೇಳಲಾಗಿದೆ:

ಯಸ್ಯಾತ್ಮ ಶರೀರಮ್ ಯಸ್ಯ ಪೃಥ್ವಿ ಶರೀರಮ್
ಯಸ್ಯ ಮೃತ್ಯುಃ ಶರೀರಮ್
ಏಷ ಸರ್ವಭೂತಾಂತರಾತ್ಮಾ ಅಪಹತಪಾಪ್ಮಾ
ದಿವ್ಯೋ ದೇವ ಏಕೋ ನಾರಾಯಣಃ

(ಶುಭಾಲೊಪನಿಶತ್ : ಯಾರಿಗೆ ಆತ್ಮವೇ ದೇಹವಾಗಿರುತ್ತದೆಯೋ; ಯಾರಿಗೆ ಭೂಮಿಯೇ ದೇಹವಾಗಿರುತ್ತದೆಯೋ; ಯಾರಿಗೆ ಮೃತ್ಯುವಿನಿಂದ ಸೂಚಿಸಲ್ಪಡುವ ಮೂಲ ಪ್ರಕೃತಿಯೇ ದೇಹವಾಗಿರುವುದೋ; ಅಂತಹ ಸ್ವಾಮಿಯೇ ಎಲ್ಲಾ ಜೀವರಾಶಿಗಳ ಅಂತರಾತ್ಮವಾಗಿರುತ್ತಾನೆಯೋ ಅಂತಹವನೇ ಎಲ್ಲಾ ರೀತಿಯ ನ್ಯೂನ್ಯತೆಗಳಿಂದ ಹೊರತಾಗಿರುವ ನಾರಾಯಣ ಮಾತ್ರವೇ)

ಈ ಎಲ್ಲಾ ಉದಾಹರಣೆಗಳಲ್ಲಿಯೂ ವೇದವು ‘ವಿಷ್ಣು’ ಮತ್ತು ‘ವಸುದೇವ’ ಎಂಬ ಶಬ್ದಗಳನ್ನು ಕಡೆಗಣಿಸಿ, ‘ನಾರಾಯಣ’ ಎಂಬ ಶಬ್ದವನ್ನು ಮಾತ್ರ ಪರಿಗಣಿಸಿ ದಿವ್ಯ ಗುಣಗಳನ್ನು,ರೂಪವನ್ನೂ ಪ್ರತಿಪಾದಿಸುತ್ತದೆ.

ವ್ಯಾಸರು ಮತ್ತು ಇತರ ಪರಮ ಋಷಿಗಳು ವೇದಗಳ ಶ್ರೇಷ್ಠವಾದ ಅರ್ಥಗಳನ್ನು ತಮ್ಮ ಸಾಹಿತ್ಯಗಳಾದ “ಉಪಬ್ರಹ್ಮಣ” ಗಳೆಂದೇ (ವೇದಗಳಿಗೆ ಪೂರಕವಾದದ್ದು) ಪ್ರಸಿದ್ಧವಾದ ಗ್ರಂಥಗಳಲ್ಲಿ ಈ ಶಬ್ದವನ್ನು ಮಾತ್ರ ಆಯ್ದುಕೊಂಡಿದ್ದಾರೆ. ಇದನ್ನು ನಾರದೀಯಮ್ ಅಷ್ಟಾಕ್ಷರ ಬ್ರಹ್ಮವಿದ್ಯಾ 1-41 ರಲ್ಲಿ ಕಾಣಬಹುದು.

ಯಥಾ ಸರ್ವೇಷು ದೇವೇಷು ನಾಸ್ತಿ ನಾರಾಯಣತ್ಪರಃ ।
ತಥಾ ಸರ್ವೇಷು ಮಂತ್ರೇಷು ನಾಸ್ತಿ ಚಾಷ್ಟಾಕ್ಷರತ್ ಪರಃ ॥

(ನಾರಾಯಣರಿಗಿಂತಲೂ ಶ್ರೇಷ್ಠರಾದ ದೇವತೆಯು ಯಾರೂ ಇಲ್ಲದ ಹಾಗೆಯೇ, ಅಷ್ಟಾಕ್ಷರ ಮಂತ್ರಕ್ಕಿಂತಲೂ ಶ್ರೇಷ್ಠವಾದ ಮಂತ್ರವು ಬೇರೊಂದಿಲ್ಲ.)

ನರಸಿಂಹ ಪುರಾಣಮ್ 18-32:

ಭೂತ್ವೋರ್ಧ್ವ ಬಾಹುರಧ್ಯಾತ್ರ ಸತ್ಯ ಪೂರ್ವಮ್ ಬ್ರವೀಮಿ ವಃ ।
ಹೇ ಪುತ್ರ ಶಿಷ್ಯಃ ಶೃಣುತ ನ ಮಂತ್ರೋಷ್ಟಾಕ್ಷರಾತ್ ಪರಃ ॥

(ಓಹ್ ಮಕ್ಕಳೇ ಮತ್ತು ಶಿಷ್ಯರೇ ! ಇಲ್ಲಿ ಮತ್ತು ಈಗಿನಿಂದ , ನಾನು ನನ್ನ ಕೈಯ್ಯನ್ನು ಮೇಲೆತ್ತಿ ಈ ಶಪಥವನ್ನು ಮಾಡುತ್ತೇನೆ. ಕೇಳಿ. ತಿರುವಷ್ಟಾಕ್ಷರ ಮಂತ್ರಕ್ಕಿಂತಲೂ (ದಿವ್ಯ ಎಂಟು ಅಕ್ಷರದ ಮಂತ್ರ) ಶ್ರೇಷ್ಠವಾದ ಯಾವ ಮಂತ್ರವೂ ಇಲ್ಲ.)

ನಾರದೀಯಮ್ ಅಷ್ಟಾಕ್ಷರ ಬ್ರಹ್ಮ ವಿದ್ಯಾ 1-42 :

“ಸರ್ವ ವೇದಾಂತ ಸಾರಾರ್ಥಃ ಸಂಸಾರಾರ್ಣವ ತಾರಕಃ

ಗತಿರಷ್ಟಾಕ್ಷರೋ ನೃಣಾಮ್ ಅಪುನರ್ಭವ ಕಾಕ್ಷಿಣಾಮ್”

(ಯಾರಿಗೆ ಪುನಃ ಜನ್ಮ ಪಡೆಯಲು ಇಚ್ಛಿಸುವುದಿಲ್ಲವೋ, ವೇದಾಂತದ ಎಲ್ಲಾ ಸಾರಗಳನ್ನೂ ಹೊಂದಿರುವ ಅಷ್ಟಾಕ್ಷರ ಮಂತ್ರವು ಈ ಹುಟ್ಟು, ಸಾವುಗಳ ಸಂಸಾರ ಸಾಗರವನ್ನು ಪಾರು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದ್ದರಿಂದ ಇದು ಒಂದೇ ಆಶ್ರಯ).

ಮಹಾಭಾರತಮ್, ಸಹಸ್ರನಾಮಾಧ್ಯಾಯಮ್ :

ಆರ್ಥಾ ವಿಷಣ್ಣಾಃ ಶಿಥಿಲಾಶ್ಚ ಭೀತಾಃ ಘೋರೇಷು ಚ ವ್ಯಾಧಿಷು ವರ್ತಮಾನಾಃ ।

ಸಂಕೀರ್ತ್ಯ ನಾರಾಯಣ ಶಬ್ದಮಾತ್ರಮ್ ವಿಮುಕ್ತ ದುಃಖಾಃ ಸುಖಿನೋ ಭವಂತಿ ॥

(ಯಾವ ಜನಗಳು ಅವರ ಸಕಲ ಸಂಪತ್ತನ್ನೂ ಕಳೆದುಕೊಂಡು ವ್ಯಥೆಯಲ್ಲಿರುತ್ತಾರೋ, ಯಾರು ಆತ್ಮಬಲವನ್ನು ಕಳೆದುಕೊಂಡು ನಾಶವಾಗುತ್ತಾರೋ, ಯಾರು ಭಗವಂತನನ್ನು ಅನುಭವ ಪಡದೆ ಭಯಗ್ರಸ್ಥಗೊಂಡಿರುತ್ತಾರೋ, ಮತ್ತು ಯಾರು ಅತಿ ಕ್ರೂರ ರೋಗಗಳಿಂದ ನರಳುತ್ತಿರುತ್ತಾರೋ, ಇವರಿಗೆಲ್ಲರಿಗೂ ನಾರಾಯಣ ಮಂತ್ರವನ್ನು ಉಚ್ಛರಿಸುವುದರಿಂದ ಅವರ ಎಲ್ಲಾ ದುಃಖಗಳೂ ದೂರವಾಗಿ ಸಂತೋಷಿಸುತ್ತಾರೆ.)

ವಿಹಾಗೇಶ್ವರ ಸಂಹಿತಾ 24-12, ಗರುಡ ಪುರಾಣಮ್ 220-9 :

ನಾರಾಯಣೇತಿ ಶಬ್ದೋಸ್ತಿ ವಾಗಸ್ತಿ ವಶವರ್ತಿನೀ ।

ತಥಾಪಿ ನರಕೇ ಘೋರೇ ಪತಂತೀತಿ ಕಿಮದ್ ಭೂತಮ್ ॥

(ನಾರಾಯಣ ಎಂಬ ಶಬ್ದವೊಂದಿದೆ. ಉಚ್ಛರಿಸಲು ನಾಲಿಗೆಯೂ ನಿಯಂತ್ರಣದಲ್ಲಿದೆ. ಆದರೂ ಜನಗಳು ಅತಿ ಘೋರವಾದ ನರಕದಲ್ಲಿ ಬೀಳುತ್ತಾರೆ. ಇದೇ ಮಹದಾಶ್ಚರ್ಯ.!)

ನಾರದೀಯಮ್ ಅಷ್ಟಾಕ್ಷರ ಬ್ರಹ್ಮ ವಿದ್ಯಾ 1-40  :

ಕಿಮ್ ತತ್ರ ಬಹುಭಿರ್ಮಂತ್ರೈಃ ಕಿಮ್ ತತ್ರ ಬಹುಭಿರ್ ವ್ರತೈಃ

ನಮೋ ನಾರಾಯಣೇತಿ ಮಂತ್ರಃ ಸರ್ವಾರ್ಥ ಸಾಧಕಃ

(ಎಷ್ಟೊಂದು ಮಂತ್ರಗಳಿದ್ದೇನು ಪ್ರಯೋಜನ? ಎಷ್ಟು ವ್ರತಗಳಿದ್ದೇನು ಪ್ರಯೋಜನ? ನಾರಾಯಣ ಮಂತ್ರವೊಂದೇ ಎಲ್ಲಾ ಇಷ್ಟಗಳನ್ನೂ ಸಿದ್ಧಿಸುತ್ತದೆ.)

ಆದ್ದರಿಂದ ಮಹರ್ಷಿಗಳಾದ ವ್ಯಾಸ ಮುಂತಾದವರು ಈ ಶಬ್ದ ‘ನಾರಾಯಣ’ ಕ್ಕೆ ಅತ್ಯಂತ ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾರೆ. ಅವರು ಅದರ ಶ್ರೇಷ್ಠತೆಯನ್ನು ವೇದಗಳ ಅಂಗಗಳಾದ ಅವರ ಪ್ರಬಂಧಗಳ ಮೂಲಕ ಸ್ಪಷ್ಟ ಪಡಿಸಿದ್ದಾರೆ.

ಆಳ್ವಾರರೂ ಈ ಪದವನ್ನು ಬಹಿರಂಗವಾಗಿ ಅತ್ಯಂತ ಇಷ್ಟ ಪಟ್ಟಿದ್ದಾರೆ.

ನಮ್ಮಾಳ್ವಾರರು ಕರುಣೆಯಿಂದಲಿ ಹೇಳಿದ್ದಾರೆ, “ವಣ್ ಪುಗೞ್ ನಾರಣನ್”, “ಸೆಲ್ವ ನಾರಣನ್” ಮತ್ತು “ವಾೞ್ ಪುಗೞ್ ನಾರಣನ್” ಎಂದು ಆರಂಭದಲ್ಲಿ, ಮಧ್ಯದಲ್ಲಿ ಮತ್ತು ಅಂತ್ಯದಲ್ಲಿ ತಿರುವಾಯ್ಮೊೞಿಯ 1-2-10, 1-10-8 ಮತ್ತು 10-9-1 ಪಾಸುರದಲ್ಲಿ ಅದರ ಅನುಸಾರವಾಗಿ ಹೇಳಿದ್ದಾರೆ.

ಪೆರಿಯಾಳ್ವಾರರು ತಿರುಪ್ಪಲ್ಲಾಣ್ಡು 4ನೆಯ ಪಾಸುರದಲ್ಲಿ “ನಾಡು ನಗರಮುಮ್ ನನ್ಗಱಿಯ ನಮೋ ನಾರಾಯಣಾಯ” ಎಂದೂ ಮತ್ತು ಪೆರಿಯಾೞ್ವಾರ್ ತಿರುಮೊೞಿ 5-1-3 ರ ಅಂತ್ಯದಲ್ಲಿ “ಓವಾದೇ ನಮೋ ನಾರಣಾ ಎನ್ಬಾನ್” ಎಂದು ಹೇಳಿದ್ದಾರೆ.

ಕುಲಶೇಖರ ಪೆರುಮಾಳ್ ಪೆರುಮಾಳ್ ತಿರುಮೊೞಿಯ 2-4 ಪಾಸುರವನ್ನು ಈ ರೀತಿಯಾಗಿ ಪ್ರಾರಂಭಿಸಿದ್ದಾರೆ, “ನಾತ್ ತೞುಂಬೆೞ ನಾರಣಾ” ಮತ್ತು ಪೆರುಮಾಳ್ ತಿರುಮೊೞಿಯ 10-11 ನೆಯ ಪಾಸುರದ ಅಂತ್ಯದಲ್ಲಿ “ನಲಮ್ ತಿಗೞ್ ನಾರಣನ್” ಎಂದು ಉಲ್ಲೇಖಿಸಿದ್ದಾರೆ.

ತಿರುಮೞಿಶೈ ಪ್ಪಿರಾನ್ ನಾನ್ಮುಗನ್ ತಿರುವಂದಾದಿಯ 1 ನೆಯ ಪಾಸುರದಿಂದ ಪ್ರಾರಂಭಿಸುತ್ತಾರೆ “ನಾನ್ ಮುಗನೈ ನಾರಾಯಣನ್ ಪಡೈತ್ತಾನ್” ಮತ್ತು ತಿರುಚ್ಚಂದವೃತ್ತಮ್ ನ 77 ನೆಯ ಪಾಸುರದ ಕೊನೆಯಲ್ಲಿ “ಎಟ್ಟೆೞುತ್ತುಮ್ ಓತ್ತುವಾರ್ಗಳ್ ವಲ್ಲರ್ ವಾನಮಾಳವೇ”.

ತಿರುಮಂಗೈ ಆೞ್ವಾರ್ ಪೆರಿಯ ತಿರುಮೊೞಿ 1-1-1 ರಲ್ಲಿ ಹೀಗೆ ಹೇಳಿದ್ದಾರೆ:

“ನಾನ್ ಕಣ್ಡುಕೊಂಡೇನ್ ನಾರಾಯಣಾ ಎನ್ನುಮ್ ನಾಮಮ್” ಅವರು ಇದನ್ನು ಒಂದು ಸಾರಿ ಪ್ರಾರಂಭದಲ್ಲಿ ಮತ್ತು ಒಂಬತ್ತು ಸಾರಿ ಇದೇ ಪದಿಗೆಯಲ್ಲಿ , ಮತ್ತು ಸಿಱಿಯ ತಿರುಮಡಲ್‍ನಲ್ಲಿ ಹೀಗೆ ಹೇಳಿದ್ದಾರೆ, “ನಾರಾಯಣಾ ಓ! ಮಣಿವಣ್ಣಾ! ನಾಗಣೈಯಾಯ್ ವಾರಾಯ್”.

ಮುದಲ್ ಆೞ್ವಾರ್ ಗಳು (ಮೊದಲ ಮೂರು ಆೞ್ವಾರುಗಳಾದ ಪೊಯ್‍ಗಯ್, ಭೂತಮ್, ಪೇಯ್ ಆೞ್ವಾರುಗಳು) ಕರುಣೆಯಿಂದಲಿ ಹೀಗೆ ಹೇಳಿದ್ದಾರೆ :

“ನನ್ಮಾಲೈ ಕೊಣ್ಡು ನಮೋ ನಾರಣಾ ಎನ್ನುಮ್ ಸೊಲ್ಮಾಲೈ ಕಱ್ಱೇನ್” (ಮುದಲ್ ತಿರುವಂದಾದಿ 57)

“ನಾರಣಾ ಎನ್‍ಱು ಓವಾದು ಉರೈಕ್ಕುಮ್ ಉರೈ ಉಣ್ಡೇ” (ಮುದಲ್ ತಿರುವಂದಾದಿ 95)

“ಜ್ಞಾನ ಚುಡರ್ ವಿಳಕ್ಕೇಱ್ಱಿನೇನ್ ನಾರಣಕ್ಕು” (ಇರಂಡಾಮ್ ತಿರುವಂದಾದಿ 1 )

“ನಾರಣಮ್ ತನ್ ನಾಮಂಗಳ್” (ಇರಂಡಾಮ್ ತಿರುವಂದಾದಿ 2 )

“ಪಗಱ್ ಕಣ್ಡೇನ್ ನಾರಣನೈ ಕಣ್ಡೇನ್” (ಇರಂಡಾಮ್ ತಿರುವಂದಾದಿ 81 )

ನಾಮಮ್ ಪಲ ಸೊಲ್ಲಿ ನಾರಾಯಣಾ “ (ಮೂನ್‍ಱಾಮ್ ತಿರುವಂದಾದಿ 8 )

ನಮ್ಮಾೞ್ವಾರರು ತಿರುವಾಯ್ಮೊೞಿಯ 1-1-1 ನೆಯ ಪಾಸುರದಲ್ಲಿ ಇದನ್ನು ಕಂಡುಕೊಳ್ಳುತ್ತಾರೆ, “ಮಯರ್ವಱ ಮದಿನಲಮ್ ಅರುಳಿನನ್”. ಅವರ ಕಾರಣವಿಲ್ಲದ ದಯೆಯನ್ನು ಮತ್ತು ಕೃಪೆಯನ್ನು. ಎಲ್ಲಾ ಆಳ್ವಾರರು ಸೃಷ್ಟಿಯಲ್ಲಿರುವ ಎಲ್ಲಾ ವಸ್ತುಗಳನ್ನು ಅವುಗಳ ಜೊತೆಗೇ ಇರುವ ಗುಣಗಳನ್ನು ವರ್ಣಿಸಿದ್ದಾರೆ. ಅವರು ಈ ಶಬ್ದವನ್ನು ವರ್ಣಿಸಲು ಬಹಳ ಅನುಕೂಲಕರವೆಂದು, ಆ ಪದದಲ್ಲಿಯೇ ಶರಣಾಗಿ, ಅದನ್ನು ಅವರ ಶಿಷ್ಯರಿಗೂ ಕಲಿಸಿ, ಇದೊಂದೇ ಮುಕ್ತಿಗೆ ಸಾಧಕವಾದದ್ದು ಎಂದು ತಿಳಿಸಿ, ಬೇರೆ ಪದಗಳನ್ನು ನಿರಾಕರಿಸಿದ್ದಾರೆ. ಅಂತಹ ಆೞ್ವಾರರುಗಳನ್ನು ಹಿಂಬಾಲಿಸಿದ ಎಲ್ಲಾ ಆಚಾರ್‍ಯರೂ ಇದನ್ನೇ ಇಷ್ಟಪಟ್ಟಿದ್ದಾರೆ. ಆದ್ದರಿಂದ ಈ ಮಂತ್ರವು ಬೇರೆ ಮಂತ್ರಗಳಿಗಿಂತಲೂ ಶ್ರೇಷ್ಠವಾಗಿದೆ ಎಂದು ನಿರೂಪಿಸಲಾಗಿದೆ.

__________________________________________________________________________________

ಸೂತ್ರಮ್ – 14

ಪರಿಚಯ: ಆಮೇಲೆ ಲೋಕಾಚಾರ್‍ಯರು ಹೇಗೆ ಸ್ವಾಮಿಗಿಂತಲೂ ಅವರ ನಾಮವೇ ಶ್ರೇಷ್ಠವಾದುದೆಂದು 14ನೆಯ ಸೂತ್ರದಲ್ಲಿ ಹೇಳಿದ್ದಾರೆ.

“ವಾಚ್ಯ ಪ್ರಭಾವಮ್ ಪೋಲನ್‍ಱು ವಾಚಕ ಪ್ರಭಾವಮ್”

ಸರಳ ಅರ್ಥ: ಆ ಪದದ ಶ್ರೇಷ್ಠತೆಯು ಆ ಪರಮಾತ್ಮನಿಗಿಂತಲೂ ಹೆಚ್ಚಾದುದು.

ವ್ಯಾಖ್ಯಾನಮ್: ಆ ಪದದ ಶ್ರೇಷ್ಠತೆಯು ಆ ಪರಮಾತ್ಮನಿಗಿಂತಲೂ ಹೆಚ್ಚಾದುದು. (ಆ ಪದದಿಂದ ಸಂಭೋದಿಸಲ್ಪಟ್ಟ).

_____________________________________________________________________________________________

ಸೂತ್ರಮ್ – 15

ಪರಿಚಯ : ಯಾವುದು ಆ ಶ್ರೇಷ್ಠತೆ ಎಂಬ ಪ್ರಶ್ನೆಗೆ ಲೋಕಾಚಾರ್‍ಯರು ಹೇಳುತ್ತಾರೆ, ಅವನು ದೂರದಲ್ಲಿದ್ದರೂ, ಅವನ ನಾಮವು ಹತ್ತಿರದಲ್ಲಿದ್ದು ನಮ್ಮನ್ನು ರಕ್ಷಿಸುತ್ತದೆ.

ಅವನ್ ದೂರಸ್ತನನ್ ಆನಾಲುಮ್ ಇದು ಕಿಟ್ಟಿ ನಿನ್‍ಱು ಉದವುಮ್.

ಸರಳ ಅರ್ಥ: ಅವನು ದೂರದಲ್ಲಿದ್ದರೂ, ಅವನ ನಾಮವು ಹತ್ತಿರದಲ್ಲಿದ್ದು ನಮ್ಮನ್ನು ರಕ್ಷಿಸುತ್ತದೆ ಮತ್ತು ಸಹಕಾರಿಯಾಗುತ್ತದೆ.

ವ್ಯಾಖ್ಯಾನಮ್: ಆ ಶಬ್ದದಿಂದ ಸಂಭೋಧಿಸಲ್ಪಟ್ಟ ಸ್ವಾಮಿಯು ಹತ್ತಿರದಲ್ಲಿರದೇ ದೂರದಲ್ಲಿದ್ದರೆ, ಅವನನ್ನು ಸಂಭೋಧಿಸುವ ಈ ಪದವು, ಆ ಪದವನ್ನು ಉಚ್ಚರಿಸುವವರ ಜೊತೆಗೆ ನಿಂತು ಅವರ ಪ್ರಾರ್ಥನೆಗಳನ್ನು ಈಡೇರಿಸುತ್ತದೆ.

_____________________________________________________________________________________

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.

ಮೂಲ : https://srivaishnavagranthams.wordpress.com/2020/06/10/mumukshuppadi-suthrams-13-15/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org

ಮುಮುಕ್ಷುಪ್ಪಡಿ – ಸೂತ್ರಮ್ 7 – 12

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

ಹಿಂದಿನ ಲೇಖನವನ್ನು

ಸೂತ್ರಮ್ – 7

ಪರಿಚಯ: “ಒಬ್ಬರು ಶಿಷ್ಯನಾಗಿದ್ದುಕೊಂಡು ಈ ಮಂತ್ರವನ್ನು ಕಲಿತು, ಜ್ಞಾನವನ್ನು ಪಡೆಯಬಹುದೇ? ಹಾಗಾದರೆ ಎಲ್ಲಾ ಶಾಸ್ತ್ರಗಳೂ ಜ್ಞಾನದ ಉಪಕರಣಗಳೇ? ಒಬ್ಬರು ಶಾಸ್ತ್ರವನ್ನು ಕಲಿತು ಅದರ ಸಹಾಯದಿಂದ ಜ್ಞಾನವನ್ನು ಪಡೆಯಬಹುದೇ?” ಎಂದು ಕೇಳಿದಾಗ, ಪಿಳ್ಳೈ ಲೋಕಾಚಾರ್‍ಯರು ಶಾಸ್ತ್ರದಿಂದ ಕಲಿತ ಜ್ಞಾನಕ್ಕೂ ಈ ಮಂತ್ರದಿಂದ ಬಂದ ಜ್ಞಾನಕ್ಕೂ ವ್ಯತ್ಯಾಸವನ್ನು ತಿಳಿಸುತ್ತಾರೆ. ಈ ಸೂತ್ರವು “ಸಕಲ ಶಾಸ್ತ್ರಂಗಳಲುಮ್” ಎಂದು ಆರಂಭವಾಗುತ್ತದೆ.

ಸಕಲ ಶಾಸ್ತ್ರಂಗಳಲುಮ್ ಪಿಱಕ್ಕುಮ್ ಜ್ಞಾನಮ್ ಸ್ವಯಮಾರ್ಜಿತಮ್ ಪೋಲೇ, ತಿರುಮಂತ್ರತ್ತಾಲ್ ಪಿಱಕ್ಕುಮ್ ಜ್ಞಾನಮ್ ಪೈತ್ರುಕ ಧನಮ್ ಪೋಲೇ.

ಸರಳ ಅರ್ಥ: ಎಲ್ಲಾ ಶಾಸ್ತ್ರಗಳಿಂದಲೂ ಪಡೆದ ಜ್ಞಾನವು ಸ್ವಯಾರ್ಜಿತ ಸಂಪತ್ತಿನ ಹಾಗೆ, ಆದರೆ ತಿರುಮಂತ್ರದಿಂದ ಹುಟ್ಟಿದ ಜ್ಞಾನವು ಪಿತ್ರಾರ್ಜಿತ ಆಸ್ತಿಯ ಹಾಗೆ.

ವ್ಯಾಖ್ಯಾನಮ್: ಎಲ್ಲಾ ರೀತಿಯ ಶಾಸ್ತ್ರಗಳನ್ನು ಕಲಿತು, ಶೃತಿ ಮತ್ತು ಸ್ಮೃತಿಯಿಂದ ಜ್ಞಾನವನ್ನು ಪಡೆದ ಜ್ಞಾನದ ಆಕಾಂಕ್ಷಿಗಳಿಗೆ ಈ ರೀತಿಯ ವೇದಾಂತದ ಅರಿವು ಬರಲು ತೀವ್ರ ಪ್ರಯತ್ನದ ಅಗತ್ಯವಿದೆ. ಆದರೆ ತಿರುಮಂತ್ರದಿಂದ ಹುಟ್ಟಿದ ಜ್ಞಾನವು, ಆಚಾರ್‍ಯರ ಮೂಲಕ ಕಲಿತಾಗ ಅದು ಪಿತೃಗಳು ಗಳಿಸಿದ ಆಸ್ತಿಯನ್ನು ಸುಲಭವಾಗಿ ಪಡೆದಂತೆ. ಅದಕ್ಕೆ ಅಂತಹ ಪ್ರಯತ್ನದ ಅವಶ್ಯಕತೆಯಿಲ್ಲ.

ಶಾಸ್ತ್ರ ಜ್ಞಾನಮ್ ಬಹುಕ್ಲೇಶಮ್ ಬುದ್ದೇಶ್ ಚಲನ ಕಾರಣಮ್
ಉಪದೇಶತ್ ಹರಿಮ್ ಬುದ್ಧ್ವ ವಿರಮೇತ್ ಸರ್ವ ಕರ್ಮಸು ॥

ಏನೆಂದರೆ, ಶಾಸ್ತ್ರಗಳಿಂದ ಕಲಿತ ಜ್ಞಾನವು ಅನೇಕ ಕಷ್ಟಗಳನ್ನು ಹೊಂದಿರುತ್ತವೆ, ಮತ್ತು ಅವು ಒಬ್ಬರ ಬುದ್ಧಿಯ ಮೇಲೆ ಅನೇಕ ಗೊಂದಲಗಳನ್ನು ಉಂಟುಮಾಡುತ್ತವೆ. ಆದ್ದರಿಂದ ನಮ್ಮ ಕರ್ತವ್ಯವೇನೆಂದರೆ ನಮ್ಮದೇ ಆದ ಶಾಸ್ತ್ರವನ್ನು ಕಲಿಯಲು ಗುರಿಯಾಗಿರುವ ಎಲ್ಲಾ ಚಟುವಟಿಕೆಗಳನ್ನು ಬಿಟ್ಟು, ಆದರೆ ಆಚಾರ್‍ಯರ ಉಪದೇಶದಿಂದ ಎಂಪೆರುಮಾನನ್ನು ಅರಿಯುವುದು.

ಇದರಿಂದ ತಿರುಮಂತ್ರದ ಮಹತ್ವವು ಅರಿವಾಗುತ್ತದೆ. ಅದು ಎಲ್ಲಾ ಶಾಸ್ತ್ರಗಳ ಸಾರಾಂಶವೂ ಮತ್ತು ಅದಕ್ಕೂ ಮೀರಿದ ಅರ್ಥವನ್ನು ಹೊಂದಿರುವುದು.

ಸೂತ್ರಮ್ – 8

ಪರಿಚಯ: ಅನುಮಾನವನ್ನು ಪರಿಹರಿಸಿಕೊಳ್ಳಲು, ಶಾಸ್ತ್ರದಲ್ಲಿಯೇ ಅನೇಕ ಮಂತ್ರಗಳಿವೆ. ತಿರುಮಂತ್ರವನ್ನು ಬಿಟ್ಟು. ಈ ತಿರುಮಂತ್ರದ ಶ್ರೇಷ್ಠತೆ ಏನು? ಲೋಕಾಚಾರ್‍ಯರು ಮುಂದಿನ 8ನೇ ಸೂತ್ರದಲ್ಲಿ ಇದನ್ನು ಹೇಳುತ್ತಾರೆ.

ಭಗವನ್ ಮಂತ್ರಗಳ್ ತಾನ್ ಅನೇಕಂಗಳ್.

ಸರಳ ಅರ್ಥ: ಭಗವಂತನ ಮಂತ್ರಗಳು ಅನೇಕವಾಗಿ ಇವೆ.

ವ್ಯಾಖ್ಯಾನಮ್: ಶ್ರೀ ರಂಗರಾಜ ಉತ್ತರ ಶತಕಮ್ – 74 ರಲ್ಲಿ ಹೇಳಿರುವ ಹಾಗೆ:

ಆಸ್ತಮ್ ತೇ ಗುಣ ರಾಶಿವದ್ ಗುಣಾ ಪರೀವಾಹಾತ್ಮನಮ್ ಜನ್ಮನಾಮ್
ಸಂಖ್ಯಾ ಭೌಮ ನಿಕೇತನೇಸ್ವಪಿ ಕುಟೀಕುಂಜೇಶು ರಂಗೇಶ್ವರ!
ಅರ್ಚ್ಯಃ ಸರ್ವ ಸಹಿಷ್ಣುರರ್ಚಕ ಪರಾಧೀನಾಖಿಲಾತ್ಮಸ್ಥಿತಿಃ
ಪ್ರೀಣೀಶೇ ಹೃದಯಾಲುಬಿಸ್ ತವ ತಥಃ ಶೀಲಾತ್ ಜಡೀಭೂಯತೇ ॥

“ಆಸ್ಥಾಮ್ ತೇ ಗುಣ ರಾಶಿವದ್ ಗುಣ ಪರೀವಾಹಾತ್ಮನಾಮ್ ಜನ್ಮನಾಮ್ ಸಂಖ್ಯಾ” (ಓಹ್! ರಂಗೇಶ್ವರ! ನಿನ್ನ ಅಸಂಖ್ಯೇಯ ಅವತಾರಗಳು ನಿನ್ನ ರಾಶಿ ರಾಶಿಯಾದ ಶುಭ ಗುಣಗಳನ್ನು ಪ್ರತೀಕಿಸುತ್ತವೆ. ನೀನು ಗುಡಿಗಳಲ್ಲಿಯೂ, ಮನೆಗಳಲ್ಲಿಯೂ ಮತ್ತು ಗುಡಿಸಲಿನಲ್ಲಿಯೂ ನೀನು ಆರಾಧಿಸುವವರ ಅಚಾತುರ್ಯಗಳನ್ನು ತಡೆದುಕೊಂಡಿರುವೆ. ಪೂಜಾರಿಯನ್ನೇ ಸಂಪೂರ್ಣವಾಗಿ ಅವಲಂಬಿಸಿರುವೆ. ಪ್ರತಿಯೊಂದು ಹಂತದಲ್ಲಿಯೂ ಅತ್ಯಂತ ಸರಳತೆಯನ್ನು ಮೆರೆದಿರುವೆ ಸಜ್ಜನರಿಗೆ ಇದು ಅತೀವ ಆಶ್ಚರ್‍ಯವನ್ನು ತಂದಿದೆ.);

ಶ್ರೀಮದ್ ವಾಲ್ಮೀಕಿ ರಾಮಾಯಣದಲ್ಲಿ ಹೇಳಿರುವ ಹಾಗೆ (ಅಯೋಧ್ಯಾ ಕಾಂಡ 2-26) :

ಬಹವೋ ನೃಪ ಕಲ್ಯಾಣ ಗುಣಾಃ ಪುತ್ರಸ್ಯ ಸಂತಿ ತೇ

(ಓಹ್! ರಾಜನೇ! ನಿನ್ನ ಮಗನಿಗೆ ಎಷ್ಟೊಂದು ಒಳ್ಳೆಯ ಗುಣಗಳಿವೆ) :

ಶ್ರೀ ವಿಷ್ಣು ಧರ್ಮಮ್ ನಲ್ಲಿ ಹೇಳಿರುವ ಹಾಗೆ:

ತವಾನಂತ ಗುಣಸ್ಯಾಪಿ ಷಡೇವ ಪ್ರಥಮೇ ಗುಣಾಃ

(ನೀನು ಅಸಂಖ್ಯಾತ ಶುಭಗುಣಗಳನ್ನು ಹೊಂದಿದ್ದರೂ, ಅವುಗಳಲ್ಲಿ ಪ್ರಮುಖವಾದದ್ದು ಆರು ಗುಣಗಳು);

ಶ್ರೀ ಭಗವದ್ ಗೀತಾನಲ್ಲಿ ಹೇಳಿರುವಂತೆ 4-5 :

ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ
ತಾನ್ಯಹಮ್ ವೇದ ಸರ್ವಾಣಿ ನತ್ವಮ್ ವೇತ್ತ ಪರಂತಪ ॥

“ ಅರ್ಜುನ! ನಾನು ಅನೇಕ ಅಸಂಖ್ಯಾತ ಜನ್ಮಗಳನ್ನು ಹೊಂದಿರುವೆ. ನಿನಗೂ ಇದು ನಿಜವಾಗಿದೆ. ನನಗೆ ನನ್ನದು ಎಲ್ಲಾ ತಿಳಿದಿದೆ. ಆದರೆ ನಿನಗೆ ನಿನ್ನದು ತಿಳಿದಿಲ್ಲ.”

“ಎಣ್ಣಿಲ್ ತೊಲ್ ಪುಗೞ್” (ತಿರುವಾಯ್ಮೊೞಿ 3-3-3) “ಅಸಂಖ್ಯೇಯ ಕಲ್ಯಾಣ ಗುಣಗಳು”

“ಎನ್ನಿನ್‍ಱ ಯೋನಿಯುಮಾಯ್ ಪಿಱಂದಾಯ್” –(ತಿರುವೃತ್ತಮ್ 1) “ನಿನ್ನ ಇಚ್ಛೆಗೆ ಅನುಗುಣವಾಗಿ ಅನೇಕ ಅವತಾರಗಳನ್ನು ರೂಪಗಳನ್ನು ಪಡೆದೆ”

…………ಈ ಎಲ್ಲಾ ಶಾಸ್ತ್ರ ವಾಕ್ಯಗಳನ್ನು ಗಮನಿಸಿದಾಗ, ಭಗವಂತನ ದಿವ್ಯ ಗುಣಗಳು, ಈ ಗುಣಗಳನ್ನು ಹೊರಪಡಿಸುವಂತಹ ದಿವ್ಯ ಅವತಾರಗಳು ಅನೇಕವಾಗಿವೆ, ಅಸಂಖ್ಯೇಯವಾಗಿವೆ . ಮತ್ತು ಅವುಗಳನ್ನು ವಿವರಿಸುವ ಮಂತ್ರಗಳೂ ಅನೇಕವಾಗಿವೆ. ಅನಂತಾವೈ ಭಗವನ್ ಮಂತ್ರಾಃ.

ಸೂತ್ರಮ್ – 9

ಪರಿಚಯ: ಈ ಎಲ್ಲಾ ಮಂತ್ರವೂ ಒಂದೇ ತರನಾದುವೇ? ಈ ಪ್ರಶ್ನೆಗೆ ಪಿಳ್ಳೈ ಲೋಕಾಚಾರ್‍ಯರು ಹೇಳುತ್ತಾರೆ, ಅವುಗಳು ಎರಡು ವಿಧವಾದವು , ವ್ಯಾಪಕ ಮತ್ತು ಅವ್ಯಾಪಕ ಮಂತ್ರಗಳು ಎಂದು ಸೂತ್ರಮ್ 9 ರಲ್ಲಿ ಹೇಳುತ್ತಾರೆ.

ಅವೈದಾನ್ ವ್ಯಾಪಕಂಗಳ್ ಎನ್‍ಱುಮ್ ಅವ್ಯಾಪಕಂಗಳ್ ಎನ್‍ಱುಮ್ ಇರಂಡು ವರ್ಗಮ್.

ಸರಳ ಅರ್ಥ: ಈ ಮಂತ್ರಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು, ವ್ಯಾಪಕ ಮಂತ್ರಗಳು ಮತ್ತು ಅವ್ಯಾಪಕ ಮಂತ್ರಗಳು.

ವ್ಯಾಖ್ಯಾನಮ್ : ಮಂತ್ರಗಳಲ್ಲಿ ಎರಡು ವಿಧಗಳಿವೆ, ಸ್ವಾಮಿಯ ಸರ್ವವ್ಯಾಪಕತ್ವದ ಗುಣವನ್ನು ಪ್ರಕಟಿಸುವ ಮಂತ್ರಗಳನ್ನು ವ್ಯಾಪಕ ಮಂತ್ರಗಳೆಂದು, ಯಾವ ಮಂತ್ರಗಳು ಸ್ವಾಮಿಯ ನಿರ್ದಿಷ್ಟ ಗುಣವನ್ನು ಗುರುತಿಸುತ್ತದೆಯೋ ಅವನ ಅವತಾರದಲ್ಲಿ ಮತ್ತು ಅದರೊಂದಿಗೆ ಇರುವ ಅವನ ದಿವ್ಯ ಚಟುವಟಿಕೆಗಳಲ್ಲಿ ಅವುಗಳನ್ನು ಅವ್ಯಾಪಕ ಮಂತ್ರಗಳೆಂದು ಹೆಸರಿಸುತ್ತಾರೆ.

ಸೂತ್ರಮ್ – 10

ಈ ಎರಡೂ ಮಂತ್ರಗಳು ಒಂದಕ್ಕೊಂದು ಸಮವಾಗಿದೆಯೇ ಎಂಬ ಪ್ರಶ್ನೆಗೆ , ಪಿಳ್ಳೈ ಲೋಕಾಚಾರ್‍ಯರು ಉತ್ತರಿಸುತ್ತಾರೆ, ಮೂರು ವ್ಯಾಪಕ ಮಂತ್ರಗಳು ಉಳಿದ ಎಲ್ಲಾ ಅವ್ಯಾಪಕ ಮಂತ್ರಗಳಿಗಿಂತಲೂ ಶ್ರೇಷ್ಠವಾದುದು ಎಂದು 10ನೆಯ ಸೂತ್ರದಲ್ಲಿ ಹೇಳಿದ್ದಾರೆ.

ಅವ್ಯಾಪಕಂಗಳಿಲ್ ವ್ಯಾಪಕಂಗಳ್ ಮೂನ್ಱುಮ್ ಶ್ರೇಷ್ಟಂಗಳ್.

ಸರಳ ಅರ್ಥ:  ಅವ್ಯಾಪಕ ಮಂತ್ರಗಳಿಗೆ ಹೋಲಿಸಿದಾಗ, ಮೂರು ವ್ಯಾಪಕ ಮಂತ್ರಗಳು ಶ್ರೇಷ್ಠವಾದುದು.

ವ್ಯಾಖ್ಯಾನಮ್: ಅವ್ಯಾಪಕ ಮಂತ್ರಗಳಿಗೆ ಹೋಲಿಸಿದಾಗ, ವಿಷ್ಣು ಗಾಯತ್ರಿಯಲ್ಲಿ ಪಠಿಸುವ ಮೂರು ವ್ಯಾಪಕ ಮಂತ್ರಗಳು (ತೈತ್ತಿರೀಯ ಉಪನಿಶತ್, ನಾರಾಯಣವಲ್ಲಿ), ಅವುಗಳೆಂದರೆ:

ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣುಃ ಪ್ರಚೋದಯಾತ್॥

ಇವುಗಳು ಶ್ರೇಷ್ಥವಾದುದು. ಈ ವಿಷ್ಣು ಗಾಯತ್ರಿಯಲ್ಲಿರುವಂತೆ , ನಾರಾಯಣ, ವಾಸುದೇವ, ವಿಷ್ಣು – ಇವುಗಳು ಮೂರು ದಿವ್ಯ ನಾಮಗಳು , ಇವುಗಳು ಅತ್ಯಂತವಾಗಿ ಪ್ರಣವ ಮತ್ತು ನಮಃ ಇರುವ ಮಂತ್ರಗಳಿಗೆ ಅತ್ಯಂತ ಮುಖ್ಯವಾದುದು. ಅವು ಈ ಎಲ್ಲಾ ಮೂರೂ ಮಂತ್ರಗಳಿಗೆ ಉದಾಹರಣೆಯಾದುದು.

ಸೂತ್ರಮ್ – 11

ಪರಿಚಯ: ಈ ಮೂರೂ ವ್ಯಾಪಕ ಮಂತ್ರಗಳು ಒಂದಕ್ಕೊಂದು ಸಮನಾದುವುಗಳೇ? ಎಂಬ ಈ ಪ್ರಶ್ನೆಗೆ ಪಿಳ್ಳೈ ಲೋಕಾಚಾರ್‍ಯರು ಹೇಳುತ್ತಾರೆ, ಈ ಮೂರು ಮಂತ್ರಗಳಲ್ಲಿ ಪೆರಿಯ ತಿರುಮಂತ್ರಮ್ ಮುಖ್ಯವಾದುದು. ಎಂದು ಮುಂದಿನ 11 ನೆಯ ಸೂತ್ರದಲ್ಲಿ.

ಇವೈ ಮೂನ್ಱಿಲುಮ್ ವೈತ್ತು ಕೊಣ್ಡು ಪೆರಿಯ ತಿರುಮಂತ್ರಮ್ ಪ್ರಧಾನಮ್.

ಸರಳ ಅರ್ಥ: ಈ ಮೂರು ಮಂತ್ರಗಳಲ್ಲಿಯೂ, ಪೆರಿಯ ತಿರುಮಂತ್ರಮ್ (ಶ್ರೇಷ್ಠವಾದ ತಿರುಮಂತ್ರಮ್) ಮುಖ್ಯವಾದದ್ದು.

ವ್ಯಾಖ್ಯಾನಮ್: ಅವ್ಯಾಪಕ ಮಂತ್ರಗಳಿಗಿಂತಲೂ ಶ್ರೇಷ್ಠವಾಗಿರುವ ಈ ಮೂರು ವ್ಯಾಪಕ ಮಂತ್ರಗಳಲ್ಲಿ, ತಿರುಮಂತ್ರ (ನಾರಾಯಣ) ಎಂಬುದು ಅತ್ಯಂತ ಶ್ರೇಷ್ಠವಾದುದು ಮತ್ತು ಇದನ್ನು ಶೃತಿಯ ಮೊದಲ ಭಾಗವಾಗಿ ಪಠಿಸಬೇಕು.

ನಾರಾಯಣಾಯ ವಿಧ್ಮಹೇ

ಇದು ಉನ್ನತವಾದ ಅರ್ಥಗಳಿಂದ ಕೂಡಿದೆ. ಮತ್ತು ನಾರಧೀಯಮ್ ಎಂದು ಘೋಷಿಸಲ್ಪಟ್ಟಿದೆ. – ಅಷ್ಟಾಕ್ಷರ ಬ್ರಹ್ಮವಿದ್ಯೈ – 1-41

ನಾಸ್ತಿ ಚ ಅಷ್ಟಾಕ್ಷರಾತ್ ಪರಃ

ಅಂದರೆ, ಅಷ್ಟಾಕ್ಷರಕ್ಕಿಂತಲೂ ಹೆಚ್ಚಾದುದು ಯಾವುದೂ ಇಲ್ಲ.

ಮತ್ತೂ, ನಾರಸಿಂಹ ಪುರಾಣಮ್ 18-32 ರಲ್ಲಿ ಹೇಳಿರುವಂತೆ,

ನ ಮಂತ್ರೋ ಅಷ್ಟಾಕ್ಷರಾತ್ ಪರಃ

ಅಷ್ಟಾಕ್ಷರಕ್ಕಿಂತಲೂ ಶ್ರೇಷ್ಠವಾದ ಮಂತ್ರ ಬೇರೊಂದಿಲ್ಲ.

ಸೂತ್ರಮ್ – 12

ಪರಿಚಯ: ಇನ್ನೆರಡು ವ್ಯಾಪಕ ಮಂತ್ರಗಳಲ್ಲಿ ಏನು ಕೊರತೆಯಿದೆ? ಈ ಪ್ರಶ್ನೆಗೆ ಪಿಳ್ಳೈ ಲೋಕಾಚಾರ್‍ಯರು ಹೇಳುತ್ತಾರೆ, ಆ ಎರಡು ಮಂತ್ರಗಳು ಬುದ್ಧಿವಂತರಲ್ಲದ ಅಧಿಕಾರಿಗಳಿಂದ ಅಳವಡಿಸಿಕೊಳ್ಳಲ್ಪಟ್ಟಿದೆ ಮತ್ತು ಅವು ಪರಿಪೂರ್ಣತೆಯಿಂದ ದೂರವಿದೆ ಎಂದು ಸೂತ್ರ 12 ರಲ್ಲಿ ಹೇಳಿದ್ದಾರೆ.

ಮಱ್ಱೈಯವೈ ಇರಣ್ಡುಕ್ಕುಮ್ ಅಶಿಷ್ಟಪರಿಗ್ರಹಮುಮ್ ಅಪೂರ್ತಿಯುಮ್ ಉಣ್ಡು.

ಸರಳ ಅರ್ಥ: ಇನ್ನೆರಡು ಮಂತ್ರಗಳು ಬುದ್ಧಿವಂತರಲ್ಲದ ಅಧಿಕಾರಿಗಳಿಂದ ಒಪ್ಪಿಗೆ ಪಡೆದಿದೆ ಮತ್ತು ಪರಿಪೂರ್ಣತೆಯಿಲ್ಲದೆ ನರಳಿದೆ.

ವ್ಯಾಖ್ಯಾನಮ್: ಇನ್ನೆರಡು ನಾಮಗಳು ಅವು ವಾಸುದೇವ ಮತ್ತು ವಿಷ್ಣು ಎಂಬುದು ನಾರಾಯಣ ಎಂಬ ನಾಮದಂತೆ ಇಲ್ಲದೇ, ಅವು ಸುಷುಪ್ತ ಗುಣವಾದ (ಸ್ವರೂಪ), ರೂಪ, ಕಲ್ಯಾಣ ಶುಭ ಗುಣಗಳು ಮುಂತಾದುವುಗಳನ್ನು ತೋರಿಸುವುದಿಲ್ಲ. ಆದರೆ ಸ್ವರೂಪವನ್ನು ಮಾತ್ರ ಪರಿಗಣಿಸುತ್ತದೆ. ಆದ್ದರಿಂದ ಅವುಗಳು ನಿರ್ವಿಶೇಷ ಚಿನ್ಮಾತ್ರ ವಸ್ತುವಾದಿಗಳಿಂದ (ವೇದಗಳನ್ನು ಅನರ್ಥೈಸಿಕೊಂಡವರು) ಪ್ರತಿಪಾದಿಸಲ್ಪಟ್ಟಿರುತ್ತದೆ. ಎರಡನೆಯದಾಗಿ, ಈ ನಾಮಗಳು ವ್ಯಾಪ್ಯ ಅತ್ಯಾಹಾರಾದಿ ಸಾಪೇಕ್ಷತಾ ಎಂಬ ಅಪರಿಪೂರ್ಣತೆಯಿಂದ ನರಳುತ್ತಿವೆ. (ವ್ಯಾಪಕತನವನ್ನು ಇನ್ನೂ ವಿಸ್ತಾರವಾಗಿ ನಿರೀಕ್ಷಿಸುವುದು).

ಷಡಕ್ಷರಿ (ವಿಷ್ಣು) ತಾನು ವ್ಯಾಪಿಸಿರುವ ಪದಾರ್ಥಗಳನ್ನು ಹೇಳುವುದಿಲ್ಲ. ಯಾವ ರೂಪದಿಂದ ವ್ಯಾಪಿಸಿರುವೆ ಎಂದೂ ಹೇಳುವುದಿಲ್ಲ. ಅವುಗಳಿಂದ ಏನು ಫಲವಿದೆಯೆಂದೂ ಹೇಳುವುದಿಲ್ಲ. ಅಂತಹ ಸ್ವಾಮಿಯ ಗುಣಗಳ ಬಗ್ಗೆಯೂ ಹೇಳುವುದಿಲ್ಲ. ಆದರೆ ಆ ನಾಮವು ಎಲ್ಲಾ ವಸ್ತುಗಳನ್ನೂ ವ್ಯಾಪಿಸಿರುವ ಬಗ್ಗೆ ಮಾತ್ರ ಹೇಳುತ್ತದೆ ಆದ್ದರಿಂದ ಅದು ಅಪರಿಪೂರ್ಣವಾಗಿದೆ.

ಆದರೆ ವಾಸುದೇವ ಎಂಬ ನಾಮವು ಯಾವ ರೀತಿಯ ವ್ಯಾಪಕತೆ ಎಂದು ಹೇಳಿದರೂ, ಅದು ಯಾವ ರೀತಿಯ ಪದಾರ್ಥಗಳನ್ನು ವ್ಯಾಪಿಸಿರುತ್ತದೆ ಎಂದು ಪರೋಕ್ಷವಾಗಿಯೂ ಗುರುತಿಸುವುದಿಲ್ಲ. ‘ಸರ್ವಮ್ ವಸತಿ’ ಎಂಬ ಶಬ್ದಗಳಲ್ಲಿ ‘ಸರ್ವಮ್’ ಇರುವುದರಿಂದ ಎಲ್ಲಾ ಕಡೆಯೂ ಇರುವಿಕೆಯನ್ನು ತೋರಿಸುತ್ತದೆಯಾದರೂ, ಎಲ್ಲಾ ಕಡೆಯೂ ಉಪಸ್ಥಿತಿಯಲ್ಲಿರುವುದರಿಂದ ಅದರ ಗುಣವನ್ನು ಸೂಚಿಸುವುದಿಲ್ಲ. ಆ ಗುಣವನ್ನು ಸೂಚಿಸಲು ನಾವು ‘ಭಗವತೇ’ (ಭಗವಾನ್ ಎಂಬುದು ಆರು ಪ್ರಾಮುಖ್ಯ ಗುಣಗಳನ್ನು ಸೂಚಿಸುತ್ತದೆ) ಎಂಬ ಶಬ್ದವನ್ನು ಸೇರಿಸಬೇಕು. ಆದರೆ ಅದು ಇನ್ನೂ ವ್ಯಾಪ್ತಿಫಲಮ್ (ವ್ಯಾಪಕತನದ ಫಲವನ್ನು) ಹೇಳದಿರುವುದರಿಂದ , ದ್ವಾದಶಾಕ್ಷರಿ ಕೂಡಾ ಅಪರಿಪೂರ್ಣವಾಗಿದೆ.

ನಾರಾಯಣ ಮಂತ್ರವು , ಈ ಎರಡೂ ಮಂತ್ರಗಳ ಹಾಗೆ ಇಲ್ಲದೇ, ಅದು ಎಲ್ಲಾ ಕಡೆಯೂ ಇರುವ ಅಸ್ತಿತ್ವವನ್ನು ಪ್ರತಿಪಾದಿಸುತ್ತದೆ. ಇದರ ಅರ್ಥ ತಾನು ವ್ಯಾಪಿಸಿಕೊಂಡಿರುವ ಪದಾರ್ಥಗಳ ಬಗ್ಗೆ, ವ್ಯಾಪಕದ ರೀತಿಯ ಬಗ್ಗೆ, ಅಂತಹ ವ್ಯಾಪಕತನದಿಂದ ಆಗುವ ಫಲದ ಬಗ್ಗೆ, ಮತ್ತು ಅಂತಹ ವ್ಯಾಪಿಸಿಕೊಂಡಿರುವ ಸ್ವಾಮಿಯ ಗುಣಗಳ ಬಗ್ಗೆ ಸೂಚಿಸುತ್ತದೆ. ಆದ್ದರಿಂದ ಈ ನಾಮವು ಇನ್ನೆರಡು ನಾಮಗಳಿಗಿಂತಲೂ ಶ್ರೇಷ್ಠವಾಗಿದೆ ಅದರ ಅರ್ಥದ ವಿಸ್ತಾರದಿಂದ. ಪೆರಿಯ ವಾಚ್ಚಾನ್ ಪಿಳ್ಳೈರವರು ತಮ್ಮ ಪರಂಧ ರಹಸ್ಯಮ್‍ನಲ್ಲಿ ಎರಡು ವ್ಯಾಪಕ ಮಂತ್ರಗಳಲ್ಲಿರುವ ಶಿಥಿಲತೆಯನ್ನು ಗುರುತಿಸಿದ್ದಾರೆ. ಮತ್ತು ತಿರುಮಂತ್ರದ ಶಬ್ದದಲ್ಲಿರುವ ಪರಿಪೂರ್ಣತೆಯನ್ನು ಮತ್ತು ಅರ್ಥವನ್ನು ಗುರುತಿಸಿದ್ದಾರೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.

ಮೂಲ : https://srivaishnavagranthams.wordpress.com/2020/06/08/mumukshuppadi-suthrams-7-12/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org