Author Archives: srinivasarajan

About srinivasarajan

दासोऽहं यतिराजस्य विष्णुचित्तार्यपुत्रकः। तदायत्तस्वरूपश्च तदाराधनतत्परः॥

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಅರ್ಥಪಂಚಕಮ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

<< ತತ್ತ್ವ ತ್ರಯಮ್

 

ಪರಮ ಪ್ರಾಪ್ಯನಾದ ಭಗವಂತನು ಆರು ರೂಪಗಳನ್ನು ತಾಳುತ್ತಾನೆ. ಅವೇ ಪರತ್ತ್ವ (ಪರಮಪದದಲ್ಲಿ), ವ್ಯೂಹ (ಕ್ಷೀರಾಬ್ಧಿಯಲ್ಲಿ), ವಿಭವ (ಅವತಾರಗಳು), ಅಂತರ್ಯಾಮಿ (ಎಲ್ಲರಲ್ಲಿಯೂ ಇರುವವನು), ಅರ್ಚಾವತಾರ (ದೇವಸ್ಥಾನಗಳಲ್ಲಿ, ಮಠಗಳಲ್ಲಿ ಮತ್ತು ಮನೆಗಳಲ್ಲಿರುವ ರೂಪಗಳು), ಮತ್ತು ಆಚಾರ್ಯನೆಂಬ ಈ ಆರು ರೂಪಗಳು.

ಮಿಕ್ಕವಿರೈನಿಲೈಯುಂ ಮೆಯ್ಯಾಮ್ ಉಯಿರ್ ನಿಲೈಯುಂ

ತಕ್ಕ ನೆರಿಯುಂ ತಡೈಯಾಗಿತ್ತೊಕ್ಕಿಯಲುಂ ಊೞ್ವಿನೈಯುಂ

ವಾೞ್ವಿನೈಯುಮ್ ಓದುಮ್

ಕುರುಕೈಯರ್ಕೋನ್ ಯಾೞಿನ್ ಇಶೈ ವೇದತ್ತಿಯಲ್

 • ತಿರುವಾಯ್ಮೊೞಿಗೆ ಶ್ರೀ ಪರಾಶರಭಟ್ಟರು ಅನುಗ್ರಹಿಸಿರುವ ತನಿಯನ್

ಅರ್ಥ ತಾತ್ಪರ್ಯ: ಆಳ್ವಾರ್  ತಿರುನಗರಿ-ವಾಸಿಗಳ ದೊರೆಯಾದ ನಮ್ಆಳ್ವಾರ್ ಅನುಗ್ರಹಿಸಿರುವ ವೀಣಾನಾದದಂತೆ ಸುಮಧುರವಾಗಿರುವ ತಿರುವಾಯ್ಮೊೞಿಯು ಐದು ವಿಷಯಗಳ ಬಗೆಗೆ ವಿವರ ನೀಡುತ್ತದೆ. ಅವೇ – ಪರಮಾತ್ಮ ಸ್ವರೂಪ, ಜೀವಾತ್ಮ ಸ್ವರೂಪ, ಉಪಾಯ ಸ್ವರೂಪ, ವಿರೋಧಿ ಸ್ವರೂಪ ಮತ್ತು ಫಲ ಸ್ವರೂಪ.

ಅರ್ಥಪಂಚಕವೆಂದರೆ ಅವಶ್ಯಕವಾಗಿ ನಾವು ತಿಳಿಯಲೇಬೇಕಾದ ಐದು ವಿಷಯಗಳು. ಪಿಳ್ಳೈಲೋಕಾಚಾರ್ಯರು ಈ ಐದು ವಿಷಯಗಳ ಬಗೆಗಿನ ವಿವರಗಳನ್ನು ನಮಗೆ ’ಅರ್ಥಪಂಚಕ’ವೆಂಬ ರಹಸ್ಯಗ್ರಂಥದ ಮೂಲಕ ಅನುಗ್ರಹಿಸಿದ್ದಾರೆ. ಈ ಅಂಕಣವು ಆ ದಿವ್ಯಗ್ರಂಥದ ಆಧಾರದಲ್ಲಿ ಬರೆಯಲ್ಪಟ್ಟಿದೆ.

ಈ ಗ್ರಂಥದ ಕೆಲವು ಮುಖ್ಯಾಂಶಗಳನ್ನೀಗ ನೋಡೋಣ:

 • ಜೀವಾತ್ಮಾ – ಇದನ್ನೂ ಐದು ವಿಧಗಳಾಗಿ ವಿಂಗಡಿಸಬಹುದಾಗಿದೆ:
  • ನಿತ್ಯಸೂರಿಗಳು – ಸಂಸಾರ ಸಂಬಂಧಲೇಶವೂ ಇಲ್ಲದೆ ನಿತ್ಯವೂ ಶ್ರೀವೈಕುಂಠವಾದ ಪರಮಪದದಲ್ಲಿ ವಾಸಿಸುವವರು
  • ಮುಕ್ತಾತ್ಮಾಗಳು – ಹಿಂದೊಮ್ಮೆ ಈ ಸಂಸಾರದಲ್ಲಿದ್ದುಕೊಂಡು ಈಗ ಪರಮಪದವನ್ನು ಹೊಂದಿರುವವರು
  • ಬದ್ಧಾತ್ಮಾಗಳು – ಇನ್ನೂ ಈ ಸಂಸಾರ ಮಂಡಲದಲ್ಲೇ ಬಂಧಿಸಲ್ಪಟ್ಟವರು
  • ಕೇವಲರು – ಕೈವಲ್ಯವೆಂಬ ಮೋಕ್ಷವನ್ನು ಹೊಂದಿದವರು; ಸಂಸಾರವನ್ನು ಸಂಪೂರ್ಣವಾಗಿ ಬಿಸುಟು, ಅನಂತಕಾಲದವರೆಗೂ ತನ್ನನ್ನು ತಾನೇ ಅನುಭವಿಸುತ್ತ, ಭಗವಂತನ ಸೇವೆಗೆ ಆಸ್ಪದವೇ ಇಲ್ಲದಂತಿರುವವರು. ಈ ಸ್ಥಿತಿಯನ್ನು ಭಗವತ್ಕೈಂಕರ್ಯಕ್ಕಿಂತ ಕೆಳಮಟ್ಟದ್ದೆಂದು ಗುರುತಿಸಲಾಗಿದೆ.
  • ಮುಮುಕ್ಷುಗಳು – ಇನ್ನೂ ಸಂಸಾರಮಂಡಲದಲ್ಲೇ ಇದ್ದು, ಭಗವಂತನ ನಿತ್ಯಕೈಂಕರ್ಯಕ್ಕೆ (ಪರಮಪದದಲ್ಲಿ) ಹಂಬಲಿಸುತ್ತಿರುವವರು.
 • ಪರಬ್ರಹ್ಮ (ಪರಮಾತ್ಮಾ) – ಭಗವಂತನ ಐದು ನೆಲೆಗಳನ್ನು ಇಲ್ಲಿ ವಿವರಿಸಲಾಗಿದೆ:
  • ಪರತ್ವ – ಪರಮಪದದಲ್ಲಿರುವ ಭಗವಂತನ ಅತ್ಯಂತ ದೊಡ್ಡ ರೂಪ/ ಸರ್ವೋಚ್ಚ ನೆಲೆ.
  • ವ್ಯೂಹ – ಕ್ಷೀರಾಬ್ಧಿಯಲ್ಲಿರುವ ಭಗವಂತನ ನೆಲೆ; ಪ್ರದ್ಯುಮ್ನ, ಅನಿರುದ್ಧ, ಸಂಕರ್ಷಣರೆಂಬ ರೂಪದಲ್ಲಿ ಕ್ರಮಶಃ ಸೃಷ್ಟಿ, ಸ್ಥಿತಿ ಮತ್ತು ಸಂಹಾರಗಳಿಗೆ ಕಾರಣವಾಗಿರುವವನು.
  • ವಿಭವ – ಶ್ರೀ ರಾಮ, ಕೃಷ್ಣಾದ್ಯವತಾರವಿಶೇಷಗಳು
  • ಅಂತರ್ಯಾಮಿತ್ವ – ಎಲ್ಲರಲ್ಲೂ/ಎಲ್ಲಾದರಲ್ಲೂ ಒಳಹೊಕ್ಕ ವ್ಯಾಪಕಸ್ಥಿತಿ; ಇದರಲ್ಲಿ ಎರಡು ವಿಧ: ಪ್ರತಿಯೊಂದು ಜೀವಾತ್ಮಾಗಳಲ್ಲಿಯೂ ಅಂತರ್ಭೂತನಾದ ನೆಲೆ, ಮತ್ತು ಹೃದಯಪುಂಡರೀಕದಲ್ಲಿ ಶ್ರೀ ಮಹಾಲಕ್ಷಿಯೊಂದಿಗೆ ವಿಭ್ರಾಜಮಾನನಾಗಿರುವ ನೆಲೆ.
  • ಅರ್ಚಾವತಾರ – ದೇವಾಲಯ, ಮಠ ಮತ್ತು ಮನೆಗಳಲ್ಲಿ ವಿರಾಜಮಾನನಾಗಿರುವ ಭಗವಂತನ ದಿವ್ಯಮಂಗಳ ವಿಗ್ರಹಗಳು.
 • ಪುರಷಾರ್ಥ (ಧ್ಯೇಯ) – ಪುರುಷನೆಂದು ಕರೆಯಲ್ಪಡುವ ಆತ್ಮಾ ತಾನಿಚ್ಛಿಸುವ ಫಲ. ಇದರಲ್ಲಿಯೂ ಐದು ಭೇದಗಳಿವೆ:
  • ಧರ್ಮ – ಎಲ್ಲಾ  ಜೀವಿಗಳ ಕ್ಷೇಮಕ್ಕಾಗಿ/ರಕ್ಷಣೆಗಾಗಿ ಪಾಲಿಸಲ್ಪಡುವ ಆಚಾರಗಳು.
  • ಅರ್ಥ – ಹಣಸಂಪಾದನೆ ಮತ್ತು ಶಾಸ್ತ್ರೀಯವಾದ ಮಾರ್ಗಗಳಲ್ಲಿ ಅದರ ಸದ್ವಿನಿಯೋಗ.
  • ಕಾಮ – ಭೂಮಿಯಲ್ಲೂ ಸ್ವರ್ಗಾದಿ ಲೋಕಗಳಲ್ಲಿಯೂ ಒಂದು ಜೀವವು ಇಚ್ಛಿಸುವ ವಿಷಯಸುಖಾನುಭವ.
  • ಆತ್ಮಾನುಭವ – ಸಂಸಾರದಿಂದ ಮುಕ್ತಿ ಹೊಂದಿ ತನ್ನನ್ನು ತಾನೇ ಅನಂತಕಾಲದವರೆಗೂ ಅನುಭವಿಸುವ ವಾಂಛೆ.
  • ಭಗವತ್ಕೈಂಕರ್ಯ (ಪರಮಪುರುಷಾರ್ಥ) – ಪರಮಪದದಲ್ಲಿ ಭಗವಂತನನ್ನು ನಿತ್ಯಕಾಲವೂ ಪರಿಚರಿಸುವುದು. ಇದು ಈ ಸಂಸಾರ ಮಂಡಲದಲ್ಲಿ ಲೌಕಿಕವಾದ ಈ ಶರೀರವನ್ನು ಬಿಟ್ಟು ಪರಮಪದವನ್ನು ಹೊಂದಿ ದಿವ್ಯ ಶರೀರವನ್ನು ಪರಿಗ್ರಹಿಸಿ ನಿತ್ಯಸೂರಿಗಳೂ ಮುಕ್ತಾತ್ಮರುಗಳೂ ಸುತ್ತುವರೆದಿರಲು, ನಾವು ಭಗವಂತನಿಗೆ ಮಾಡುವ ಕೈಂಕರ್ಯವಿಶೇಷಗಳೇ ಆಗಿದೆ.
 • ಉಪಾಯ (ಪ್ರಾಪ್ತಿಗಾಗಿ ಇರುವ ಮಾರ್ಗ) – ಇದರ ಐದು ಭೇದಗಳು ಈ ಕೆಳಕಂಡಂತೆ:
  • ಕರ್ಮಯೋಗ – ಶಾಸ್ತ್ರದಲ್ಲಿ ಹೇಳಲಾಗಿರುವ ಯಜ್ಞ, ದಾನ, ತಪಸ್ಸು, ಧ್ಯಾನ ಮುಂತಾದುವುಗಳಲ್ಲಿ ತೊಡಗಿಸಿಕೊಳ್ಳುವಿಕೆ, ತನ್ಮೂಲಕ ಇಂದ್ರಿಯ ನಿಗ್ರಹ, ಅಷ್ಟಾಂಗಯೋಗದಲ್ಲಿ ತೊಡಗಿಸಿಕೊಳ್ಳುವಿಕೆ, ಇತ್ಯಾದಿಗಳ ಮೂಲಕ ತನ್ನ ಬಗೆಗಿನ ಅರಿವು (ಆತ್ಮಜ್ಞಾನ) ಮೂಡಿಸಿಕೊಳ್ಳುವುದು; ಇದು ಜ್ಞಾನಯೋಗಕ್ಕೆ ಅಂಗವಾಗಿದ್ದು, ಮುಖ್ಯತಃ ಲೌಕಿಕ ಸಂಪತ್ತು ಗಳಿಕೆಯು ಇದರ ಉದ್ದೇಶವಾಗಿರುತ್ತದೆ.
  • ಜ್ಞಾನಯೋಗ – ಕರ್ಮಯೋಗದ ಮೂಲಕ ಗಳಿಸಿದ ಜ್ಞಾನವನ್ನು ಮೂಲವನ್ನಾಗಿಸಿಕೊಂಡು ಹೃದಯಸ್ಥಿತನಾದ ಭಗವಂತ ಶ್ರೀಮನ್ನಾರಾಯಣನನ್ನು ಕುರಿತು ಸತತ ಧ್ಯಾನಮಾಡುವುದು; ಇದು ಭಕ್ತಿಯೋಗಕ್ಕೆ ಅಂಗವಾಗಿದ್ದು, ಇದರ ಮುಖ್ಯ ಉದ್ದೇಶ ಕೈವಲ್ಯಮೋಕ್ಷವೇ ಆಗಿರುತ್ತದೆ.
  • ಭಕ್ತಿಯೋಗ – ಇಂತಹ ಜ್ಞಾನಯೋಗದ ಸಹಕಾರದೊಂದಿಗೆ ನಿರಂತರ ಧ್ಯಾನ ಮಾಡಿ ಆನಂದಾನುಭವ ಹೊಂದಿ, ಕೂಡಿಟ್ಟಿರುವ ಪುಣ್ಯಪಾಪರೂಪ ಕರ್ಮಗಳನ್ನು ಹೋಗಲಾಡಿಸಿಕೊಂಡು, ತನ್ನ ನಿಜವಾದ ಗುರಿಯನ್ನೂ ಉಪಾಯವನ್ನೂ ಯಥಾರ್ಥವಾಗಿ ತಿಳಿದು ಅದರ ದಿಸೆಯಲ್ಲಿ ಸಾಗುವುದು.
  • ಪ್ರಪತ್ತಿ – ಭಗವಂತನಲ್ಲಿ ಶರಣು ಹೊಂದುವುದು; ಇದು ಅನುಷ್ಠಿಸಲು ಬಹಳ ಸುಲಭವೂ, ಮನೋಲ್ಲಾಸಕರವೂ ಆಗಿರುತ್ತದೆ. ಇದು ಕ್ಷಿಪ್ರ ಪ್ರಸಾದಕಾರಿಯಾಗಿರುತ್ತದೆ. ಒಂದೇ ಬಾರಿ ಪ್ರಪತ್ತಿ ಮಾಡಬೇಕಾಗಿರುವುದರಿಂದ ತದನಂತರ ಮಾಡುವ ಪ್ರತಿಯೊಂದು ಕರ್ಮವೂ ಭಗವತ್ಕೈಂಕರ್ಯವಾಗಿ ಬಿಡುತ್ತದೆ. ಇದು ಕರ್ಮ-ಜ್ಞಾನ-ಭಕ್ತಿಯೋಗಗಳಲ್ಲಿ ತೊಡಗಿಸಿ ಕೊಳ್ಳಲಾರದವರಿಗೂ(ತಾವು ಭಗವಂತನಿಗೆ ಶೇಷಭೂತರೆಂಬ ಆತ್ಮಯಾಥಾತ್ಮ್ಯ ಜ್ಞಾನವನ್ನು ಹೊಂದಿದ ಮೇಲೆ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಯಾವ ಉಪಾಯಾಂತರಗಳನ್ನೂ ನಂಬದವರಿಗೂ) ಅನುಷ್ಠಿಸಲು ತಕ್ಕವಾದ ಕ್ರಿಯೆಯಾಗಿದೆ. ಈ ಪ್ರಪತ್ತಿಯೂ ಎರಡು ವಿಧವಾದದ್ದು: ೧) ಆರ್ತಪ್ರಪತ್ತಿ – ಇಲ್ಲಿ ಪ್ರಪನ್ನನು ಪ್ರಪತ್ತಿ ಅನುಷ್ಠಿಸಿದ ನಂತರ ಒಂದು ಕ್ಷಣಮಾತ್ರವೂ ಸಂಸಾರದಲ್ಲಿರಲು ಸಹಿಸಲಾರದೆ ತತ್ಕ್ಷಣವೇ ಮೋಕ್ಷಕ್ಕೆ ತೆರಳಬೇಕೆಂಬ ಹಂಬಲವುಳ್ಳವನಾಗಿರುತ್ತಾನೆ; ೨) ದೃಪ್ತ ಪ್ರಪತ್ತಿ – ಇಲ್ಲಿ ಪ್ರಪನ್ನನು ಪ್ರಪತ್ತಿ ಅನುಷ್ಠಿಸಿದ ನಂತರ ತಾನು ಸಹಜವಾಗಿಯೇ ಮೋಕ್ಷವನ್ನೆಯ್ದುವ ತನಕ ಈ ಸಂಸಾರದಲ್ಲೇ ಇದ್ದುಕೊಂಡು ಭಗವದ್ಭಾಗವತಾಚಾರ್ಯರುಗಳಿಗೆ ನಿತ್ಯ ಕೈಂಕರ್ಯವನ್ನು ಮಾಡಿ, ಶರೀರಾವಸಾನದಲ್ಲಿ ಮೋಕ್ಷವನ್ನು ಹೊಂದುತ್ತಾನೆ.
  • ಆಚಾರ್ಯಾಭಿಮಾನ – ಈ ಮೇಲ್ಕಂಡ ಯಾವ ಉಪಾಯಗಳಲ್ಲಿಯೂ ತೊಡಗಿಸಿ ಕೊಳ್ಳಲಾರದವರನ್ನು ಪರಮ ಕೃಪಾಳುವಾದ ಆಚಾರ್ಯನು ಸ್ವತಃ ತನ್ನ ಶಿಷ್ಯರ ಉಜ್ಜೀವನಾರ್ಥವಾಗಿ ಅವರಿಗೆ ಸದರ್ಥಗಳನ್ನು ಬೋಧಿಸುತ್ತ ಅವರನ್ನು ಮುನ್ನಡೆಸುವುದು; ಇಲ್ಲಿ ಶಿಷ್ಯನು ತಾನು ಆಚಾರ್ಯನನ್ನು ಸಂಪೂರ್ಣ ವಿಶ್ವಾಸದಿಂದ ಅನುವರ್ತಿಸುವನಷ್ಟೇ. ಟಿಪ್ಪಣಿ: ಇಲ್ಲಿ ನಾವು ಶ್ರೀ ರಾಮಾನುಜಾಚಾರ್ಯರನ್ನು ಉತ್ತಾರಕಾಚಾರ್ಯರೆಂದೂ (ನಮ್ಮನ್ನು ಸಂಸಾರದಿಂದ ಪಾರುಮಾಡಿ ಮೋಕ್ಷಕ್ಕೆ ಕರೆದೊಯ್ಯುವ ಆಚಾರ್ಯರೆಂದೂ), ನಮ್ಮ ಸಮಾಶ್ರಯಣಾಚಾರ್ಯರನ್ನು ಉಪಕಾರಕಾಚಾರ್ಯರೆಂದೂ (ಶ್ರೀರಾಮಾನುಜರ ಸಂಬಂಧ ಕಲ್ಪಿಸಿಕೊಡುವವರೆಂದೂ) ಕರೆಯುವ ಸಂಪ್ರದಾಯ ರೂಢಿಯನ್ನು ಸ್ಮರಿಸಬಹುದು, ನಮ್ಮೆಲ್ಲ ಪೂರ್ವಾಚಾರ್ಯರುಗಳೂ ಎಂಪೆರುಮಾನಾರ್ ಶ್ರೀ ರಾಮಾನುಜಾಚಾರ್ಯರ ಶ್ರೀಪಾದಪದ್ಮಗಳನ್ನೇ ನಂಬಿ ಬದುಕಿದ ಅನೇಕ ನಿದರ್ಶನಗಳು ನಮಗೆ ಕಾಣಸಿಗುತ್ತವೆ. ಇದರ ಬಗೆಗಿನ ಹೆಚ್ಚಿನ ಓದಿಗೆ ಈ ವಿಳಾಸಕ್ಕೆ ಹೋಗಬಹುದು: http://ponnadi.blogspot.in/p/charamopaya-nirnayam.html. ನಮ್ಮ ಮಣವಾಳ ಮಾಮುನಿಗಳೂ ಸಹ ತಮ್ಮ ಆರ್ತಿಪ್ರಬಂಧದಲ್ಲಿ ತಾವು ವಡುಗನಂಬಿಗಳಂತೆಯೇ ಆಚಾರ್ಯನಿಷ್ಠರಾಗಿರಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾರೆ.
 • ವಿರೋಧಿ – ನಾವು ನಮ್ಮ ಗುರಿಯನ್ನು ತಲುಪುವುದರಿಂದ ತಡೆಯುವ ಸಂಗತಿಗಳು. ಇದರ ಐದು ಬಗೆಗಳು:
  • ಸ್ವರೂಪವಿರೋಧಿ – ದೇಹವನ್ನೇ ಆತ್ಮಾ ಎಂದು ತಪ್ಪಾಗಿ ತಿಳಿಯುವಿಕೆ, ಭಗವಂತನ ಹೊರತಾಗಿ ಮತ್ತೊಬ್ಬರಿಗೆ ಆಳಾಗಿರುವುದು, ನಮ್ಮನ್ನು ನಾವೇ ಸ್ವತಂತ್ರರನ್ನಾಗಿ ಭಾವಿಸುವುದು, ಇತ್ಯಾದಿ
  • ಪರತ್ವ ವಿರೋಧಿ – ಇತರ ದೇವತೆಗಳನ್ನು ಪರದೇವತೆಗಳೆಂದು ಭಾವಿಸುವುದು, ಇತರ ದೇವತೆಗಳನ್ನು ಭಗವಂತನಿಗೆ ಸಮನಾಗಿ ಭಾವಿಸುವುದು, ಆ ಕ್ಷುದ್ರದೇವತೆಗಳನ್ನು ಶಕ್ತಿವಂತರಾಗಿ ಭಾವಿಸುವುದು, ಭಗವಂತನ ಅವತಾರಗಳನ್ನು ಮನುಷ್ಯ ಮಾತ್ರರನ್ನಾಗಿ ಭಾವಿಸುವುದು, ಭಗವಂತನ ಅರ್ಚಾವಿಗ್ರಹಗಳಲ್ಲಿ ಭಗವಂತನ ಶಕ್ತಿ ಇಲ್ಲದಿರುವುದಾಗಿ ಪರಿಗಣಿಸುವುದು, ಇತ್ಯಾದಿ.
  • ಪುರುಷಾರ್ಥ ವಿರೋಧಿ – ಭಗವಂತನ ಸೇವೆಯ ಹೊರತಾಗಿ ಇತರ ಪುರುಷಾರ್ಥಗಳನ್ನು ಅಪೇಕ್ಷಿಸುವುದು, ಭಗವಂತನ ಸೇವೆಯಲ್ಲಿ ಅವನ ಇಚ್ಛೆಯನ್ನಲ್ಲದೆ ಸ್ವೇಚ್ಛೆಯಾನುಸಾರ ವರ್ತಿಸುವುದು.
  • ಉಪಾಯ ವಿರೋಧಿ – ಇತರ ಉಪಾಯಗಳನ್ನು ಮಹತ್ತಾಗಿ ಪರಿಗಣಿಸುವುದು, ಶರಣಾಗತಿಯನ್ನು ನಾವಡೆವ ಪುರುಷಾರ್ಥಕ್ಕೆ ಬಹಳ ಅಲ್ಪವಾಗಿ ಪರಿಗಣಿಸುವುದು, ಪರಮಪದದಲ್ಲಿ ಭಗವಂತನ ಸೇವೆಯನ್ನು ಅರಿದಾಗಿ ಭಾವಿಸುವುದು, (ಆಚಾರ್ಯನ/ಭಗವಂತನ ಅನುಗ್ರಹ ಶಕ್ತಿಯನ್ನು ಮರೆತು) ಅಂತಹ ಸೇವೆಗಿರುವ ಅನೇಕ ತಡೆಗಳನ್ನು ಕಂಡಂಜುವುದು.
  • ಪ್ರಾಪ್ತಿವಿರೋಧಿ – ನಾವು ನಮ್ಮ ಗುರಿಯನ್ನು ಶೀಘ್ರದಲ್ಲಿ ಮುಟ್ಟಲು ಬಿಡಗೊಡದ ಸಂಗತಿಗಳು: ನಮ್ಮ ಕರ್ಮಕಳೆದ ಮಾತ್ರಕ್ಕೆ ಬಿದ್ದುಹೋಗುವ ಈ ಶರೀರದ ಸಂಬಂಧ, ನೀಚತನದ ಕಾರ್ಯಗಳು, ಭಗವದಪಚಾರಗಳು, ಭಾಗವತಾಪಚಾರಗಳು, ಇತ್ಯಾದಿ.

ಪಿಳ್ಳೈಲೋಕಾಚಾರ್ಯರು ತಮ್ಮ ಅರ್ಥಪಂಚಕವೆಂಬ ಗ್ರಂಥದಲ್ಲಿ ಈ ಕೆಳಕಂಡಂತೆ ನಿರ್ಣಯಿಸಿರುತ್ತಾರೆ:

ಈ ಐದು ವಿಷಯಗಳ ಬಗೆಗಿನ ಜ್ಞಾನವನ್ನು ಹೊಂದಿದ ಮುಮುಕ್ಷುವು ಈ ಕೆಳಕಂಡ ಜೀವನಶೈಲಿಯನ್ನು ಅಳವಡಿಸಿಕೊಳ್ಳತಕ್ಕದ್ದು: ವರ್ಣಾಶ್ರಮಧರ್ಮಕ್ಕನುಸಾರವಾಗಿ, ವೈಷ್ಣವ ನಿಯಮಗಳನ್ನು ಮೀರದೆ ಮಾಡುವ ಸಂಪಾದನೆಯಲ್ಲಿ ಎಲ್ಲವನ್ನೂ ಭಗವಂತನಿಗೂ ಭಾಗವತರುಗಳಿಗೂ ವಿನಿಯೋಗಿಸಿ, ತನ್ನ ಜೀವನೋಪಾಯಕ್ಕೆ ಅವಶ್ಯಕವಾದ ಮೊತ್ತವನ್ನು ಮಾತ್ರವೇ ಉಳಿಸಿಕೊಂಡು, ತನಗೆ ಜ್ಞಾನವನ್ನುಪದೇಶಿಸಿದ ಆಚಾರ್ಯನ ಕೈಂಕರ್ಯವನ್ನು ನಿಷ್ಠೆಯಿಂದ ಮಾಡುತ್ತ ಅವರ ಮುಖೋಲ್ಲಾಸಕ್ಕಾಗಿಯೇ ಜೀವಿಸುವುದು.

ಪ್ರತಿಯೊಬ್ಬ ಶ್ರೀವೈಷ್ಣವನೂ ಭಗವಂತನ ಮಹಿಮೆಯನ್ನರಿತು ಅವನ ಮುಂದೆ ವಿನಯದಿಂದಿರಬೇಕು. ತನ್ನ ಆಚಾರ್ಯನ ಜ್ಞಾನವನ್ನರಿತು ಅವರ ಮುಂದೆ ತನ್ನ ಅಜ್ಞಾನವನ್ನು ತೋರಿಸಿಕೊಳ್ಳಬೇಕು. ಶ್ರೀವೈಷ್ಣವರ ಸ್ವಾಮಿತ್ವವನ್ನರಿತು ಅವರ ಮುಂದೆ ತನ್ನ ಪಾರತಂತ್ರ್ಯವನ್ನು ತೋರಿಸಿಕೊಳ್ಳಬೇಕು. ಹಾಗೆಯೇ ಸಂಸಾರಿಗಳ ವಿಷಯ ಸುಖಾಪೇಕ್ಷೆಯನ್ನರಿತು ಅವರಿಂದ ದೂರವುಳಿಯಬೇಕು.

ಪ್ರತಿಯೊಬ್ಬ ಶ್ರೀವೈಷ್ಣವನಿಗೂ ತನ್ನ ಪುರುಷಾರ್ಥವಡೆಯುವ ವಾಂಛೆಯೂ, ಉಪಾಯದ ಬಗೆಗೆ ದೃಢವಾದ ಆಸೆಯೂ, ತಡೆಗಳ ಬಗೆಗೆ ಭಯವೂ, ಸ್ವಶರೀರದ ಬಗೆಗೆ ಜುಗುಪ್ಸೆ-ವೈರಾಗ್ಯಗಳೂ, ಸ್ವಸ್ವರೂಪದ ಅರಿವೂ, ತನ್ನನ್ನು ತಾನೇ ರಕ್ಷಿಸಿಕೊಳ್ಳುವಲ್ಲಿ ಅಶಕ್ತಿಯೂ, ಭಾಗವತರ ಬಗೆಗೆ ಒಲವು-ಗೌರವಗಳೂ, ಸ್ವಾಚಾರ್ಯನಲ್ಲಿ ವಿಶ್ವಾಸವೂ ಕೃತಜ್ಞತೆಯೂ ಇರಬೇಕು.

ಯಾರು ಇಂತಹ ಜ್ಞಾನವನ್ನು ಹೊಂದಿರುವರೋ, ಮತ್ತು ಯಾರು ಈ ಜ್ಞಾನವನ್ನು ಅನುಷ್ಠಾನ ಪರ್ಯಂತವಾಗಿ ಅರಿತಿದ್ದಾರೆಯೋ, ಅಂತಹವರು ಭಗವಂತನಿಗೆ ನಿತ್ಯ-ಮುಕ್ತರಿಗಿಂತಲೂ, ತನ್ನ ಮಹಿಷಿಯರಿಗಿಂತಲೂ ಪ್ರಿಯರಾಗಿರುತ್ತಾರೆ.

ಆಳ್ವಾರ್ ತಿರುವಡಿಗಳೇ ಶರಣಮ್
ಎಂಪೆರುಮಾನಾರ್ ತಿರುವಡಿಗಳೇ ಶರಣಮ್
ಪಿಳ್ಳೈಲೋಕಾಚಾರ್ಯರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್

ಅಡಿಯೇನ್ ಶ್ರೀನಿವಾಸ ರಾಮಾನುಜ ದಾಸನ್

 

ಮೂಲ: http://ponnadi.blogspot.in/2015/12/artha-panchakam.html

ರಕ್ಷಿತ ಮಾಹಿತಿ:  https://srivaishnavagranthamskannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಬೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ತತ್ತ್ವ ತ್ರಯಮ್

ಶ್ರೀಃ
ಶ್ರೀಮತೇ ಶಠಕೋಪಾಯ ನಮಃ
ಶ್ರೀಮತೇ ರಾಮಾನುಜಾಯ ನಮಃ
ಶ್ರೀಮದ್ವರವರಮುನಯೇ ನಮಃ
ಶ್ರೀ ವಾನಾಚಲಮಹಾಮುನಯೇ ನಮಃ

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

<< ರಹಸ್ಯ ತ್ರಯಮ್

ಎಲ್ಲಾ ವಸ್ತುಗಳನ್ನು ಮುಖ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಬಹುದು. ಅವು: ಚಿತ್, ಅಚಿತ್, ಮತ್ತು ಈಶ್ವರ ತತ್ತ್ವಗಳು.

’ಚಿತ್’ ಎಂಬುದು ನಿತ್ಯವಿಭೂತಿ (ಪರಮಪದ – ನಾಶರಹಿತವಾದ ಶ್ರೀವೈಕುಂಠಲೋಕ) ಮತ್ತು ಲೀಲಾವಿಭೂತಿ (ನಶ್ವರವಾದ ಸಂಸಾರ ಮಂಡಲ) ಎಂಬ ಎರಡೂ ಮಂಡಲಗಳಲ್ಲಿರುವ ಅಸಂಖ್ಯಾತ ಜೀವಾತ್ಮಗುಣವನ್ನು ಸೂಚಿಸುತ್ತದೆ. ಪ್ರತಿಯೊಂದು ಜೀವಾತ್ಮವೂ ಸ್ವಾಭಾವಿಕವಾಗಿಯೇ ಜ್ಞಾನಮಯವೂ (ಜ್ಞಾನದಿಂದಾಗಿರುವುದು), ಜ್ಞಾನಗುಣಕವೂ (ಜ್ಞಾನವನ್ನು ಹೊಂದಿರುವುದು) ಆಗಿದೆ. ಪರಿಶುದ್ಧ ಜ್ಞಾನವು ಆನಂದಮಯವಾಗಿರುವುದರಿಂದ ಆತ್ಮವು ಪರಿಶುದ್ಧ ಜ್ಞಾನದಲ್ಲಿ ನೆಲೆನಿಂತಿರುವಾಗ ಅದೂ ಸಹ ಆನಂದಮಯವಾಗಿರುತ್ತದೆ. ಜೀವಾತ್ಮಗಳನ್ನು ಈ ಕೆಳಕಂಡಂತೆ ಮೂರು ವಿಧವಾಗಿ ವಿಂಗಡಿಸಬಹುದು: ನಿತ್ಯಸೂರಿಗಳು (ಸಂಸಾರ ಸಂಬಂಧವೇ ಇಲ್ಲದವರು), ಮುಕ್ತಾತ್ಮಗಳು (ಒಂದು ಕಾಲದಲ್ಲಿ ಸಂಸಾರದಲ್ಲಿದ್ದುಕೊಂಡು ನಂತರ ಬಂಧಮುಕ್ತರಾದವರು), ಮತ್ತು ಬದ್ಧಾತ್ಮಗಳು (ಈಗಲೂ ಸಂಸಾರದಲ್ಲಿರುವವರು). ಇನ್ನೂ ಬದ್ಧಾತ್ಮಗಳನ್ನು ಬುಭುಕ್ಷುಗಳು (ಭೋಗವನ್ನಿಚ್ಛಿಸುವವರು) ಮತ್ತು ಮುಮುಕ್ಷುಗಳು (ಮೋಕ್ಷವನ್ನಿಚ್ಛಿಸುವವರು) ಎಂಬುದಾಗಿ ಎರಡು ವಿಧವಾಗಿ ವಿಂಗಡಿಸಬಹುದು. ಮೇಲೆಯೂ, ಮುಮುಕ್ಷುಗಳನ್ನು ಕೈವಲ್ಯಾರ್ಥಿಗಳು (ತಮ್ಮನ್ನು ತಾವೇ ಅನುಭವಿಸಲಿಚ್ಛಿಸುವವರು) ಮತ್ತು ಭಗವತ್ಕೈಂಕರ್ಯಾರ್ಥಿಗಳು (ಪರಮಪದದಲ್ಲಿ ಭಗವಂತನಿಗೆ ನಿತ್ಯಕೈಂಕರ್ಯವನ್ನು ಮಾಡಲಿಚ್ಛಿಸುವವರು) ಎಂದು ಎರಡು ವಿಧವಾಗಿ ಪರಿಗಣಿಸಬಹುದು. ಈ ವಿಂಗಡಣೆಯ ಬಗೆಗೆ ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಕಂಡ ಜಾಲತಾಣವನ್ನು ವೀಕ್ಷಿಸಬಹುದು: http://ponnadi.blogspot.com/2013/03/thathva-thrayam-chith-who-am-i5631.html

 

’ಅಚಿತ್’ ಎಂಬುದು ನಮ್ಮ ಇಂದ್ರಿಯಗಳಿಗೆ ಗೋಚರವಾಗುವ ಅನೇಕ ಜಡ ಪದಾರ್ಥಗಳನ್ನು  ಒಳಕೊಂಡಿರುತ್ತದೆ. ಇವು ಪ್ರಳಯಕಾಲದಲ್ಲಿ ಅವ್ಯಕ್ತವಾಗಿದ್ದು, ಸೃಷ್ಟಿ ಕಾಲದಲ್ಲಿ ವ್ಯಕ್ತರೂಪವನ್ನು ತಾಳುತ್ತವೆ. ಚಿದ್ವಸ್ತುವಿನಂತೆಯೇ ಅಚಿದ್ವಸ್ತುವೂ ಸಹಾ ನಿತ್ಯವಿಭೂತಿ-ಲೀಲಾ ವಿಭೂತಿ ಎರಡರಲ್ಲಿಯೂ ಕಾಣ ಸಿಗುತ್ತದೆ. ಸಾಮಾನ್ಯವಾಗಿ ಅಚಿತ್, ಲೀಲಾವಿಭೂತಿಯಲ್ಲಿ ಜ್ಞಾನವನ್ನು ಮರೆಮಾಚುವ ಸಾಧನವೂ, ನಿತ್ಯವಿಭೂತಿಯಲ್ಲಿ ಜ್ಞಾನ ಧರ್ಮಕವಾದ ಸಾಧನವೂ ಆಗಿರುತ್ತದೆ. ಈ ಅಚಿದ್ವಸ್ತುವನ್ನು ’ಶುದ್ಧಸತ್ತ್ವ’ (ಸತ್ತ್ವಮಾತ್ರವೇ ಆಗಿರುವ ವಸ್ತು – ಪರಮಪದದಲ್ಲಿ ಲಭ್ಯ), ’ಮಿಶ್ರಸತ್ತ್ವ’ (ಸತ್ತ್ವ-ರಜಸ್-ತಮಸ್ಸುಗಳ ಮಿಶ್ರಣ – ಸಂಸಾರದಲ್ಲಿ ಗೋಚರ) ಮತ್ತು ’ಸತ್ತ್ವಶೂನ್ಯ’ (ಸತ್ತ್ವವೇ ಇಲ್ಲದ ವಸ್ತು – ’ಕಾಲ’ವೆಂದು ಹೆಸರು) ಎಂಬುದಾಗಿ ವಿಂಗಡಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಈ ತಾಣಕ್ಕೆ ಭೇಟಿ ಕೊಡಿ: http://ponnadi.blogspot.com/2013/03/thathva-thrayam-achith-what-is-matter.html .

ಈಶ್ವರನು ಶ್ರಿಯಃಪತಿಯಾದ ಸರ್ವಸ್ವಾಮಿ ಶ್ರೀಮನ್ನಾರಾಯಣ. ಇವನನ್ನು ’ಭಗವಂತ’ (ಭಗವಾನ್) ಎನ್ನುತ್ತಾರೆ. ’ಭಗವಾನ್’ ಎಂದರೆ ಆರು ಗುಣಗಳನ್ನು ಸಂಪೂರ್ಣವಾಗಿ ಹೊಂದಿರುವವನು ಎಂದರ್ಥ (ಷಾಡ್ಗುಣ್ಯಪೂರ್ತಿ). ಈ ಆರು ಗುಣಗಳಾವು ಎಂದರೆ: ಜ್ಞಾನ, ಬಲ, ಐಶ್ವರ್ಯ, ವೀರ್ಯ, ಶಕ್ತಿ, ಮತ್ತು ತೇಜಸ್ಸು. ಈ ಆರುಗುಣಗಳೇ ಮುಂದೆ ಭಗವಂತನ ಅನೇಕ ಕಲ್ಯಾಣಗುಣಗಳಾಗಿ ವಿಸ್ತರಿಸುತ್ತವೆ.  ಭಗವಂತನು ಎಲ್ಲಾ ಕಲ್ಯಾಣಗುಣಗಳಿಗೂ ಆಶ್ರಯಭೂತನಾಗಿದ್ದು, ಎಲ್ಲಾ ಹೇಯಗುಣಗಳಿಗೂ ಪ್ರತಿಭಟನಾಗಿರುತ್ತಾನೆ. ಎಲ್ಲಾ ಚಿದಚಿದ್ವಸ್ತುಗಳೂ ಅವನಲ್ಲೇ ಆಶ್ರಿತವಾಗಿವೆ, ಮತ್ತು ಅವೆಲ್ಲವನ್ನೂ ಒಂದೂ ಬಿಡದಂತೆ ಆತನು ವ್ಯಾಪಿಸಿದ್ದಾನೆ. ಆದ್ದರಿಂದ ಅವನಲ್ಲೇ ಎಲ್ಲಾ ವಸ್ತುಗಳೂ ನೆಲೆಸಿದ್ದು, ಅವನೂ ಎಲ್ಲಾ ವಸ್ತುಗಳಲ್ಲಿಯೂ ನೆಲೆಸಿದ್ದಾನೆ. ಅವನು ಎಲ್ಲರಿಗೂ / ಎಲ್ಲಾ ಪದಾರ್ಥಗಳಿಗೂ ಸ್ವಾಮಿಯಾಗಿದ್ದು, ಎಲ್ಲಾ ಚಿದಚಿದ್ವಸ್ತುಗಳೂ ಕೇವಲ ಅವನ ಭೋಗಕ್ಕಾಗಿಯೇ ಇವೆ. ಈಶ್ವರ ತತ್ತ್ವದ ಬಗೆಗೆ ಇನ್ನೂ ಹೆಚ್ಚಿನ ವಿವರಗಳಿಗೆ ಓದಿ: http://ponnadi.blogspot.com/2013/03/thathva-thrayam-iswara-who-is-god.html

ಈ ಮೂರು ತತ್ತ್ವಗಳಲ್ಲಿರುವ ಸಾಮ್ಯಗಳು ಈ ಕೆಳಕಂಡಂತಿವೆ:

 • ಈಶ್ವರ ಮತ್ತು ಚಿತ್ (ಜೀವಾತ್ಮಾ) ಎಂಬ ಎರಡೂ ಚೈತನ್ಯವುಳ್ಳ ತತ್ತ್ವಗಳು (ಜ್ಞಾನವನ್ನು ಹೊಂದಿರುವವು).
 • ಚಿತ್ (ಜ್ಞಾನ ಸಹಿತವಾದದ್ದು) ಮತ್ತು ಅಚಿತ್ (ಜ್ಞಾನ ರಹಿತವಾದದ್ದು) ಎಂಬ ಎರಡೂ ತತ್ತ್ವಗಳು ಈಶ್ವರನ ಸ್ವತ್ತು.
 • ಈಶ್ವರ ಮತ್ತು ಅಚಿದ್ವಸ್ತುಗಳೆರಡೂ ಚಿದ್ವಸ್ತುವಾದ ಜೀವಾತ್ಮವನ್ನು ತಮ್ಮ ತಮ್ಮಗುಣಗಳಿಗೆ ಆನುಸಾರವಾಗಿ ಮಾರ್ಪಡಿಸಬಲ್ಲವು. ಉದಾಹರಣೆಗೆ: ಜೀವಾತ್ಮನು ಬಹಳವಾಗಿ ಲೌಕಿಕಾನುಭವಗಳಲ್ಲಿ ಆಸಕ್ತನಾಗಿರುವಾಗ ತಾನೂ ಅಚಿದ್ವಸ್ತುವಿನಂತೆಯೇ ಜ್ಞಾನಶೂನ್ಯನಾಗಿಬಿಡುವನು. ಹಾಗೆಯೇ, ಜೀವಾತ್ಮನು ಪರಿಪೂರ್ಣವಾಗಿ ಭಗವದನುಭವದಲ್ಲಿ ಮುಳುಗಿರುವಾಗ ಈ ಸಂಸಾರಬಂಧಗಳಿಂದ ಮುಕ್ತನಾಗಿ ಭಗವಂತನಂತೆಯೇ ಪರಿಪೂರ್ಣ ಆನಂದಾನುಭವವನ್ನು ಹೊಂದುವನು.

ಈ ಮೂರೂ ತತ್ತ್ವಗಳಲ್ಲಿರುವ ಅಸಾಧಾರಣ ಗುಣಗಳು ಈ ಕೆಳಕಂಡಂತಿವೆ:

 • ಈಶ್ವರನ ಅಸಾಧಾರಣ ಗುಣಗಳೆಂದರೆ ಚಿದಚಿದ್ವಸ್ತುಗಳ ಮೇಲಿರುವ ಅವನ ಸರ್ವಸ್ವಾಮ್ಯ, ಮತ್ತು ಅವನ ಸರ್ವ ಅಂತರ್ಯಾಮಿತ್ವ -ಸರ್ವಶಕ್ತಿತ್ವ-ಸರ್ವಜ್ಞತ್ವಾದಿಗಳು.
 • ಚಿದ್ವಸ್ತುವಿನ ಅಸಾಧಾರಣ ಗುಣವೆಂದರೆ ಈಶ್ವರವಿಷಯವಾಗಿ ತನಗಿರುವ ಶೇಷತ್ವಜ್ಞಾನ.
 • ಅಚಿದ್ವಸ್ತುವಿನ ಅಸಾಧಾರಣ ಗುಣವೆಂದರೆ ಜ್ಞಾನಶೂನ್ಯವಾಗಿದ್ದುಕೊಂಡು, ಇತರರ ಭೋಗೋಪಯೋಗಿಯಾಗಿಯೇ ಇರುವುದು.

ಈ ಮೂರು ತತ್ತ್ವಗಳ ಬಗೆಗೆ ಇನ್ನೂ ಹೆಚ್ಚಿನ ವಿವರಗಳಿಗಾಗಿ ಶ್ರೀ ಪಿಳ್ಳೈಲೋಕಾಚಾರ್ಯರ “ತತ್ತ್ವತ್ರಯಮ್” ಎಂಬ ರಹಸ್ಯಗ್ರಂಥವನ್ನು ಈ ಕೆಳಕಂಡ ಜಾಲತಾಣದಲ್ಲಿ ಪರಿಶೀಲಿಸುವುದು: http://ponnadi.blogspot.in/2013/10/aippasi-anubhavam-pillai-lokacharyar-tattva-trayam.html

ಆಳ್ವಾರ್ ತಿರುವಡಿಗಳೇ ಶರಣಮ್
ಎಂಪೆರುಮಾನಾರ್ ತಿರುವಡಿಗಳೇ ಶರಣಮ್
ಪಿಳ್ಳೈಲೋಕಾಚಾರ್ಯರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್

ಅಡಿಯೇನ್ ಶ್ರೀನಿವಾಸ ರಾಮಾನುಜ ದಾಸನ್

 

ಮೂಲ: http://ponnadi.blogspot.in/2015/12/thathva-thrayam-in-short.html

ರಕ್ಷಿತ ಮಾಹಿತಿ:  https://srivaishnavagranthamskannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಬೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಗುರುಪರಂಪರೆ

ಶ್ರೀಃ
ಶ್ರೀಮತೇ ಶಠಕೋಪಾಯ ನಮಃ
ಶ್ರೀಮತೇ ರಾಮಾನುಜಾಯ ನಮಃ
ಶ್ರೀಮದ್ವರವರಮುನಯೇ ನಮಃ
ಶ್ರೀ ವಾನಾಚಲಮಹಾಮುನಯೇ ನಮಃ

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

<< ಆಚಾರ್ಯ-ಶಿಷ್ಯ ಸಂಬಂಧ

ಈ ಹಿಂದಿನ ಲೇಖನದಲ್ಲಿ ನಾವು ಆಚಾರ್ಯ-ಶಿಷ್ಯ ಸಂಬಂಧದ ವೈಶಿಷ್ಟ್ಯವನ್ನು ಕಂಡೆವು.

ಕೆಲವರು “ನಮಗೂ ಭಗವಂತನಿಗೂ ನಡುವೆ ಆಚಾರ್ಯನೆಂಬುವನ ಅವಶ್ಯಕತೆಯಿದೆಯೇ? ಭಗವಂತನು ಈ ಮೊದಲೇ ಗಜೇಂದ್ರಾಳ್ವಾನ್, ಗುಹ, ಶಬರಿ, ಅಕ್ರೂರ, ತ್ರಿವಕ್ರಾ (ಕೃಷ್ಣಾವತಾರ ಕಾಲದಲ್ಲಿದ್ದ ಗೂನಿ), ಮಾಲಾಕಾರ (ಹೂಗಾರ) ಮುಂತಾದವರನ್ನು ನೇರವಾಗಿಯೇ ಅಂಗೀಕರಿಸಿರುವನಲ್ಲ?” ಎಂದು ಕೇಳಬಹುದು.

ಇದಕ್ಕೆ ನಮ್ಮ ಪೂರ್ವಾಚಾರ್ಯರುಗಳು ಕೊಡುವ ಸಮಜಾಯಿಷಿ ಹೀಗಿದೆ: ಭಗವಂತನು ಸರ್ವಸ್ವತಂತ್ರನು. ಅವನು ಎಲ್ಲಾ ಜೀವರುಗಳ ಮೇಲೆಯೂ ತನ್ನ ಕೃಪೆಯನ್ನು ವರ್ಷಿಸುತ್ತಾನೆ. ಹಾಗೆಯೇ ಆ ಜೀವರುಗಳ ಕರ್ಮಗಳಿಗೆ ತಕ್ಕ ಫಲವನ್ನೂ ನೀಡುತ್ತಾನೆ. ಇಲ್ಲಿಯೇ ಆಚಾರ್ಯನ ಮುಖ್ಯತ್ವವಿರುವುದು. ಭಗವಂತನು (ಎಲ್ಲರಲ್ಲಿಯೂ ಇರುವ ತನ್ನ ಸತತ ಸುಕೃತಗಳಿಂದ (ಸದ್ಭಾವನೆಗಳಿಂದ)) ದಣಿವಿಲ್ಲದೆ ಎಲ್ಲ ಜೀವರುಗಳಿಗೂ ನಿಜವಾದ ಜ್ಞಾನವನ್ನು ಉಪದೇಶಿಸಿ ಆಯಾ ಜೀವರುಗಳಿಗೆ ಭಗವಂತನನ್ನಡೆಯಲು ಸಹಕರಿಸುವ ಒಬ್ಬ ಸದಾಚಾರ್ಯನನ್ನು ಹೊಂದುವಂತೆ ಅನೇಕ ಅವಕಾಶಗಳನ್ನು ಸೃಷ್ಟಿಸುತ್ತಲೇ ಇದ್ದಾನೆ. ಈ ಸದಾಚಾರ್ಯನು ಪುರುಷಕಾರಭೂತೆಯಾದ ಶ್ರೀ ಮಹಾಲಕ್ಷ್ಮಿಯಂತೆ ತಾನೂ ಪ್ರಭಾವಶಾಲಿಯಾಗಿದ್ದು, ಈ ಜೀವಾತ್ಮನು ಎಲ್ಲ ಲೌಕಿಕ ಬಂಧಗಳಿಂದಲೂ ಮುಕ್ತನಾಗಿ ಕೇವಲ ಭಗವಂತನ ಕೃಪೆಯನ್ನೇ ಅವಲಂಬಿಸಿರುವನೆಂಬುದನ್ನು ಭಗವಂತನಿಗೆ ಮನಗಾಣಿಸುತ್ತಾನೆ.

ಭಗವಂತನು ಜೀವಾತ್ಮನ ಕರ್ಮಾನುಸಾರವಾಗಿ ಸಂಸಾರವನ್ನೂ ಕೊಡಬಲ್ಲ, ಮೋಕ್ಷವನ್ನೂ ತರಬಲ್ಲನೆಂಬುದು ಪ್ರಸಿದ್ಧಿ. ಆದರೆ ಆಚಾರ್ಯನಾದವನು ತನ್ನಲ್ಲಿ ಶರಣಾದ ಜೀವರುಗಳಿಗೆ ಎಂದಿಗಾದರೂ ಮೋಕ್ಷವೊಂದನ್ನೇ ತರುವನು. ಇಷ್ಟೇ ಅಲ್ಲದೆ, ಭಗವಂತನಲ್ಲಿ ನೇರವಾಗಿ ಹೋಗುವುದು ಅವನ ಕೈ ಹಿಡಿದು ಕಾರ್ಯ ಸಾಧಿಸುವಂತೆ; ಆಚಾರ್ಯನ ಮೂಲಕ ಅವನನ್ನು ಹೊಂದುವುದು ಅವನ ಪಾದಪದ್ಮಗಳನ್ನು ಹಿಡಿದು ಕಾರ್ಯ ಸಾಧಿಸುವಂತೆ (ಆಚಾರ್ಯರುಗಳೆಲ್ಲರೂ ಅವನ ಶ್ರೀಪಾದ ಸ್ಥಾನೀಯರಾದ್ದರಿಂದ) ಎಂಬುದು ನಮ್ಮ ಪೂರ್ವಾಚಾರ್ಯರುಗಳು ತೋರಿರುವ ಸತ್ಯ. ಭಗವಂತನು ನೇರವಾಗಿ ಜೀವಾತ್ಮರನ್ನು ಅಂಗೀಕರಿಸುವುದು ಅಪರೂಪದ ವಿಷಯ. ಆದರೆ ಒಬ್ಬ ಆಚಾರ್ಯನ ಮೂಲಕ ಜೀವಾತ್ಮರನ್ನು ಅಂಗೀಕರಿಸುವುದು ಸಾಮಾನ್ಯ/ಸೂಕ್ತ ಕ್ರಮವೆಂಬುದಾಗಿ ನಮ್ಮ ಪೂರ್ವಾಚಾರ್ಯರುಗಳೆಲ್ಲ ನಿರೂಪಿಸಿದ್ದಾರೆ.

 

ನಾವಿಲ್ಲಿ ಆಚಾರ್ಯರ ಬಗ್ಗೆ ಮಾತನಾಡುತ್ತಿರುವುದರಿಂದ ನಮ್ಮ ಆಚಾರ್ಯಪರಂಪರೆಯನ್ನು ಇಲ್ಲಿ ಅರಿಯುವುದು/ಸ್ಮರಿಸುವುದು ಸೂಕ್ತವೇ ಆಗಿದೆ. ಇದನ್ನರಿಯುವುದರಿಂದ ನಮಗೆ ಭಗವಂತನಿಂದ ಈವರೆಗೆ ಈ ಅಮೂಲ್ಯವಾದ ಜ್ಞಾನವು ಹೇಗೆ ಹರಿದು ಬಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಇದು ನಮ್ಮಲ್ಲಿ ಅನೇಕರಿಗೆ ಈಗಾಗಲೇ ತಿಳಿದಿರಬಹುದು. ಆದರೂ ಇದನ್ನಿಲ್ಲಿ ಹಂಚಿಕೊಳ್ಳುವ ಹಂಬಲ; ಏಕೆಂದರೆ ಈ ಆಚಾರ್ಯಪರಂಪರೆಯಿಲ್ಲದೆ ಹೋಗಿದ್ದರೆ ನಾವೂ ಇತರ ಸಂಸಾರಿಗಳಂತೆಯೇ ಈ ಜಗತ್ತಿನಲ್ಲಿಯೇ ಬಿದ್ದು ಕಷ್ಟಪಡುತ್ತಿದ್ದೆವು.

ಶ್ರೀವೈಷ್ಣವ ಧರ್ಮವು (ಸನಾತನ ಧರ್ಮ) ಒಂದು ಸನಾತನ ಸಂಪ್ರದಾಯ. ಇದನ್ನು ಪೂರ್ವದಲ್ಲಿ ಅನೇಕ ಮಹನೀಯರುಗಳು ಪ್ರಚಾರಪಡಿಸಿದ್ದಾರೆ. ದ್ವಾಪರಯುಗದ ಅಂತ್ಯದಲ್ಲಿ  ದಕ್ಷಿಣ ಭಾರತದ ಹಲವಾರು ಪುಣ್ಯನದೀತೀರಗಳಲ್ಲಿ ಆಳ್ವಾರುಗಳು ಅವತರಿಸತೊಡಗಿದರು. ಕಟ್ಟಕಡೆಯ ಆಳ್ವಾರರು ಕಲಿಯುಗದ ಆರಂಭದಲ್ಲಿ ಅವತರಿಸಿದರು. ಈ ಆಳ್ವಾರುಗಳ ಅವತಾರವಿಷಯವನ್ನು ವ್ಯಾಸರು ಶ್ರೀ ಭಾಗವತದಲ್ಲಿ ಉಲ್ಲೇಖಿಸಿ ಅನೇಕ ನದೀತೀರಗಳಲ್ಲಿ ಶ್ರೀಮನ್ನಾರಾಯಣನ ಪರಮೋನ್ನತ ಭಕ್ತರು ಅವತರಿಸಿ ಭಗವಂತನ ಬಗೆಗಿನ ಜ್ಞಾನವನ್ನು ಜಗತ್ತಿನಲ್ಲಿ ಪಸರಿಸುತ್ತಾರೆಂಬುದಾಗಿ ತೋರಿಕೊಟ್ಟಿದ್ದಾರೆ. ಈ ಆಳ್ವಾರುಗಳು ಒಟ್ಟು ಹತ್ತು ಜನ: ಪೊಯ್ಗೈ ಆಳ್ವಾರ್, ಬೂದತ್ತಾಳ್ವಾರ್, ಪೇಯಾಳ್ವಾರ್, ತಿರುಮಳಿಶೈ ಆಳ್ವಾರ್, ನಮ್ಆಳ್ವಾರ್, ಕುಲಶೇಖರಾಳ್ವಾರ್, ಪೆರಿಯಾಳ್ವಾರ್, ತೊಂಡರಡಿಪ್ಪೊಡಿಯಾಳ್ವಾರ್, ತಿರುಪ್ಪಾಣಾಳ್ವಾರ್ ಮತ್ತು ತಿರುಮಂಗೈಯಾಳ್ವಾರ್. ಆಚಾರ್ಯನಿಷ್ಠರಾದ (ಆಚಾರ್ಯ ಪರತಂತ್ರರಾದ) ಮಧುರಕವಿ ಆಳ್ವಾರ್ ಮತ್ತು ಆಂಡಾಳ್ ಕೂಡ ಆಳ್ವಾರುಗಳ ಪೈಕಿ ಸೇರಿಸಲ್ಪಡುತ್ತಾರೆ (ಆಗ ಆಳ್ವಾರುಗಳ ಸಂಖ್ಯೆ ೧೨). ಆಂಡಾಳ್ ಭೂಮಿದೇವಿಯ ಅವತಾರ. ಮಿಕ್ಕೆಲ್ಲ ಆಳ್ವಾರುಗಳೂ ಭಗವಂತನಿಂದ ಈ ಸಂಸಾರದಲ್ಲಿ ಆಯ್ದುಕೊಳ್ಳಲ್ಪಟ್ಟ ಜೀವಾತ್ಮರುಗಳು. ಆಳ್ವಾರುಗಳಿಗೆ ಭಗವಂತನು ತನ್ನದೇ ಸಂಕಲ್ಪದಿಂದ ಚಿದ ಚಿದ್ ವಿಷ್ಯಯ ಎಂಬ ಮೂರು ತತ್ತ್ವಗಳ ಬಗೆಗೂ ಪರ್ಯಾಪ್ತವಾದ ಜ್ಞಾನವನ್ನು ಕರುಣಿಸಿ, ಅವರುಗಳ ಮೂಲಕ ಕಾಲಕ್ರಮದಲ್ಲಿ ಕಳೆದುಹೋಗಿದ್ದ ಭಕ್ತಿ/ಪ್ರಪತ್ತಿ ಮಾರ್ಗವನ್ನು ಪುನಃ ಸ್ಥಾಪಿಸಿದನು. ಅವರೆಲ್ಲರಿಗೂ ಭಗವಂತನು ಭೂತ-ಭವ್ಯ-ಭವಿಷ್ಯತ್ಕಾಲದ ಆಗುಹೋಗುಗಳನ್ನೆಲ್ಲ ಸಂಪೂರ್ಣವಾಗಿ ಮತ್ತು ಸುಸ್ಪಷ್ಟವಾಗಿ ತೋರಿಸಿಕೊಟ್ಟನು. ಈ ಆಳ್ವಾರುಗಳು ತಮ್ಮ ಭಗವದನುಭವದ ಕೃತಿಗಳಾದ ಅರುಳಿಚ್ಚೆಯಲ್ ಎಂದು ಪ್ರಸಿದ್ಧವಾದ ೪೦೦೦ ದಿವ್ಯಪ್ರಬಂಧಗಳನ್ನು ರಚಿಸಿದರು. ಈ ಅರುಳಿಚ್ಚೆಯಲ್ ಎಂಬ ದಿವ್ಯಪ್ರಬಂಧಗಳ ಸಾರವು  ನಮ್ಆಳ್ವಾರ್ ಅನುಗ್ರಹಿಸಿರುವ ತಿರುವಾಯ್ಮೊಳಿ ಎಂಬ ದಿವ್ಯ ಶ್ರೀಸೂಕ್ತಿಗಳಲ್ಲ ಅಡಕವಾಗಿದೆ .

ಆಳ್ವಾರುಗಳ ಕಾಲದ ನಂತರ ಆಚಾರ್ಯರುಗಳು ಅವತರಿಸತೊಡಗಿದರು. ನಾಥಮುನಿಗಳು, ಉಯ್ಯಕ್ಕೊಂಡಾರ್, ಮಣಕ್ಕಾಲ್ ನಂಬಿ, ಆಳವಂದಾರ್, ಪೆರಿಯ ನಂಬಿ, ಪೆರಿಯ ತಿರುಮಲೈ ನಂಬಿ, ತಿರುಕ್ಕೋಷ್ಠಿಯೂರ್ ನಂಬಿ, ತಿರುಮಾಲೈ ಆಂಡಾನ್, ಆಳ್ವಾರ್ ತಿರುವರಂಗಪ್ಪೆರುಮಾಳ್ ಅರೈಯರ್, ಎಂಪೆರುಮಾನಾರ್, ಎಂಬಾರ್, ಕೂರತ್ತಾಳ್ವಾನ್, ಮುದಲಿಯಾಂಡಾನ್, ಅರುಳಾಳಪ್ಪೆರುಮಾಳ್ ಎಂಪೆರುಮಾನಾರ್, ಅನಂತಾಳ್ವಾನ್, ತಿರುಕ್ಕುರುಗೈಪ್ಪಿರಾನ್ ಪಿಳ್ಳಾನ್, ಎಂಗಳಾಳ್ವಾನ್, ನಡಾದೂರಮ್ಮಾಳ್, ಭಟ್ಟರ್, ನಂಜೀಯರ್, ನಂಪಿಳ್ಳೈ, ವಡಕ್ಕುತ್ತಿರುವೀದಿಪ್ಪಿಳ್ಳೈ, ಪೆರಿಯವಾಚ್ಚಾನ್ ಪಿಳ್ಳೈ, ಪಿಳ್ಳೈ ಲೋಕಾಚಾರ್ಯರು, ಅಳಗಿಯ ಮಣವಾಳಪ್ಪೆರುಮಾಳ್ ನಾಯನಾರ್, ಕೂರಕುಲೋತ್ತಮ ದಾಸರು, ತಿರುವಾಯ್ಮೊಳಿಪ್ಪಿಳ್ಳೈ, ವೇದಾಂತಾಚಾರ್ಯರು ಮತ್ತು ಮಣವಾಳ ಮಾಮುನಿಗಳೆಂಬ ಹಲವು ಆಚಾರ್ಯರುಗಳು ಅವತರಿಸಿ ನಮ್ಮ ಸಂಪ್ರದಾಯವನ್ನು ಬೆಳೆಸಿದರು. ಈ ಆಚಾರ್ಯ ಪರಂಪರೆಯು ಎಂಪೆರುಮಾನಾರ್ ಸ್ಥಾಪಿಸಿದ ೭೪ ಸಿಂಹಾಸನಾಧಿಪತಿಗಳ ಮೂಲಕವೂ, ಎಂಪೆರುಮಾನಾರ್ ಮತ್ತು ಮಣವಾಳ ಮಾಮುನಿಗಳು ಸ್ಥಾಪಿಸಿದ ಜೀಯರ್ ಮಠಗಳ ಮೂಲಕವೂ ಇಂದಿನ ವರೆಗೂ ಹರಿದು ಬಂದಿದೆ. ಈ ಆಚಾರ್ಯರುಗಳು ಅರುಳಿಚ್ಚೆಯಲ್ ಎಂಬ ದಿವ್ಯಪ್ರಬಂಧಗಳಿಗೆ ಅನೇಕ ವ್ಯಾಖ್ಯಾನಗಳನ್ನು ಬರೆದು ಆ ಪಾಶುರಗಳ ಅರ್ಥವಿಶೇಷಗಳನ್ನು ವಿಶದವಾಗಿ ವಿವರಿಸಿದ್ದಾರೆ. ಈ ವ್ಯಾಖ್ಯಾನಗಳೇ ಅವರೆಲ್ಲರೂ ನಮಗಾಗಿ ಬಿಟ್ಟು ಹೋಗಿರುವ ದೊಡ್ಡ ನಿಧಿ. ನಾವುಗಳು ಇದನ್ನವಲಂಬಿಸಿ, ಈ ವ್ಯಾಖ್ಯಾನಗಳನ್ನು ಓದಿ   , ಭಗವದನುಭವದಲ್ಲಿ ಮುಳುಗಿರುವುದಕ್ಕಾಗಿಯೇ ಅವರು ಈ ನಿಧಿಯನ್ನು ಬಿಟ್ಟು ಹೋಗಿದ್ದಾರೆ. ಮೇಲ್ಕಂಡ ಆಚಾರ್ಯರುಗಳೆಲ್ಲರೂ ಆಳ್ವಾರುಗಳ ವಿಶೇಷ ಕೃಪೆಯ ಮೂಲಕ ಆ ಪಾಶುರಗಳ ನಿಜಾರ್ಥಗಳನ್ನರಿತು ನಮಗೆಲ್ಲ ತಿಳಿಯುವಂತೆ ಅನೇಕ ವಿಧಗಳಲ್ಲಿ ವಿವರಿಸಿದ್ದಾರೆ.

ತಮ್ಮ ಉಪದೇಶ ರತ್ತಿನಮಾಲೈ ಎಂಬ ಕೃತಿಯಲ್ಲಿ ಮಣವಾಳ ಮಾಮುನಿಗಳು ಈ ಎಲ್ಲಾ ವ್ಯಾಖ್ಯಾನಗಳು ಇರುವುದರಿಂದಲೇ ನಮಗೆ ದಿವ್ಯಪ್ರಬಂಧಗಳ ನಿಜಾರ್ಥಗಳು ತಿಳಿಯಲು ಸಾಧ್ಯವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ವ್ಯಾಖ್ಯಾನಗಳಿಲ್ಲದೆ ಹೋಗಿದ್ದಲ್ಲಿ ನಮ್ಮ ದಿವ್ಯಪ್ರಬಂಧಗಳೂ ಇತರ ತಮಿಳು ಸಾಹಿತ್ಯದಂತೆ ಕೆಲವು ಜ್ಞಾನಿಗಳು ಮಾತ್ರವೇ ತಿಳಿಯುವ ಸಾಹಿತ್ಯವಾಗಿರುತ್ತಿತ್ತು. ನಮ್ಮ ಪೂರ್ವಾಚಾರ್ಯರುಗಳು ಆ ಪಾಶುರಗಳ ಸಂದೇಶಗಳನ್ನು ಯಥಾರ್ಥವಾಗಿ ತಿಳಿದಿದ್ದ ಕಾರಣ ಈ ಪ್ರಬಂಧಗಳನ್ನು ಮನೆಗಳಲ್ಲೂ ದೇವಾಲಯಗಳಲ್ಲೂ ನಿತ್ಯಾನುಸಂಧಾನದ (ನಿತ್ಯ ಪಠಣದ) ಭಾಗವಾಗಿಟ್ಟರು. ಇದನ್ನು ಪ್ರತ್ಯಕ್ಷವಾಗಿ ಕಾಣಲು ನಾವು ತಿರುವಲ್ಲಿಕ್ಕೇಣಿ ದಿವ್ಯದೇಶಕ್ಕೆ ಹೋಗಿ ನೋಡಬಹುದು. ಅಲ್ಲಿ ಪ್ರತಿ ಶುಕ್ರವಾರ ನಡೆಯುವ ಶಿರಿಯ ತಿರುಮಡಲ್ ಗೋಷ್ಠಿಯಲ್ಲಿ ಐದಾರು ವರ್ಷದ ಮಕ್ಕಳೂ ಇತರ ಹಿರಿಯರಿಗಿಂತಲೂ ಜೋರಾದ

ಧ್ವನಿಯಲ್ಲಿ ಪಾಶುರಗಳನ್ನು ಸೇವಿಸುವುದನ್ನು ನಾವಲ್ಲಿ ಕಾಣಬಹುದು. ಅಲ್ಲದೆ, ನಮಗೆಲ್ಲರಿಗೂ ತಿರುಪ್ಪಾವೈ ಚಿರಪರಿಚಿತ. ಮಾರ್ಗಳಿ (ಧನುರ್ಮಾಸ) ಮಾಸದಲ್ಲಿ ಮೂರ್ನಾಲ್ಕು ವರ್ಷದ ಮಕ್ಕಳೂ ಆಂಡಾಳ್ ರಚಿಸಿದ ಅದ್ಭುತವಾದ ತಿರುಪ್ಪಾವೈ ಪಾಶುರಗಳನ್ನು ಸುಮಧುರವಾಗಿ ಪಠಿಸುವುದನ್ನು ನಾವು ಎಲ್ಲಿಯೂ ಕಾಣಬಹುದು.

ಈ ರೀತಿಯಲ್ಲಿ ನಾವು ನಮ್ಮ ಗುರುಪರಂಪರೆಯ ಮುಖ್ಯತ್ತ್ವವನ್ನರಿತು ಇದರ ಮಹಿಮೆಯನ್ನು ದಿನವೂ ಆಸ್ವಾದಿಸಬಹುದು.

ನಮ್ಮ ಪೂರ್ವಾಚಾರ್ಯರುಗಳ ಬಗೆಗೆ ಇನ್ನೂ ಹೆಚ್ಚಿನ ವಿವರಗಳನ್ನು ವಿಭಿನ್ನ ಭಾಷೆಗಳಲ್ಲಿ ತಿಳಿಯಲು ಇಲ್ಲಿಗೆ ಭೇಟಿ ನೀಡಿ: http://acharyas.koyil.org

ಆಳ್ವಾರ್‌ಗಳ್ ವಾಳಿ, ಅರುಳಿಚ್ಚೆಯಲ್ ವಾಳಿ, ತಾಳ್ವಾದುಮಿಲ್ ಕುರವರ್ ತಾಮ್ ವಾಳಿ (ಆಳ್ವಾರುಗಳು ಚಿರಕಾಲವಿರಲಿ, ದಿವ್ಯಪ್ರಬಂಧಗಳು ಚಿರಕಾಲವಿರಲಿ, ಈ ದಿವ್ಯಪ್ರಬಂಧಗಳನ್ನು ಸ್ವಯಂ ಅನುಸಂಧಾನ ಮಾಡಿ ಇತರರಿಗೂ ಉಪದೇಶಿಸಿದ ನಮ್ಮ ಶ್ರೇಷ್ಠ ಆಚಾರ್ಯರುಗಳು ಚಿರಕಾಲವಿರಲಿ) – ಉಪದೇಶ ರತ್ತಿನಮಾಲೈ – ೩.

ಅಡಿಯೇನ್ ಶ್ರೀನಿವಾಸ ರಾಮಾನುಜ ದಾಸನ್

ಮೂಲ: http://ponnadi.blogspot.com/2015/12/simple-guide-to-srivaishnavam-guru-paramparai.html

ರಕ್ಷಿತ ಮಾಹಿತಿ:  https://srivaishnavagranthamskannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಬೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org